ಮಕ್ಕಳ ಕೈಗೆ ಮೊಬೈಲ್‌ಗಿಂತ ಪುಸ್ತಕ ನೀಡಿ: ಮಂಜಮ್ಮ ಜೋಗತಿ

KannadaprabhaNewsNetwork |  
Published : Oct 03, 2026, 02:15 AM IST
ಮಾತಾ ಮಂಜಮ್ಮ ಜೋಗತಿ ಕಾರ್ಯಕ್ರಮ ಉದ್ಘಾಟಿಸಿದರು | Kannada Prabha

ಸಾರಾಂಶ

ಮಕ್ಕಳಿಗೆ ಮೊಬೈಲ್ ಬಳಕೆ ಹೆಚ್ಚಾದಂತೆ ಓದುವ ಹವ್ಯಾಸ ಮತ್ತು ಸೃಜನಶೀಲ ಚಟುವಟಿಕೆಗಳಿಂದ ದೂರವಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

ಕೂಡ್ಲಿಗಿ: ಮಕ್ಕಳ ಕೈಗೆ ಮೊಬೈಲ್ ನೀಡುವ ಬದಲು ಪುಸ್ತಕ ನೀಡಿ, ಓದುವ ಹವ್ಯಾಸ ಬೆಳೆಸುವ ಮೂಲಕ ಅವರ ಭವಿಷ್ಯ ರೂಪಿಸಬೇಕು ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಂಜಮ್ಮ ಜೋಗತಿ ಹೇಳಿದರು.

ತಾಲೂಕಿನ ಟಿ.ಕಲ್ಲಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಶ್ರೀಗಂಗಾಪರಮೇಶ್ವರಿ ಗ್ರಾಮೀಣ ಹಾಗೂ ಕಲ್ಯಾಣ ಅಭಿವೃದ್ಧಿ ಸಂಘ ಗಜಾಪುರದಿಂದ ಆಯೋಜಿಸಿದ್ದ ನಮ್ಮ ನಡೆ ಶಾಲೆ ಕಡೆ ವಿಶೇಷ ಶಿಕ್ಷಣ ಆಂದೋಲನದ ಮರಳಿ ಬಾ ನಾಟಕದ 50ನೇ ಪ್ರದರ್ಶನದ ಸಂಭ್ರಮ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಕ್ಕಳಿಗೆ ಮೊಬೈಲ್ ಬಳಕೆ ಹೆಚ್ಚಾದಂತೆ ಓದುವ ಹವ್ಯಾಸ ಮತ್ತು ಸೃಜನಶೀಲ ಚಟುವಟಿಕೆಗಳಿಂದ ದೂರವಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಆದ್ದರಿಂದ ಪೋಷಕರು ಮಕ್ಕಳ ಕೈಗೆ ಮೊಬೈಲ್ ಬದಲಾಗಿ ಪತ್ರಿಕೆ, ವಚನ, ಶರಣರ ಸಾಹಿತ್ಯ ಹಾಗೂ ನಾಟಕಗಳ ಪುಸ್ತಕ ನೀಡಬೇಕು. ಓದುವ ಸಂಸ್ಕಾರ ಬಾಲ್ಯದಲ್ಲಿಯೇ ಬೆಳೆಸಬೇಕು ಎಂದು ಸಲಹೆ ನೀಡಿದರು.

ಮರಳಿ ಬಾ ನಾಟಕ ಮಕ್ಕಳಲ್ಲಿ ಚೈತನ್ಯ ಮೂಡಿಸುವುದರ ಜತೆಗೆ ಪೋಷಕರಿಗೂ ಉತ್ತಮ ಸಂದೇಶ ನೀಡುತ್ತಿದೆ. ರಂಗಭೂಮಿ ನಶಿಸುತ್ತಿದೆ ಎಂಬ ಮಾತು ಕೇಳಿಬರುತ್ತಿರುವ ಸಂದರ್ಭದಲ್ಲಿ ನಾಟಕದ 50ನೇ ಪ್ರದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿರುವುದು ಸಂತಸ ತಂದಿದೆ ಎಂದರು.

ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಕನ್ನಡ ಶಾಲೆಗಳಲ್ಲಿ ಓದಿಸಲು ಹೆಚ್ಚಿನ ಆದ್ಯತೆ ನೀಡಬೇಕು. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಜತೆಗೆ ಸಂಸ್ಕಾರ, ಕನ್ನಡ ಭಾಷೆ ಹಾಗೂ ನಮ್ಮ ನಾಡಿನ ಸಂಸ್ಕೃತಿಯ ಪರಿಚಯವೂ ದೊರೆಯುತ್ತದೆ. ಪ್ರಾಥಮಿಕ ಹಂತದಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸಿ, ನಂತರ ಅಗತ್ಯವಿದ್ದರೆ ಇತರ ಭಾಷೆಗಳ ಶಿಕ್ಷಣ ಪಡೆಯಬಹುದು. ತಾವು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದರೂ ಜಾನಪದ ಕಲೆ ಕಲಿತು ಜೀವನದಲ್ಲಿ ಹಲವು ಸಾಧನೆ ಮಾಡಲು ಸಾಧ್ಯವಾಯಿತು. ಶಿಕ್ಷಣದ ಜತೆಗೆ ಕಲೆ ಮತ್ತು ಸಾಹಿತ್ಯವೂ ವ್ಯಕ್ತಿಯ ಬದುಕನ್ನು ರೂಪಿಸುವ ಶಕ್ತಿ ಹೊಂದಿವೆ ಎಂದು ಹೇಳಿದರು.

ಈ ಕಾರ್ಯಕ್ರಮಕ್ಕೆ ಕೂಡ್ಲಿಗಿಯ ಹಿರೇಮಠದ ಪ್ರಶಾಂತ ಸಾಗರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ಮರಳಿ ಬಾ ನಾಟಕದ ರಚನೆ ಮಾಡಿದ ಭೀಮಣ್ಣ ಗಜಾಪುರ ನೆರವೇರಿಸಿದರು.

ಈ ಸಂದರ್ಭದಲ್ಲಿ ಗಂಗಾಸಿರಿ ಪ್ರಶಸ್ತಿಗಳನ್ನು ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಧಾನ ಮಾಡಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ತಾಯಕನಹಳ್ಳಿಯ ಶಿಕ್ಷಕ ಆಲೂರು ನಿಂಗಪ್ಪ, ಮಾಧ್ಯಮ ಕ್ಷೇತ್ರದಲ್ಲಿ ಸಂಜೆವಾಣಿ ಕೂಡ್ಲಿಗಿಯ ಬಿ. ನಾಗರಾಜ್, ಆರೋಗ್ಯ ಕ್ಷೇತ್ರದಲ್ಲಿ ಆಲೂರಿನ ಶಶಿಕಲಾ ಹಾಗೂ ಕಲಾಸೇವೆ ಕ್ಷೇತ್ರದಲ್ಲಿ ಓಬಳ ಶೆಟ್ಟಿಹಳ್ಳಿಯ ನುಂಕೇಶ್ ಮತ್ತು ಮಾಳೆಹಳ್ಳಿಯ ತಿಪ್ಪೇಶ್ ಸೇರಿದಂತೆ ಇತರರಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಚಂದ್ರಶೇಖರ್ ಪಿ, ಪಾಪನಾಯಕ ಮಾಜಿ ತಾಪಂ ಸದಸ್ಯರು ಹೂಡೇಂ, ವಿಶಾಲಾಕ್ಷಿ ರಾಜಣ್ಣ ಮಾಜಿ ತಾಪಂ ಉಪಾಧ್ಯಕ್ಷೆ ಗುಡೆಕೋಟೆ, ಶಿವು ನಾಯಕ ದೊರೆ ರಾಜ್ಯ ನಾಟಕ ಅಕಾಡೆಮಿ ಸದಸ್ಯ, ಎಸ್‌ಡಿಎಂಸಿ ರಾಜ್ಯ ಮೇಲುಸ್ತವರಿ ಸಮಿತಿಯ ಉಪಾಧ್ಯಕ್ಷ ಗುನ್ನಳ್ಳಿ ರಾಘವೇಂದ್ರ, ಬಣವಿಕಲ್ಲು ಎರಿಸ್ವಾಮಿ, ಉಮೇಶ್ ಬಾಬು ಮಠದ್, ಮುಖ್ಯ ಶಿಕ್ಷಕ ಕರಿಯಪ್ಪ, ತಿಪ್ಪೇಸ್ವಾಮಿ, ಎಸ್ಡಿಎಂಸಿ ಉಪಾಧ್ಯಕ್ಷ ಪ್ರಹ್ಲಾದ, ವೀರೇಶ್, ನಾಗರಾಜ್, ಗಂಗಮ್ಮ, ಶೃತಿ, ಮಲ್ಲಿಕಾರ್ಜುನ್, ಪ್ರಕಾಶ್, ಅಜಯ್, ಕಲ್ಲೇಶ್, ಭೀಮಣ್ಣ, ಬಸವರಾಜ್, ಶಿವಣ್ಣ, ಕರಿಬಸಪ್ಪ, ಲಲಿತ, ನಿರ್ಮಲ, ಕಮಲಮ್ಮ, ಹರೀಶ್ ಜಿಂಕೆ ನಾಟಕ ನಿರ್ದೇಶಕ ಸೇರಿದಂತೆ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು, ಗ್ರಾಮಸ್ಥರು ಹಾಗೂ ಕಲಾಭಿಮಾನಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವೈದ್ಯಕೀಯ ಕ್ಷೇತ್ರದಲ್ಲಿ ದೇಶಕ್ಕೆ ಜಿಲ್ಲೆ ಮಾದರಿ: ಡಾ. ಬೊಮ್ಮನಹಳ್ಳಿ
ಸಮಾಜದ ಎಲ್ಲ ಒಳಪಂಗಡಗಳ ಒಗ್ಗೂಡಿಸುವಿಕೆ ಮೊದಲ ಆದ್ಯತೆ: ನಿರಾಣಿ