ಉಡುಪಿ ಪತ್ರಕರ್ತರಿಗೆ ಹೃದಯ ಆರೋಗ್ಯ, ತುರ್ತು ಆರೈಕೆ ತರಬೇತಿ

KannadaprabhaNewsNetwork |  
Published : Sep 30, 2025, 12:02 AM IST
29ಹೃದಯ - ಉಡುಪಿಯ ಪತ್ರಕರ್ತರಿಗೆ ಹೃದಯ ಆರೋಗ್ಯ - ತುರ್ತು ಆರೈಕೆ ಪ್ರಾತ್ಯಕ್ಷಿಕೆ | Kannada Prabha

ಸಾರಾಂಶ

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಶ್ರಯದಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ವತಿಯಿಂದ ವಿಶ್ವ ಹೃದಯ ದಿನದ ಪ್ರಯುಕ್ತ ಪತ್ರಕರ್ತರಿಗೆ ಹೃದಯ ಆರೋಗ್ಯ ಮತ್ತು ತುರ್ತು ಆರೈಕೆಯ ಕುರಿತ ಮೂಲಭೂತ ಜೀವ ರಕ್ಷಣೆ (ಬಿಎಲ್‌ಎಸ್) ಮತ್ತು ಹೃದಯ ಶ್ವಾಸಕೋಶದ ಕೃತಕ ಉಸಿರಾಟದ (ಸಿಪಿಆರ್) ತರಬೇತಿಯನ್ನು ಉಡುಪಿ ಪತ್ರಿಕಾ ಭವನದಲ್ಲಿ ಸೋಮವಾರ ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಉಡುಪಿ

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಶ್ರಯದಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ವತಿಯಿಂದ ವಿಶ್ವ ಹೃದಯ ದಿನದ ಪ್ರಯುಕ್ತ ಪತ್ರಕರ್ತರಿಗೆ ಹೃದಯ ಆರೋಗ್ಯ ಮತ್ತು ತುರ್ತು ಆರೈಕೆಯ ಕುರಿತ ಮೂಲಭೂತ ಜೀವ ರಕ್ಷಣೆ (ಬಿಎಲ್‌ಎಸ್) ಮತ್ತು ಹೃದಯ ಶ್ವಾಸಕೋಶದ ಕೃತಕ ಉಸಿರಾಟದ (ಸಿಪಿಆರ್) ತರಬೇತಿಯನ್ನು ಉಡುಪಿ ಪತ್ರಿಕಾ ಭವನದಲ್ಲಿ ಸೋಮವಾರ ಆಯೋಜಿಸಲಾಗಿತ್ತು.ಆಸ್ಪತ್ರೆಯ ಹೃದ್ರೋಗ ತಜ್ಞೆ ಡಾ.ಮೋನಿಕಾ ಜೆ. ಮಾತನಾಡಿ, ಯುವಜನತೆಯಲ್ಲಿ ಹೆಚ್ಚಾಗಿ ಹೃದಯಾಘಾತ ಸಂಭವಿಸಲು ಧೂಮಪಾನ, ಜೆನೆಟಿಕ್ ಹಾಗೂ ಒತ್ತಡವೇ ಮುಖ್ಯ ಕಾರಣ. ಕೊರೋನಾ ಸೇರಿದಂತೆ ಎಲ್ಲ ರೀತಿಯ ವೈರಸ್‌ಗಳು ಕೂಡ ಹೃದಯಕ್ಕೆ ಅಪಾಯ ತಂದೊಡ್ಡುತ್ತಿದೆ. ಕೊರೋನಾ ಲಸಿಕೆಯಿಂದ ಹೃದಯಾಘಾತಗಳು ಸಂಭವಿಸುವುದು ಈವರೆಗೆ ಸಾಬೀತಾಗಿಲ್ಲ ಎಂದು ತಿಳಿಸಿದರು.ಹೃದಯ ದಿನಾಚರಣೆಯ ಈ ವರ್ಷದ ಥೀಮ್ - ಡೋಂಟ್ ಮಿಸ್ ಎ ಬೀಟ್ (ಹೃದಯದ ಒಂದು ಬಡಿತವನ್ನು ತಪ್ಪಿಸಿಕೊಳ್ಳಬೇಡಿ) ಎಂಬುದಾಗಿದೆ. ಪ್ರತಿವರ್ಷ ಹೃದಯದ ತಪಾಸಣೆ ಮಾಡಬೇಕು. ದಿನದ ೨೪ ಗಂಟೆಗಳಲ್ಲಿ ಒಂದು ಗಂಟೆಯಾದರೂ ಆರೋಗ್ಯಕ್ಕಾಗಿ ಮೀಸಲಿಡಬೇಕು. ಇದರಲ್ಲಿ ವಾಕಿಂಗ್ ಹೆಚ್ಚು ಉತ್ತಮ. ಈ ಮೂಲಕ ಒತ್ತಡ ಕೂಡ ಕಡಿಮೆ ಮಾಡಬಹುದು ಎಂದು ಹೇಳಿದರು.ಆಸ್ಪತ್ರೆಯ ತುರ್ತು ವೈದ್ಯಕೀಯ ಸಲಹೆಗಾರ ಡಾ.ಆಕಾಶ್ ಕಲ್ಲೂರೆ ಮತ್ತು ಅವರ ತಂಡವು ಬಿಎಲ್‌ಎಸ್ ಮತ್ತು ಸಿಪಿಆರ್‌ನ ಪ್ರಾಯೋಗಿಕ ತರಬೇತಿಯನ್ನು ನೀಡಿ, ಹೃದಯಾಘಾತ, ರಸ್ತೆ ಸಂಚಾರ ಅಪಘಾತಗಳು ಮತ್ತು ಪಾರ್ಶ್ವವಾಯುಗಳಂತಹ ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ತಕ್ಷಣದ ಪ್ರತಿಕ್ರಿಯೆಯ ನಿರ್ಣಾಯಕ ಪಾತ್ರದ ಕುರಿತು ಮಾತನಾಡಿದರು.ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಮಾರ್ಕೆಟಿಂಗ್ ವ್ಯವಸ್ಥಾಪಕ ಮೋಹನ್ ಶೆಟ್ಟಿ ಮಾತನಾಡಿ, ವಿಶ್ವ ಹೃದಯ ದಿನದ ಪ್ರಯುಕ್ತ ಆಸ್ಪತ್ರೆಯು ಪೊಲೀಸ್ ಸಿಬ್ಬಂದಿ, ಆಂಬ್ಯುಲೆನ್ಸ್ ಚಾಲಕರು, ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಮೆಸ್ಕಾಂ ಉದ್ಯೋಗಿಗಳು ಸೇರಿದಂತೆ ವಿವಿಧ ಸಾರ್ವಜನಿಕ ಸೇವಾನಿರತರಿಗೆ ಇದೇ ರೀತಿಯ ತರಬೇತಿಗಳನ್ನು ನಡೆಸುತ್ತಿದೆ ಎಂದು ತಿಳಿಸಿದರು.ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಪ್ರಧಾನ ಕಾರ್ಯದರ್ಶಿ ನಜೀರ್ ಪೊಲ್ಯ, ಖಜಾಂಚಿ ಉಮೇಶ್ ಮಾರ್ಪಳ್ಳಿ ಉಪಸ್ಥಿತರಿದ್ದರು. ಕಾರ್ಯದರ್ಶಿ ರಹೀಂ ಉಜಿರೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಭಾಗವಾಗಿ ಪತ್ರಕರ್ತರಿಗೆ ಉಚಿತ ಬಿಪಿ ತಪಾಸಣೆ, ರಕ್ತ ಪರೀಕ್ಷೆ ಮತ್ತು ಇಸಿಜಿ ತಪಾಸಣೆಗಳನ್ನು ನಡೆಸಲಾಯಿತು.

PREV

Recommended Stories

ತಪ್ಪಿಸಬಹುದಿತ್ತೆ ಕರ್ನಾಟಕ ರಾಜ್ಯದ ಜನರ 'ಭೀಮಾ' ಕಣ್ಣೀರು!
ಊಟ ಆಮ್ಯಾಲೆ ಮಾಡ್ರಿ ಈಗ ಕುಂದ್ರರೋ..! - ದಿಂಗಾಲೇಶ್ವರ ಶ್ರೀ ಹರಸಾಹಸ