ಶಿಗ್ಗಾಂವಿ-ಸವಣೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಜೆಡಿಎಸ್‌ಗೆ ಅವಕಾಶ ನೀಡುವಂತೆ ಜೆಡಿಎಸ್ ಹಾವೇರಿ ಘಟಕ ಮನವಿ ಮಾಡಿದೆ.
ಶಿಗ್ಗಾಂವಿ: ಶಿಗ್ಗಾಂವಿ-ಸವಣೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಜೆಡಿಎಸ್‌ಗೆ ಅವಕಾಶ ನೀಡುವಂತೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಮಾಡಲಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣವರ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಗದಗ, ಹಾವೇರಿ ಮತ್ತು ಧಾರವಾಡ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮಿಸಿದ್ದೇವೆ. ಶಿಗ್ಗಾಂವಿ ವಿಧಾನಸಭಾ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವಂತೆ ಈಗಾಗಲೇ ವಿನಂತಿಸಲಾಗಿದೆ. ಈ ಕುರಿತು ಕೇಂದ್ರ ಅಧಿವೇಶನ ಮುಗಿದ ಮೇಲೆ ತೀರ್ಮಾನ ಮಾಡೋಣ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ. ಯಾವುದೇ ಚುನಾವಣೆಗಳಾದರೂ ಮೈತ್ರಿ ಬಿಡುವುದಿಲ್ಲ ಎಂದು ಈಗಾಗಲೇ ದೇವೇಗೌಡ ಅವರೂ ಹೇಳಿದ್ದಾರೆ. ಇಲ್ಲಿ ಜೆಡಿಸ್‌ಗೆ ಬಿಟ್ಟುಕೊಡುವ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ತಂದು ಮನವಿ ಮಾಡಲಾಗುವುದು ಎಂದರು.
ಒಂದು ವೇಳೆ ಕೊಡದೇ ಇದ್ದರೂ ಬಿಜೆಪಿ ಅಭ್ಯರ್ಥಿ ಯಾರೇ ಆದರೂ ನಾವು ಬೆಂಬಲ ಸೂಚಿಸುತ್ತೇವೆ. ತಾಲೂಕಿನ ಉಪಚುನಾವಣೆಯಲ್ಲಿ ಜೆಡಿಎಸ್ ತಾಲೂಕಾಧ್ಯಕ್ಷ ಈರಣ್ಣ ನವಲಗುಂದ, ಜಿಲ್ಲಾ ಜೆಡಿಎಸ್‌ನ ರಾಜ್ ಪಠಾಣ್, ಸವಣೂರನ ಕತ್ತಲ್‌ಸಾಬ್ ಬಣಗಾರ ಅವರು ಜೆಡಿಎಸ್ ಮತ್ತು ಬಿಜೆಪಿಯ ಮೈತ್ರಿ ಅಭ್ಯರ್ಥಿಗಳಾಗಲು ಆಸಕ್ತಿ ತೋರಿದ್ದಾರೆ ಎಂದರು.
ಬೇಡ್ತಿ ನದಿಯನ್ನು ವರದಾ ನದಿಗೆ ಜೋಡಿಸುವಂತೆ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗೆ ತಾಲೂಕು ಜೆಡಿಎ ಮನವಿ ಮಾಡಿದೆ. ಬೇಡ್ತಿ ನದಿಯು ಉತ್ತರ ಕನ್ನಡ ಜಿಲ್ಲೆಯಲ್ಲಿ ಹುಟ್ಟಿದ್ದು, ಈ ನದಿಯನ್ನು ಹಾವೇರಿ ಜಿಲ್ಲೆಯಲ್ಲಿ ಹರಿಯುತ್ತಿರುವ ವರದಾ, ಧರ್ಮಾ ನದಿಗೆ ಜೋಡಣೆ ಮಾಡಿದರೆ ಈ ಭಾಗದ ಹತ್ತಾರು ತಾಲೂಕುಗಳ ರೈತರು ನೀರಾವರಿ ಯೋಜನೆಗೆ ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರು ಮತ್ತು ಕೆರೆಕಟ್ಟೆಗಳನ್ನು ತುಂಬಿಸಲು ಅನುಕೂಲವಾಗುತ್ತದೆ ಮತ್ತು ಬೋರ್‌ವೆಲ್‌ಗಳ ಅಂತರ್ಜಲ ಮಟ್ಟ ಹೆಚ್ಚುತ್ತದೆ. ಈ ವಿಷಯವಾಗಿ ಹಲವಾರು ವರ್ಷಗಳಿಂದ ರೈತರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರುತ್ತ ಬಂದಿದ್ದರೂ ಪ್ರಯೋಜನಾಗಿಲ್ಲ ಎಂದು ಮನವಿ ಪತ್ರ ನೀಡಿ ಒತ್ತಾಯಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.