ಬಂಡಲದಲ್ಲಿ ಶಿರಸಿಯಲ್ಲಿ ಹಿಂದೂ ಸಮ್ಮೇಳನ
ಕನ್ನಡಪ್ರಭ ವಾರ್ತೆ ಶಿರಸಿಮಕ್ಕಳಿಗೆ ಶಿಕ್ಷಣ ಅತ್ಯಗತ್ಯ. ಶಿಕ್ಷಣದೊಂದಿಗೆ ಸಂಸ್ಕಾರವನ್ನೂ ನೀಡಬೇಕು. ಸಂಸ್ಕಾರ ನೀಡುವಿಕೆಯಲ್ಲಿ ತಾಯಂದಿರ ಪಾತ್ರ ಅತಿ ಮುಖ್ಯವಾಗುತ್ತದೆ ಎಂದು ಮಿರ್ಜಾನಿನ ಆದಿಚುಂಚನಿಗಿರಿ ಶಾಖಾ ಮಠದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.
ಅವರು ಭಾನುವಾರ ತಾಲೂಕಿನ ಬಂಡಲದಲ್ಲಿ ಆಯೋಜಿಸಲಾಗಿದ್ದ ಹಿಂದೂ ಸಮ್ಮೇಳನದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಅಪ್ಪ ಅಮ್ಮ ಏನು ಮಾಡುತ್ತಾರೆಯೋ ಅದನ್ನು ನೋಡಿ ಮಕ್ಕಳು ಕಲಿಯುತ್ತಾರೆ. ಮಕ್ಕಳು ಎಂದಿಗೂ ಹೇಳಿದ್ದನ್ನು ಅನುಸರಿಸುವ ಬದಲು ನೋಡಿದ್ದನ್ನು ಅನುಸರಿಸುವುದು ಜಾಸ್ತಿ. ಮಕ್ಕಳ ಮುಂದೆ ಪಾಲಕರು ಶ್ರದ್ಧೆಯಿಂದ ಬದುಕಿ ತೋರಿಸಬೇಕು ಎಂದು ಹೇಳಿದರು. ಸನಾತನ ಸಂಸ್ಕೃತಿಯಲ್ಲಿ ವಿವಾಹ ಎಂದರೆ ಮನಸ್ಸುಗಳ ಕೂಡುವಿಕೆ. ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ವಿವಾಹದ ಅರ್ಥವೇ ಬೇರೆ. ನಾವು ಪಾಶ್ಚಿಮಾತ್ಯ ಪದ್ಧತಿಯ ವಿವಾಹ ಅಳವಡಿಸಿಕೊಳ್ಳುವುದರಿಂದ ಬದುಕು ಬರಡಾಗುತ್ತದೆ. ಜೀವನದಲ್ಲಿ ಎಷ್ಟೇ ಕಷ್ಟ ಕಾರ್ಪಣ್ಯ ಬಂದರೂ ದೇವರ ಪಾದಕ್ಕೆ ಅದನ್ನೆಲ್ಲ ಅರ್ಪಣೆ ಮಾಡಿ ಮಾರನೇ ದಿನ ಎಲ್ಲ ಮರೆಯುವ ಸಂಪ್ರದಾಯ ನಮ್ಮದು. ಈಗ ಕಾಲ ಬದಲಾಗಿದೆ. ಇಂದು ಮನೆಯ ದ್ವೇಷ, ವಿರೋಧಗಳನ್ನು ಅಕ್ಕ ಪಕ್ಕದ ಮನೆಯವರಿಗೆ ಮೊದಲು ಹೇಳುವ ಸಂಪ್ರದಾಯ ಬಂದಿದೆ. ಇದರಿಂದಾಗಿ ಗಂಡ-ಹೆಂಡತಿ ನಡುವೆ ಇನ್ನಷ್ಟು ಅಂತರವಾಗಿ ವಿಚ್ಛೇದನಕ್ಕೆ ದಾರಿ ಆಗುತ್ತದೆ. ನಮ್ಮ ನೋವು-ನಲಿವನ್ನು ಭಗವಂತನ ಪಾದಕ್ಕೆ ಸಲ್ಲಿಸಿದರೆ ಎಲ್ಲ ಕಷ್ಟಗಳೂ ದೂರ ಆಗುತ್ತವೆ ಎಂದರು.ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಕಾರ್ಯನಿರ್ವಾಹ ಶ್ರೀಕಾಂತ ಅಗಸಾಲ ದಿಕ್ಸೂಚಿ ಮಾತನಾಡಿ, ಮನುಷ್ಯ ಜೀವನದಲ್ಲಿ ಅತ್ಯಂತ ಶ್ರೇಷ್ಠ ಜನ ಹಿಂದೂಗಳಾಗಿದ್ದಾರೆ. ತಾನೊಬ್ಬನೇ ಅಲ್ಲ, ಸಮಸ್ತ ಸಮಷ್ಠಿ ಸುಖದಿಂದ ಬದುಕಲಿ ಎಂದು ಆಶಿಸುವವನು ಹಿಂದೂ. ನಮ್ಮ ಪೂರ್ವಜರು ಜಗತ್ತಿಗೇ ಒಳ್ಳೆಯದಾಗಲಿ ಎಂದು ತಮ್ಮ ಬದುಕಿನ ಮಾರ್ಗವನ್ನು ಆಯ್ದುಕೊಳ್ಳುತ್ತಿದ್ದರು. ಪ್ರತಿ ಜೀವಿಯಲ್ಲೂ ದೇವರನ್ನು ಕಾಣುವ ಸಂಪ್ರದಾಯ ನಮ್ಮದು. ಆದರೆ, ಹಿಂದೂಗಳನ್ನು ಒಡೆದು ಆಳುವ ನೀತಿ ಹಿಂದಿನಿಂದಲೂ ಬಂದಿದೆ. ಈ ರೀತಿ ಒಡೆಯುವ ಮೂಲಕ ಬ್ರಿಟಿಷರು ಇನ್ನೂ ನೂರು ವರ್ಷ ಆಳುವ ಹುನ್ನಾರ ನಡೆಸಿದ್ದರು. ಹಿಂದೂಗಳ ಆಚರಣೆ ಇಡೀ ದೇಶದಲ್ಲಿ ಭಿನ್ನತೆ ಇರಬಹುದು, ಆದರೆ ನಮ್ಮೆಲ್ಲರ ನಂಬಿಕೆ ಒಂದೇ. ನಮ್ಮ ಪೂರ್ವಜರು ಜಗತ್ತಿಗೆ ನೀಡಿದ ಕೊಡುಗೆ ಸದಾ ಕಾಲ ನೆನಪಿಡುವಂಥದ್ದು ಎಂದರು.
ಇದೇ ವೇಳೆ ನಾಟಿ ವೈದ್ಯರು ಹಾಗೂ ವಿವಿಧ ಕ್ಷೇತ್ರಗಳ ಸಾಧಕರಾದ ಲಕ್ಷ್ಮೀ ಗೌಡ ಕಳಕಾರ, ಹೇಮಾವತಿ ಗೌಡ ಬಡಗಿ, ಪಾರ್ವತಿ ಮರಾಠೆ, ಗಂಗಾ ಸೀತಾರಾಮ ಹೆಗಡೆ, ರಾಘವೇಂದ್ರ ಕೊಡಿಯಾ ಮತ್ತಿತರರನ್ನು ಸನ್ಮಾನಿಸಲಾಯಿತು.ಜಡೆ ಸಂಸ್ಥಾನ ಮಠದ ಶ್ರೀ ಡಾ. ಮಹಾಂತ ಸ್ವಾಮೀಜಿ, ಶ್ರೀ ಕ್ಷೇತ್ರ ಮಂಜುಗುಣಿಯ ಪ್ರಧಾನ ಅರ್ಚಕ ವೇ.ಮೂ. ಶ್ರೀನಿವಾಸ ಭಟ್ಟ, ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಭವ್ಯಾ ಮರಾಠಿ, ಬಂಡಲ ಗ್ರಾಪಂ ಅಧ್ಯಕ್ಷ ದೇವರಾಜ ಮರಾಠಿ, ಮಂಜುನಾಥ ಮರಾಠಿ ಹೊಸ್ಕೆರೆ ಮತ್ತಿತರರು ಉಪಸ್ಥಿತರಿದ್ದರು. ಸಂಚಾಲಕ ಸಂತೋಷ ಗೌಡರ್ ಸ್ವಾಗತಿಸಿದರು.