ಕನ್ನಡಪ್ರಭ ವಾರ್ತೆ ಬ್ಯಾಡಗಿ
ರಾಜ್ಯದಲ್ಲಿನ ಪಿಂಜಾರ ಸಮುದಾಯದ ಜನರಿಗೆ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಪ್ರವರ್ಗ-1ರ ಅಡಿಯಲ್ಲಿ ಜಾತಿ ಪ್ರಮಾಣಪತ್ರ ನೀಡುತ್ತಿಲ್ಲ. ಜಾತಿ ಕಾಲಂನಲ್ಲಿ ಕೆಲವರು ಮುಸ್ಲಿಂ ಅಥವಾ ಸುನ್ನಿ ಎಂದು ನಮೂದಿಸಿದ ಪರಿಣಾಮ ಸದರಿ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದು, ಪಿಂಜಾರ ಸಮುದಾಯಕ್ಕೆ ವರ್ಗ-1 ರಡಿಯಲ್ಲಿ ಪ್ರಮಾಣಪತ್ರ ನೀಡುವಂತೆ ಮಾಜಿ ಶಾಸಕ ಸುರೇಶಗೌಡ ಪಾಟೀಲ ಸರ್ಕಾರಕ್ಕೆ ಒತ್ತಾಯಿಸಿದರು.
ಪಟ್ಟಣದ ಎಸ್ಸೆಸ್ಸೆಪಿಎನ್ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಪಿಂಜಾರ್ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ಪಿಂಜಾರ ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿ ಪ್ರವರ್ಗ-1 ಸೇರಿಸಲಾಗಿದೆ. ಆದಾಗ್ಯೂ ಕೆಲವು ಕಡೆಗಳಲ್ಲಿ ಜಾತಿ ಪ್ರಮಾಣ ಪತ್ರಕ್ಕಾಗಿ ತೊಂದರೆ ನೀಡುತ್ತಿದ್ದು, ಸರ್ಕಾರದ ಆದೇಶವನ್ನು ಅಧಿಕಾರಿಗಳು ಗೌರವಿಸುವಂತೆ ಮನವಿ ಮಾಡಿದರು.
ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಪಿಂಜಾರ ಸಮಾಜದ ಪೂರ್ವಜರು ಯಾವುದೇ ಶೈಕ್ಷಣಿಕ ಅರ್ಹತೆ ಪಡೆದಿಲ್ಲ. ಹೀಗಾಗಿ ತಂದೆಯ ಜಾತಿ ಎಲ್ಲಿಯೂ ನಮೂದಾಗಿಲ್ಲ ಸದರಿ ಸಮುದಾಯಕ್ಕೆ ಶಾಶ್ವತ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಾತಿ ಕಾಲಂಗಳಲ್ಲಿ ಏನೇ ನಮೂದಿಸಿದ್ದರೂ, ಸಾಚಾರ್ ವರದಿಯಲ್ಲಿನ ಅಂಶಗಳನ್ನು ಪರಿಶೀಲಿಸಿ ಹಿಂದುಳಿದ ವರ್ಗಗಳ (ಒಬಿಸಿ) ಪ್ರವರ್ಗ-1ರ ಅಡಿಯಲ್ಲಿ ಜಾತಿ ಪ್ರಮಾಣಪತ್ರ ನೀಡುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದರು ಎಂದು ತಿಳಿಸಿದರು.
ಬಿಇಎಸ್ ಕಾಲೇಜು ಉಪನ್ಯಾಸಕ ಪ್ರಭುಲಿಂಗ ದೊಡ್ಮನಿ ಉಪನ್ಯಾಸ ನೀಡಿ, ಪಿಂಜಾರ ಪದದಿಂದ (ಹಿಂದಿಯಲ್ಲಿ ಜಿನ್ನಿಂಗ್) ಪಿಂಜಾರ ಎಂಬ ಹೆಸರು ಬಂದಿದ್ದು, ಸದರಿ ಸಮುದಾಯ ಮೊಘಲ್ ಚಕ್ರವರ್ತಿ ಔರಂಗಜೇಬ್ ಆಳ್ವಿಕೆಯಲ್ಲಿ ಮತಾಂತರಗೊಂಡು ಇಸ್ಲಾಂ ಧರ್ಮ ಸ್ವೀಕರಿಸಿದ್ದಾರೆ. ಹತ್ತಿಯಿಂದ ತಲೆದಿಂಬು ಹಾಗೂ ಹಾಸಿಗೆಗಳ ತಯಾರಿಕೆ ಮೂಲ ಉದ್ಯೋಗವಾಗಿದ್ದು, ಭಾರತ ಸೇರಿದಂತೆ ನೇಪಾಳ, ಪಾಕಿಸ್ತಾನ ಮತ್ತು ಬಾಂಗ್ಲಾದಲ್ಲಿದ್ದಾರೆ.
ಇವರಲ್ಲಿ ಬಹುತೇಕರು ಶೈಕ್ಷಣಿಕವಾಗಿ ಹಿಂದುಳಿದವರಾಗಿದ್ದು, ಅರೇಬಿಕ್ ಮತ್ತು ಉರ್ದು ಭಾಷೆಗಳಿಗಿಂತ ಸ್ಥಳೀಯ ಭಾಷೆಗಳನ್ನೇ ಹೆಚ್ಚು ಮಾತನಾಡುತ್ತಾರೆ. ಅಲ್ಲದೇ ಬಹುತೇಕ ಹಿಂದೂಗಳ ಹಬ್ಬದಾಚರಣೆಗಳನ್ನು ಸಹ ಇವರು ಆಚರಿಸುತ್ತಾರೆ ಎಂದರು. ಪಿಂಜಾರ ಸಮಾಜದ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಹಸನಸಾಬ್ ಮೈದೂರು ಆಯ್ಕೆಯಾಗಿದ್ದು ನಿಕಟಪೂರ್ವ ಅಧ್ಯಕ್ಷ ರಾಜಣ್ಣ ಕಳ್ಯಾಳ ಅಧಿಕಾರ ಹಸ್ತಾಂತರಿಸಿದರು.
ಮುಪ್ಪಿನೇಶ್ವರಮಠದ ಚನ್ನಮಲ್ಲಿಕಾರ್ಜುನ ಶ್ರೀ ಸಾನಿಧ್ಯ ವಹಿಸಿದ್ದರು. ತಹಸೀಲ್ದಾರ ಫಿರೋಜ್‌ಶಾ ಸೋಮನಕಟ್ಟಿ, ಪುರಸಭೆ ಸದಸ್ಯರಾದ ಬಸವರಾಜ ಛತ್ರದ, ಚಂದ್ರಣ್ಣ ಶೆಟ್ಟರ, ಮಾಜಿ ಸದಸ್ಯ ರಾಜಾಭಕ್ಷ ಕೂರಗುಂದ, ಮುನಾಫ್ ಎರೇಶೀಮಿ, ಮುಖ್ಯಾಧಿಕಾರಿ ವಿಯಕುಮಾರ ಹೊಳಿಯಪ್ಪಗೋಳ, ಪಿಂಜಾರ ರಾಜ್ಯ ಘಟಕದ ಉಪಾಧ್ಯಕ್ಷ ಜಿ.ಡಿ. ನದಾಫ್, ಪ್ರಧಾನ ಕಾರ್ಯದರ್ಶಿ ರಿಯಾಜ್ ಸಲೀಮ್ ನಾಗ್ತೆ, ಅಂಜುಮನ್-ಎ-ಇಸ್ಲಾಂ ಸಮಿತಿ ಅಧ್ಯಕ್ಷ ಡಾ. ಎ.ಎಂ. ಸೌದಾಗರ, ಉಪಾಧ್ಯಕ್ಷ ಅಬ್ದುಲಸಮ್ಮದ್ ಬೆಳವಿಗಿ, ಮುಖಂಡ ರಿಯಾಜ್ ನದಾಫ್ ಇತರರಿದ್ದರು.
08ಬಿವೈಡಿ5-ಬ್ಯಾಡಗಿ ಪಟ್ಟಣದ ಎಸ್ಸೆಸ್ಸೆಪಿಎನ್ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಪಿಂಜಾರ್ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.