ಜಾತಿಗಣತಿಯಿಂದ ರಿಯಾಯಿತಿ ನೀಡಿ: ಅಂಗನವಾಡಿ ನೌಕರರಿಂದ ಧರಣಿ

KannadaprabhaNewsNetwork |  
Published : Sep 30, 2025, 12:02 AM IST
20ಅಂಗನವಾಡಿ | Kannada Prabha

ಸಾರಾಂಶ

ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯನ್ನು ಸಿ ದರ್ಜೆ ಮೇಲ್ಪಟ್ಟ ಸರ್ಕಾರಿ ನೌಕರರಿಂದ ಮಾಡಿಸಬೇಕು ಎಂಬ ಸ್ಪಷ್ಟ ಸುತ್ತೋಲೆ ಇದ್ದರೂ, ಉಡುಪಿ ಜಿಲ್ಲಾಡಳಿತ ಸಿ ದರ್ಜೆಯ ನೌಕರರಲ್ಲದ ಅಂಗನವಾಡಿ ನೌಕರರಿಂದ ಬಲವಂತವಾಗಿ ಮಾಡಿಸುತ್ತಿದೆ ಎಂದು ಆರೋಪಿಸಿ ಅಂಗನವಾಡಿ ನೌಕರರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಪ್ರಸ್ತುತ ನಡೆಯುತ್ತಿರುವ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯನ್ನು ಸಿ ದರ್ಜೆ ಮೇಲ್ಪಟ್ಟ ಸರ್ಕಾರಿ ನೌಕರರಿಂದ ಮಾಡಿಸಬೇಕು ಎಂಬ ಸ್ಪಷ್ಟ ಸುತ್ತೋಲೆ ಇದ್ದರೂ, ಉಡುಪಿ ಜಿಲ್ಲಾಡಳಿತ ಸಿ ದರ್ಜೆಯ ನೌಕರರಲ್ಲದ ಅಂಗನವಾಡಿ ನೌಕರರಿಂದ ಬಲವಂತವಾಗಿ ಮಾಡಿಸುತ್ತಿದೆ. ಇದು ಅವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಆದ್ದರಿಂದ ಅವರಿಗೆ ಈ ಸಮೀಕ್ಷೆಯಿಂದ ರಿಯಾಯಿತಿ ನೀಡಬೇಕು ಎಂದು ಆಗ್ರಹಿಸಿ ಅಂಗನವಾಡಿ ನೌಕರರು ಸೋಮವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.ಈ ಸಂದರ್ಭ ಮಾತನಾಡಿದ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಶೀಲಾ ನಾಡ, ಕೆಲವು ಅಂಗನವಾಡಿ ನೌಕರರು ಅನಾರೋಗ್ಯ ಇತ್ಯಾದಿ ಸಮಸ್ಯೆಗಳಿಂದ ಸಮೀಕ್ಷೆಯಿಂದ ರಿಯಾಯಿತಿ ಕೇಳಿದರೂ, ಅಧಿಕಾರಿಗಳು ಚುನಾವಣಾ ಆಯೋಗದ ಸುತ್ತೋಲೆಯನ್ನು ಕಡೆಗಣಿಸಿ, ಜನಪ್ರತಿನಿಧಿ ಕಾಯ್ದೆಯಡಿ ವಜಾ ಮಾಡುತ್ತೇವೆ, ಜೈಲಿಗೆ ಕಳುಹಿಸುತ್ತೇವೆ ಎಂದು ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಆರೋಪಿಸಿದರು.

ಅಲ್ಲದೇ ಅಂಗನವಾಡಿ ನೌಕರರಿಗೆ ತಾವಿರುವ ಸ್ಥಳೀಯ ಪ್ರದೇಶದಲ್ಲಿ ಸಮೀಕ್ಷೆ ನೀಡದೇ ದೂರದ ಗ್ರಾಮಗಳಿಗೆ ನಿಯೋಜಿಸಿದ್ದು, ಅವರಿಗೆ ಮಾನಸಿಕ, ದೈಹಿಕ ಹಿಂಸೆಗೆ ಕಾರಣವಾಗುತ್ತಿದೆ. ಸಮೀಕ್ಷೆಯ ಜೊತೆಗೆ ಎಫ್ಎಸ್ಆರ್, ಬಿಎಲ್ಓ ಕೆಲಸಗಳನ್ನು ಮಾಡಬೇಕು ಎಂದು ನೋಟಿಸ್ ನೀಡುತ್ತಿರುವುದು ಅಸಹನೀಯವಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೂಡ ಈ ಮಹಿಳೆಯರನ್ನು ಮಾನವೀಯತೆ ಇಲ್ಲದೆ ಗುಲಾಮರಂತೆ ದುಡಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭ ಧರಣಿ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ, ಮನವಿ ಸ್ವೀಕರಿಸಿ, ಜಿಲ್ಲೆಯಲ್ಲಿ ಸಿ ದರ್ಜೆಯ ನೌಕರರು ಜಿಲ್ಲೆಯಲ್ಲಿ ಕಡಿಮೆ ಇರುವುದರಿಂದ ಅಂಗನವಾಡಿ ನೌಕರರು ಸಮೀಕ್ಷೆಗೆ ಕೈಜೋಡಿಸುವುದು ಅನಿವಾರ್ಯ. ಇಲ್ಲವಾದಲ್ಲಿ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಧರಣಿಯಲ್ಲಿ ಅಂಗನವಾಡಿ ನೌಕರರ ಸಂಘ ಅಧ್ಯಕ್ಷೆ ಭಾರತಿ, ಪ್ರಮುಖರಾದ ಯಶೋಧ ಕೆ., ಆಶಾಲತಾ, ಶಾಂತ, ಪ್ರೇಮ, ಪ್ರಮೀಳಾ ಉಡುಪಿ, ಜಯಲಕ್ಷ್ಮೀ, ಸರೋಜಾ, ಸರೋಜಿನಿ ಬ್ರಹ್ಮಾವರ ಇದ್ದರು.ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಜಿಲ್ಲಾ ಅಧ್ಯಕ್ಷ ಶಶಿಧರ ಗೊಲ್ಲ, ಜಿಲ್ಲಾ ಕೋಶಾಧಿಕಾರಿ ಕವಿರಾಜ್ ಎಸ್. ಕಾಂಚನ್ ಧರಣಿ ನಿರತರಿಗೆ ಬೆಂಬಲ ನೀಡಿದರು.

PREV

Recommended Stories

ತಪ್ಪಿಸಬಹುದಿತ್ತೆ ಕರ್ನಾಟಕ ರಾಜ್ಯದ ಜನರ 'ಭೀಮಾ' ಕಣ್ಣೀರು!
ಊಟ ಆಮ್ಯಾಲೆ ಮಾಡ್ರಿ ಈಗ ಕುಂದ್ರರೋ..! - ದಿಂಗಾಲೇಶ್ವರ ಶ್ರೀ ಹರಸಾಹಸ