ಬಳ್ಳಾರಿ: ನಗರದ ರಾಘವೇಂದ್ರ ಕಾಲನಿ ಬಳಿಯ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ 41ನೇ ಮಂಡಲಪೂಜಾ ಕಾರ್ಯಕ್ರಮ ಜರುಗಿತು.
ದೇಗುಲದಲ್ಲಿ ಬೆಳಗ್ಗೆಯಿಂದಲೇ ವಿವಿಧ ಪೂಜಾ ವಿಧಿ ವಿಧಾನಗಳು ನಡೆದವು. ಬೆಳಗ್ಗೆ 6 ಗಂಟೆಗೆ ಧ್ವಜಾರೋಹಣ ಬಳಿಕ, ಪಂಚಲೋಹದಲ್ಲಿ ನಿರ್ಮಿಸಿರುವ ಅಯ್ಯಪ್ಪನ ಮೂರ್ತಿಗೆ ದ್ರವಾಭಿಷೇಕ ನಡೆಯಿತು. ನಂತರದಲ್ಲಿ ಗಣಪತಿಹೋಮ, ಮೃತ್ಯುಂಜಯಹೋಮ, ನವಗ್ರಹಹೋಮ, ಅಯ್ಯಪ್ಪಸ್ವಾಮಿಹೋಮ, ಸುದರ್ಶನ ಹೋಮ ಹಾಗೂ ಶಿವರುದ್ರಾಭಿಷೇಕದ ಪೂಜಾ ವಿಧಾನದ ನಂತರ ಅಯ್ಯಪ್ಪನಿಗೆ ಮಹಾಮಂಗಳಾರತಿ ನಡೆಯಿತು. ನಂತರ ರಂಗಸ್ವಾಮಿ ಮತ್ತು ತಂಡದಿಂದ ಅಯ್ಯಪ್ಪಸ್ವಾಮಿಗೆ ಭಜನೆ ಮಾಡಲಾಯಿತು.ಶಬರಿಮಲೈ ಅಯ್ಯಪ್ಪ ಟ್ರಸ್ಟ್‌ನ ಅಧ್ಯಕ್ಷ ಜಯಪ್ರಕಾಶ್ ಜೆ. ಗುಪ್ತ, ಉಪಾಧ್ಯಕ್ಷ ಕೆ. ದಿನೇಶ್ ಬಾಬು, ಕಾರ್ಯದರ್ಶಿ ಎಚ್.ಎಂ. ಮಂಜುನಾಥ, ಮಹೇಶ್ ಕುಮಾರ್, ವಿಟ್ಟಾ ಕೃಷ್ಣಕುಮಾರ್, ಡಿ. ವಿನೋದ್, ಕೆ.ಪಿ. ರಾಮರೆಡ್ಡಿ, ಕೆ. ಮುರಳಿಕೃಷ್ಣ, ಎ. ಮನೋಹರ್, ಯು. ಶ್ರೀನಿವಾಸ್ ಸೇರಿದಂತೆ ಟ್ರಸ್ಟ್‌ನ ಸದಸ್ಯರು ಹಾಗೂ ನೂರಾರು ಅಯ್ಯಪ್ಪ ಸ್ವಾಮಿಯ ಭಕ್ತರು ಮಂಡಲಪೂಜೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಏನಿದು ಮಂಡಲಪೂಜೆ?: ಅಯ್ಯಪ್ಪಸ್ವಾಮಿಯ ಭಕ್ತರು 41 ದಿನಗಳ ಕಠಿಣ ವ್ರತದ ನಿಯಮಗಳನ್ನು ಪಾಲಿಸಿ ಮಾಡುವ ವಿಶೇಷ ಪೂಜೆ ಇದಾಗಿದ್ದು, ಈ ದಿನಗಳಲ್ಲಿ ಭಕ್ತರು ಸಾತ್ವಿಕ ಆಹಾರವನ್ನು ಸೇವಿಸುತ್ತಾರೆ. 41 ದಿನಗಳ ಕಾಲ ಮಾಲಾಧಾರಿಗಳಾಗಿರುತ್ತಾರೆ. ಶಬರಿಮಲೆಯ ತದ್ರೂಪಿಯಂತಿರುವ ಬಳ್ಳಾರಿಯ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ನಡೆಯುವ ಪೂಜಾ ಕೈಂಕರ್ಯಗಳಲ್ಲಿ ನಗರದ ನೂರಾರು ಭಕ್ತರು ಶ್ರದ್ಧಾಭಕ್ತಿಯಿಂದ ಭಾಗವಹಿಸಿದ್ದರು. ಬೆಳಗ್ಗೆಯಿಂದಲೇ ಪೂಜಾ ಕಾರ್ಯಗಳಲ್ಲಿ ಪಾಲ್ಗೊಂಡು ಪುನೀತರಾದರು. ಮಂಡಲಪೂಜೆ ಹಿನ್ನೆಲೆಯಲ್ಲಿ ನಗರದ ವಿವಿಧೆಡೆಯಿಂದ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು. ಬೆಳಗ್ಗೆಯಿಂದಲೇ ದೇವಸ್ಥಾನದಲ್ಲಿ ಭಕ್ತರ ಹಿಂಡು ಕಂಡುಬಂತು. ಮಹಿಳೆಯರು, ಮಕ್ಕಳು ಸೇರಿದಂತೆ ಅಯ್ಯಪ್ಪನ ಭಕ್ತರು ದೇವರ ದರ್ಶನ ಪಡೆದರು.ಸಾಂಸ್ಕೃತಿಕ ಕಾರ್ಯಕ್ರಮ: ಸಂಜೆ 6 ಗಂಟೆಗೆ ದೇವಸ್ಥಾನ ಮೈದಾನದಲ್ಲಿ ಭಕ್ತಿಸಂಗೀತ ಕಾರ್ಯಕ್ರಮ ಜರುಗಿತು. ಜೀ- ವಾಹಿನಿ ಸರಿಗಮಪ ಖ್ಯಾತಿಯ ಸೃಷ್ಟಿ ಸುರೇಶ್ ಅವರು ಕನ್ನಡ, ತೆಲುಗು, ಮಲೆಯಾಳಂನ ಅಯ್ಯಪ್ಪಸ್ವಾಮಿ ಕುರಿತಾದ ಭಕ್ತಿಗೀತೆಗಳನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಭಕ್ತಿಸುಧೆಯಲ್ಲಿ ತೇಲಿಸಿದರು.
ಬುಡಾ ಮಾಜಿ ಅಧ್ಯಕ್ಷ ಮಾರುತಿ ಪ್ರಸಾದ್ ಚಾಲನೆ ನೀಡಿ ಮಾತನಾಡಿದರು. ಅಯ್ಯಪ್ಪಸ್ವಾಮಿ ದೇವಸ್ಥಾನ ಟ್ರಸ್ಟ್‌ನ ಜಯಪ್ರಕಾಶ್ ಜೆ. ಗುಪ್ತ, ಎಚ್.ಎಂ. ಮಂಜುನಾಥ್, ಹೇಮಾ ಮಂಜುನಾಥ್, ಮಹೇಶ್ ಕುಮಾರ್ ಉಪಸ್ಥಿತರಿದ್ದರು. ಗಾಯಕಿ ಸೃಷ್ಟಿ ಸುರೇಶ್ ಅವರನ್ನು ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಭಕ್ತಿಸಂಗೀತ ಕಾರ್ಯಕ್ರಮದ ಬಳಿಕ ದೇವಸ್ಥಾನದ 18 ಮೆಟ್ಟಿಲುಗಳ ಪಡಿಪೂಜೆ ನಡೆಯಿತು.