ಬಡ ರೋಗಿಗಳಿಗೆ ಪೂರಕವಾಗಿ ಸ್ಪಂದಿಸಿ ಚಿಕಿತ್ಸೆ ನೀಡಿ: ಶಾಸಕ ಎಚ್.ಟಿ.ಮಂಜು

KannadaprabhaNewsNetwork |  
Published : Dec 29, 2023, 01:31 AM ISTUpdated : Dec 29, 2023, 01:32 AM IST
28ಕೆಎಂಎನ್ ಡಿ15ಕೆ.ಆರ್.ಪೇಟೆ ದುಂಡಶೆಟ್ಟಿ ಲಕ್ಷ್ಮಮ್ಮ ಸಾರ್ವಜನಿಕ  ರಕ್ಷಾ ಸಮಿತಿ ಸಭೆಯಲ್ಲಿ ಶಾಸಕ ಹೆಚ್.ಟಿ.ಮಂಜು ಮಾತನಾಡಿದರು. | Kannada Prabha

ಸಾರಾಂಶ

ತುರ್ತು ಸನ್ನಿವೇಶ ಹಾಗೂ ಸಿಜೇರಿಯನ್ ಹೊರತು ಪಡಿಸಿ ಎಲ್ಲ ರೀತಿಯ ಹೆರಿಗೆಗಳನ್ನು ಇಲ್ಲಿಯೇ ಮಾಡಬೇಕು. ಇಲ್ಲಿ ಸ್ಕ್ಯಾನಿಂಗ್ ಯಂತ್ರವಿದ್ದರೂ ರೇಡಿಯಾಲಜಿಸ್ಟ್ ಇಲ್ಲದ ಕಾರಣ ಸ್ಕ್ಯಾನಿಂಗ್ ಮಾಡಲಾಗುತ್ತಿಲ್ಲ. ಕೂಡಲೇ ರೇಡಿಯಾಲಜಿಸ್ಟ್ ನೇಮಕಕ್ಕೆ ಪತ್ರ ಬರೆದರೆ ಆರೋಗ್ಯ ಸಚಿವರ ಜೊತೆ ಮಾತನಾಡಿ ಕ್ರಮ ಕೈಗೊಳ್ಳುತ್ತೇನೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸಾರ್ವಜನಿಕ ಆಸ್ಪತ್ರೆಗೆ ಬರುವ ಬಡರೋಗಿಗಳಿಗೆ ಪೂರಕವಾಗಿ ಸ್ಪಂದಿಸಿ ಗುಣಮಟ್ಟದ ಚಿಕಿತ್ಸೆ ನೀಡಲು ವೈದ್ಯರು ಹಾಗೂ ಸಿಬ್ಬಂದಿ ಕೆಲಸ ಮಾಡಬೇಕು ಎಂದು ಶಾಸಕ ಎಚ್.ಟಿ.ಮಂಜು ಸೂಚಿಸಿದರು.

ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸಾರ್ವಜನಿಕ ರಕ್ಷಾ ಸಮಿತಿ ಸಭೆಯಲ್ಲಿ ಮಾತನಾಡಿ, ಸಾರ್ವಜನಿಕ ಆಸ್ಪತ್ರೆಗೆ ಬರುವ ಒಳ ಹಾಗೂ ಹೊರ ರೋಗಿಗಳ ನೋಂದಣಿ ಹಣದಲ್ಲಿ ಆಸ್ಪತ್ರೆ ಆದ್ಯತೆ ಮೇಲೆ ಅತಿ ತುರ್ತು ಕೆಲಸ ಮಾಡಬೇಕು. ಅಗತ್ಯ ಜೀವರಕ್ಷಕ ಔಷಧಿಗಳನ್ನು ಖರೀದಿಸಬೇಕು ಎಂದರು.

ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸಬೇಕು. ರೋಗಿಗಳಿಗೆ ನೀಡಲಾಗುವ ಬೆಡ್‌ಶೀಟ್‌ಗಳನ್ನು ಆಗಾಗ ಬದಲಿಸಿ, ಶೌಚಾಲಯ ಶುಚಿಯಾಗಿ ಇಟ್ಟುಕೊಳ್ಳಬೇಕು. ಸಿಬ್ಬಂದಿ ರೋಗಿಗಳೊಂದಿಗೆ ಉತ್ತಮವಾಗಿ ಸ್ಪಂದಿಸುವ ಕೆಲಸ ಮಾಡಬೇಕು ಎಂದರು.

ಜಿಎಂಎಸ್‌ನಿಂದ ಔಷಧಿಗಳ ಪೂರೈಕೆಯಲ್ಲಿ ವಿಳಂಬವಾಗುತ್ತಿದೆ. ಲಭ್ಯವಿರುವ ಹಣದಲ್ಲಿ ಅತಿತುರ್ತು ಔಷಧಿಗಳನ್ನು ಖರೀದಿಸಬೇಕು. ಆರ್ಥಿಕವಾಗಿ ಕೆಳಮಟ್ಟದಲ್ಲಿರುವವರು ಆಸ್ಪತ್ರೆಗೆ ಬರುತ್ತಾರೆ. ಅವರಿಗೆ ಗುಣಮಟ್ಟದ ಚಿಕಿತ್ಸೆ, ಒಳ್ಳೆಯ ಸ್ಪಂದನೆ ದೊರೆಯಬೇಕು ಎಂದರು.

ತುರ್ತು ಸನ್ನಿವೇಶ ಹಾಗೂ ಸಿಜೇರಿಯನ್ ಹೊರತು ಪಡಿಸಿ ಎಲ್ಲ ರೀತಿಯ ಹೆರಿಗೆಗಳನ್ನು ಇಲ್ಲಿಯೇ ಮಾಡಬೇಕು. ಇಲ್ಲಿ ಸ್ಕ್ಯಾನಿಂಗ್ ಯಂತ್ರವಿದ್ದರೂ ರೇಡಿಯಾಲಜಿಸ್ಟ್ ಇಲ್ಲದ ಕಾರಣ ಸ್ಕ್ಯಾನಿಂಗ್ ಮಾಡಲಾಗುತ್ತಿಲ್ಲ. ಕೂಡಲೇ ರೇಡಿಯಾಲಜಿಸ್ಟ್ ನೇಮಕಕ್ಕೆ ಪತ್ರ ಬರೆದರೆ ಆರೋಗ್ಯ ಸಚಿವರ ಜೊತೆ ಮಾತನಾಡಿ ಕ್ರಮ ಕೈಗೊಳ್ಳುತ್ತೇನೆ ಎಂದರು.

ರೋಗಿಗಳಿಗೆ ಗುಣಮಟ್ಟದ ಊಟ ನೀಡಬೇಕು. ಆಸ್ಪತ್ರೆಯಲ್ಲಿ ನಾನ್ ಕ್ಲಿನಿಕಲ್ ಹಾಗೂ ಗ್ರೂಪ್ ಡಿ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಬೇಕು. ಇದೇ ವೇಳೆ ವೈದ್ಯ ಶಿವಕುಮಾರ್ ಸಭೆಗೆ ಹಾಜರಾಗದಿರುವುದಕ್ಕೆ ನೋಟಿಸ್ ನೀಡುವಂತೆ ಶಾಸಕರು ಸೂಚನೆ ನೀಡಿದರು.

ನಂತರ ಶಾಸಕರು ಆಕ್ಸಿಜನ್ ಘಟಕ, ಶವಾಗಾರದ ಸಮೀಪ ಕುಳಿತುಕೊಳ್ಳಲು ಸೌಲಭ್ಯ, ಕೋವಿಡ್ ವಾರ್ಡುಗಳು, ಐಸಿಯು ವಾರ್ಡುಗಳನ್ನು ವೀಕ್ಷಿಸಿದರು. ಕೋವಿಡ್ ಪರೀಕ್ಷೆ, ಔಷದೋಪಚಾರ, ಚಿಕಿತ್ಸೆಯ ಕೊರತೆಯಾಗದಂತೆ ಸಮರ್ಪಕ ನಿರ್ವಹಣೆ ಮಾಡಬೇಕು ಎಂದು ಆಡಳಿತ ವೈದ್ಯಾಧಿಕಾರಿ ಡಾ.ಶಶಿಧರ್ ಗೆ ಸೂಚಿಸಿದರು.

ಈ ವೇಳೆ ಆಡಳಿತ ವೈದ್ಯಾಧಿಕಾರಿ ಡಾ.ಶಶಿಧರ್, ರಕ್ಷಾ ಸಮಿತಿ ಸದಸ್ಯರಾದ ರವಿಕುಮಾರ್, ಕಲ್ಪನಾಬಾಲು, ರಾಘವೇಂದ್ರ, ರೇಖಾಲೋಕೇಶ್, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಕಾಂತರಾಜು, ತಾಲೂಕು ಆರೋಗ್ಯಾಧಿಕಾರಿ ಡಾ.ಅಜಿತ್, ಪಟ್ಟಣ ಠಾಣೆ ಪೋಲಿಸ್ ನಿರೀಕ್ಷಕಿ ಸುಮಾರಾಣಿ, ಬಿಇಓ ಸೀತಾರಾಮು, ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಮು, ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ಶಾಸಕರ ಆಪ್ತಸಹಾಯಕ ಪ್ರತಾಪ್ ಸೇರಿದಂತೆ ಹಲವರಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ