ಕನ್ನಡಪ್ರಭ ವಾರ್ತೆ ಶಿರಸಿ
ಮಕ್ಕಳಿಗೆ ಆಸ್ತಿ, ಸಂಪತ್ತು ಮಾಡುವ ಬದಲು ಅವರಿಗೆ ಸಂಸ್ಕಾರಯುತ ಯೋಗ್ಯ ಶಿಕ್ಷಣ ನೀಡುವುದು ಅವಶ್ಯ ಎಂದು ಧ.ಗ್ರಾ.ಯೋ ಉಡುಪಿ ಪ್ರಾದೇಶಿಕ ವಿಭಾಗದ ನಿರ್ದೇಶಕ ಆನಂದ ಸುವರ್ಣ ಹೇಳಿದರು.ಬುಧವಾರ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಿಸಿ ಟ್ರಸ್ಟ್ ಹಾಗೂ ಮಹಿಳಾ ಜ್ಞಾನ ವಿಕಾಸ ಆಶ್ರಯದಲ್ಲಿ ಹಮ್ಮಿಕೊಂಡ ಮಹಿಳಾ ವಿಚಾರಗೋಷ್ಠಿ ಮತ್ತು ಸಮಾವೇಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಸ್ಪರ್ಧಾತ್ಮಕ ದಿನದಲ್ಲಿ ಒಬ್ಬರನ್ನು ನೋಡಿ ಬದುಕಲು ಪ್ರಯತ್ನಿಸುತ್ತೇವೆ. ಆಸೆ ಬಂದಾಗ ವ್ಯಕ್ತಿಗಳ ಮಧ್ಯೆ, ಮನೆ, ಸಮಾಜದ ನಡುವೆ ಸ್ಪರ್ಧೆ ಏರ್ಪಡುತ್ತದೆ. ಸಮೃದ್ಧ ಜೀವನ ಎಲ್ಲರಿಗೂ ಅಪೇಕ್ಷೆಯಾಗಿರುತ್ತದೆ. ಸ್ವಹಾಯ ಸಂಘ ಮತ್ತು ಜ್ಞಾನ ವಿಕಾಸ ಕಾರ್ಯಕ್ರಮದ ಮೂಲಕ ಬದುಕಿನಲ್ಲಿ ವಿಶ್ವಾಸ ರೂಢಿಸಿಕೊಳ್ಳಬಹುದು. ಧರ್ಮಸ್ಥಳ ಸಂಘದಿಂದ ತಾಯಿ ತನ್ನ ಎಲ್ಲ ಬೇಡಿಕೆ ಈಡೇರಿಸಿಕೊಂಡು ಸ್ವಾಭಿಮಾನದಿಂದ ಬದುಕುತ್ತಿದ್ದಾಳೆ. ಸಂಘ ನನಗೆ ಬದುಕು ಕಟ್ಟಿಕೊಟ್ಟಿದೆ ಎಂಬ ಹೆಮ್ಮೆ ಇರಬೇಕು. ಆಗ ದೀರ್ಘಕಾಲದ ವರೆಗೆ ಸಂಘವನ್ನು ನಡೆಸಬಹುದು. ಸ್ವಾರ್ಥದ ಬದುಕಿನಲ್ಲಿ ಕುಂಟುಂಬ, ಮನಸ್ಸು ಛಿದ್ರವಾಗುತ್ತಿದೆ. ಮಹಿಳೆಗೆ ತನ್ನ ಸಮಸ್ಯೆ ಹೇಳಿಕೊಳ್ಳಲು ಯಾವುದೇ ಅವಕಾಶವಿಲ್ಲ. ಆದರೆ ಈಗ ಸ್ವಸಹಾಯ ಸಂಘ ಸಹಾಯ ಮಾಡುತ್ತದೆ ಎಂದರು.ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ ಅಧ್ಯಕ್ಷತೆ ವಹಿಸಿ ಸಾಂದರ್ಭಿಕ ಮಾತನಾಡಿದರು. ಜ್ಞಾನವಿಕಾಸ ಹಿರಿಯ ಸದಸ್ಯರನ್ನು ಸನ್ಮಾನಿಸಿ, ಗೌರವಿಸಲಾಯಿತು. ನೂತನವಾಗಿ ರಚನೆಗೊಂಡ ಕೇಂದ್ರಕ್ಕೆ ದಾಖಲಾತಿ ಹಸ್ತಾಂತರಿಸಲಾಯಿತು ಹಾಗೂ 2025-26ನೇ ಸಾಲಿನ ಉಚಿತ ಟೈಲರಿಂಗ್ ತರಬೇತಿ ಪಡೆದ ಸದಸ್ಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.ಶಿರಸಿ ವಿಭಾಗದ ಯೋಜನಾ ನಿರ್ದೇಶಕ ದಿನೇಶ ಎಂ., ಜಿಲ್ಲಾ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷೆ ಗೌರಿ ನಾಯ್ಕ, ಸದಸ್ಯೆ ಸಂಧ್ಯಾ ಕುರ್ಡೇಕರ, ಆರ್ಥಿಕ ಸಾಕ್ಷರತಾ ಕೇಂದ್ರದ ಮಾಬ್ಲೇಶ್ವರ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.ಮಹಿಳೆಯರ ಸಮೃದ್ಧಿಗಾಗಿ ಆರೋಗ್ಯ ಮತ್ತು ಉದ್ಯೋಗ ಕುರಿತು ಮಧುಕೇಶ್ವರ ಹೆಗಡೆ ವಿಚಾರಗೋಷ್ಠಿಯಲ್ಲಿ ಉಪನ್ಯಾಸ ನೀಡಿದರು. ಶಿರಸಿ ತಾಲೂಕಾ ಯೋಜನಾಧಿಕಾರಿ ರಾಘವೇಂದ್ರ ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಅರ್ಚನಾ ನಿರೂಪಿಸಿದರು. ಹರೀಶಿ ಭುವನೇಶ್ವರಿ ಕೇಂದ್ರದ ಸುಶೀಲಾ, ಇಟಗುಳಿ ದುರ್ಗಾ ಪರಮೇಶ್ವರಿ ಕೇಂದ್ರದ ನೇತ್ರಾವತಿ, ಉದಾಸಿ ನಗರದ ಜ್ಞಾನಜ್ಯೋತಿ ಕೇಂದ್ರದ ರೇಣುಕಾ ಅನಿಸಿಕೆ ವ್ಯಕ್ತಪಡಿಸಿದರು. ಜ್ಞಾನ ವಿಕಾಸದ ಸಮನ್ವಯಾಧಿಕಾರಿ ಮಲ್ಲಿಕಾ ವಂದಿಸಿದರು.