ಶಿರಹಟ್ಟಿ: ಮನೆಯೇ ಮೊದಲ ಪಾಠಶಾಲೆ. ತಾಯಿಯೇ ಮೊದಲ ಗುರು. ಮಗುವಿನ ಶಿಕ್ಷಣ ಮನೆಯಿಂದಲೇ ಆರಂಭವಾಗುತ್ತದೆ. ಉತ್ತಮ ಶಿಕ್ಷಣ, ಸಂಸ್ಕಾರದಿಂದ ಸಮಾಜದಲ್ಲಿ ಮಕ್ಕಳು ಉತ್ತಮ ವ್ಯಕ್ತಿಗಳಾಗುತ್ತಾರೆ. ಮನೆಯಲ್ಲಿ ಪೋಷಕರು ಮಕ್ಕಳಿಗೆ ಉತ್ತಮ ವಾತಾವರಣ ನಿರ್ಮಿಸಿಕೊಡಬೇಕು ಎಂದು ವಿಶ್ರಾಂತ ಉಪನಿರ್ದೇಶಕ ಐ.ಬಿ. ಬೆನಕೊಪ್ಪ ಹೇಳಿದರು.
ಮಕ್ಕಳಿಗೆ ಆಚಾರ, ವಿಚಾರ ಕಲಿಸಿ ಉತ್ತಮ ಸಂಸ್ಕಾರ ನೀಡುವುದರ ಜತೆಗೆ ಅಕ್ಷರಾಭ್ಯಾಸ ಮಾಡಲು ಒಳ್ಳೆಯ ವಾತಾವರಣ ಮನೆಯಲ್ಲಿ ನೀಡಬೇಕು ಎಂದು ಹೇಳಿದರು.
ಶಾಲೆಯಲ್ಲಿ ಮಕ್ಕಳು ಕಲಿಯುವುದಕ್ಕಿಂತ ಹೆಚ್ಚು ಮನೆ ಹಾಗೂ ಸಮಾಜದಿಂದ ಕಲಿಯುತ್ತವೆ. ಆದ್ದರಿಂದ ಉತ್ತಮ ನಡತೆ, ಸಂಸ್ಕಾರ, ಆಚಾರ, ವಿಚಾರ ಸಂಗತಿಗಳು ಸಿಗುವ ಹಾಗೇ ನೋಡಿಕೊಳ್ಳಬೇಕು. ಶಾಲೆಗೆ ಸೇರಿಸುವುದಷ್ಟೇ ತಮ್ಮ ಜವಾಬ್ದಾರಿ ಎಂದು ಅನೇಕ ಪೋಷಕರು ಭಾವಿಸಿದ್ದಾರೆ. ಇದು ತಪ್ಪು. ಮಕ್ಕಳ ಎಲ್ಲ ಚಟುವಟಿಕೆ ಗಮನಿಸಿ, ಸಕಾಲದಲ್ಲಿ ಅವರನ್ನು ತಿದ್ದಬೇಕಾಗಿರುವುದು ಪೋಷಕರ ಹೊಣೆಗಾರಿಕೆಯ ಭಾಗ ಎಂದು ಅಭಿಪ್ರಾಯಪಟ್ಟರು.ಮಕ್ಕಳನ್ನು ಉತ್ತಮ ಶಾಲೆಯಲ್ಲಿ ಓದಲು ದಾಖಲಿಸಿದರೆ ಸಾಲದು. ಸೂಕ್ತ ಮಾರ್ಗದರ್ಶನ ನೀಡುವುದರ ಜತೆಗೆ ಅವರ ಪ್ರತಿಭೆಗೆ ನೀರೆರೆಯಬೇಕು. ಮಕ್ಕಳ ಆಸಕ್ತಿಗೆ ಅನುಗುಣವಾಗಿ ಓದಿಸಬೇಕು. ಒಬ್ಬ ತಾಯಿ ಪ್ರಪಂಚ ನಿಬ್ಬೆರಗಾಗುವಂತೆ ಮಾಡುವ ಮನಸ್ಸನ್ನು ಮಕ್ಕಳ ಮೂಲಕ ತೋರಿಸಬಹುದು. ಸಿಸಿಎನ್ ಶಿಕ್ಷಣ ಸಂಸ್ಥೆ ವೈಜ್ಞಾನಿಕ ತಳಹದಿ, ದೇಶಿ ನೆಲೆಗಟ್ಟನ್ನು ಬಿಡದೇ ಸುಸಂಸ್ಕೃತ ಸಮಾಜ ಕಟ್ಟಲು ಪ್ರಯತ್ನಿಸುತ್ತಿದ್ದು, ಇಂದಿನ ವಿದ್ಯಾರ್ಥಿಗಳು ಸಂಸ್ಕಾರವಂತರಾಗಬೇಕು ಎಂದು ತಿಳಿಸಿದರು.
ಸಂಸ್ಕಾರವಿಲ್ಲದಿದ್ದರೆ ಮಕ್ಕಳು ಎಷ್ಟೇ ಶಿಕ್ಷಣ ಪಡೆದರೂ ವ್ಯರ್ಥವಾಗುತ್ತದೆ. ತಂದೆ-ತಾಯಿಗಳು ಮತ್ತು ಶಿಕ್ಷಕರು ಮಕ್ಕಳಿಗೆ ಮೊದಲು ಸಂಸ್ಕಾರ ಕಲಿಸಬೇಕು. ವಿದ್ಯೆ ಜತೆ ಸಂಸ್ಕಾರ ಬೆರೆತರೆ ಸಾಧನೆ ಹಾದಿ ಸುಗಮವಾಗುತ್ತದೆ. ಕಲಿಕೆಯಿಂದ ಮಾತ್ರ ಮನೆ, ಸಮಾಜ, ದೇಶ ಉದ್ಧಾರ ಮಾಡಲು ಸಾಧ್ಯವಾಗುತ್ತಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ತಂದೆ-ತಾಯಿಗಳ ಮುಖ್ಯ ಜವಾಬ್ದಾರಿಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಿಸಿಎನ್ ವಿದ್ಯಾ ಪ್ರಸಾರ ಸಂಸ್ಥೆ ಅಧ್ಯಕ್ಷ ಚಂದ್ರಕಾಂತ ನೂರಶೆಟ್ಟರ ಮಾತನಾಡಿ, ರಾಷ್ಟ್ರದ ನಿರ್ಮಾಣದಲ್ಲಿ ಬಹು ಮುಖ್ಯ ಪಾತ್ರ ವಹಿಸುವ, ಸಮಾಜಕ್ಕೆ ದಾರಿದೀಪವಾಗಿರುವ, ಗೌರವಯುತ ಸ್ಥಾನದಲ್ಲಿರುವ ಶಿಕ್ಷಕರು ಪ್ರಾಮಾಣಿಕ ಸೇವೆ ಮಾಡುವ ಮೂಲಕ ದಿಕ್ಕು ತಪ್ಪಿದ ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕು. ಜವಾಬ್ದಾರಿ ಅರಿತು ಸಂಸ್ಕೃತಿ, ಸಂಸ್ಕಾರ, ಸಭ್ಯ ಜೀವನ ಧರ್ಮದ ದಾರಿಯಲ್ಲಿ ಸಾಗಲು ಮಕ್ಕಳಿಗೆ ನೀತಿ ಹೇಳಿಕೊಡಬೇಕು ಎಂದರು.