ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನಿಷ್ಕಲ್ಮಶವಾದ ಮಕ್ಕಳ ಮನಸ್ಸಿನಲ್ಲಿ ವಿಭಿನ್ನ ಭಾವನೆಗಳಿರುತ್ತವೆ. ಅವುಗಳನ್ನು ವ್ಯಕ್ತಪಡಿಸಲು ಪಾಲಕರು, ಶಿಕ್ಷಕರು ಅವಕಾಶ ಕಲ್ಪಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಕಾರ್ಯದರ್ಶಿ ಡಾ.ಗೀತಾ ದಾನಶೆಟ್ಟಿ ಹೇಳಿದರು.ಇಲ್ಲಿನ 61ನೇ ಸೆಕ್ಟರ್‌ನಲ್ಲಿ ರಾಜಶೇಖರ ರಾಯನಗೌಡ ರಾಷ್ಟ್ರೀಯ ಸೇವಾ ಸಂಸ್ಥೆಯಡಿ ನಡೆಯುತ್ತಿರುವ ಪೋದ್ದಾರ ಜಂಬೋ ಕಿಡ್ಸ್ ಶಾಲೆ ನವನಗರದ ಡಾ.ಅಂಬೇಡ್ಕರ್ ಭವನದಲ್ಲಿ ನಡೆದ ಶಾಲೆಯ 16ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ಮಕ್ಕಳು ತಮ್ಮ ಮನಸ್ಸಿನಲ್ಲಿರುವ ವಿಷಯಗಳನ್ನು ನಿರ್ಭಯವಾಗಿ ವ್ಯಕ್ತಪಡಿಸುತ್ತವೆ. ಹಿರಿಯರು ಇದನ್ನು ಅರ್ಥೈಸಿಡಿಕೊಂಡು ಮಕ್ಕಳ ಬೆಳವಣಿಗೆಗೆ ಎಲ್ಲ ರೀತಿ ಪ್ರೋತ್ಸಾಹ ನೀಡಬೇಕು ಎಂದರು. ನಗರಸಭೆ ಉಪಾಧ್ಯಕ್ಷೆ ಶೋಭಾರಾವ್ ಮಾತನಾಡಿ, ಪ್ರತಿ ಮಗುವಿನಲ್ಲೂ ವಿಶಿಷ್ಟವಾದ ಪ್ರತಿಭೆ ಇದ್ದು, ಅದನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಮಕ್ಕಳ ನಡುವೆ ಹೋಲಿಕೆ ಮಾಡಬಾರದು ಎಂದರು. ಪೋದ್ದಾರಜಂಬೋಕಿಡ್ಸ್ ಮುಖ್ಯಸ್ಥರಾದ ರಶ್ಮಿ ಪಾಟೀಲ ಮಾತನಾಡಿದರು.
ಎಸ್.ಎ.ಹಳ್ಳೂರ, ಪೂನಂ ಬಸವರಾಜ, ಶೀಲಾ ಮೇಲ್ದಾಪೂರ, ನಿರ್ಮಲಾ ಜಿ, ಕಸ್ತೂರಿ ಅಂಬರೀಷ ಇದ್ದರು. ವಿಜಯಲಕ್ಷ್ಮೀ ನಿರೂಪಿಸಿ, ರುಕ್ಮಿಣಿ ಕುಂದರಗಿ ವಾರ್ಷಿಕ ವರದಿ ಓದಿದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪಾಲಕರು ನೃತ್ಯಪ್ರದರ್ಶಿಸಿ ಗಮನ ಸೆಳೆದರು.ಚಿಣ್ಣರರಿಗೆ ಸಸಿ ಬಹಮಾನ
ಸಿಟ್ಟು, ದುಃಖ, ಪ್ರೀತಿ, ಖುಷಿ, ಉತ್ಸಾಹ, ಧೈರ್ಯ, ಖಿನ್ನತೆ, ಶಾಂತಿ, ಸಂತಸ ಹೀಗೆ 9 ಭಾವನೆಗಳನ್ನು ವ್ಯಕ್ತಪಡಿಸುವ ಎಮೋಷನ್ ನೇಷನ್ ಎಂಬ ಪರಿಕಲ್ಪನೆಯಡಿ ಕಾರ್ಯಕ್ರಮ ನಡೆಯಿತು. ಈ ಎಲ್ಲ ಭಾವನೆಗಳನ್ನು ವ್ಯಕ್ತಪಡಿಸಲು ಮಕ್ಕಳಿಗೆ ಅವಕಾಶ ನೀಡುವುದು ಕಾರ್ಯಕ್ರಮದ ಉದ್ದೇಶವಾಗಿತ್ತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ 60 ಮಕ್ಕಳಿಗೆ ಸಸಿ ಬಹುಮಾನವಾಗಿ ವಿತರಿಸಲಾಯಿತು. ಪಾಲಕರ ಸಭೆ ನಡೆಸಿ ಮಕ್ಕಳಿಂದಲೇ ಈ ಸಸಿಗಳನ್ನು ಮನೆ ಸುತ್ತಮುತ್ತ ನೆಡಿಸುವಂತೆ ರಶ್ಮಿ ಪಾಟೀಲ ತಿಳಿಹೇಳಿದ್ದು ವಿಶೇಷವಾಗಿತ್ತು.