ಶಿರಸಿ: ರೈತರ ಸಾಲಮನ್ನಾ, ಬರಗಾಲ ಪರಿಹಾರ ಹಾಗೂ ಬೆಳೆ ವಿಮೆ ರೈತರ ಖಾತೆಗೆ ಜಮಾ ಮಾಡಲು ಒತ್ತಾಯಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ನೂರಾರು ರೈತರು ತಾಲೂಕಿನ ಬದನಗೋಡದಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದರು.ಬರಗಾಲದಿಂದ ರೈತ ಸಮುದಾಯ ಕಂಗೆಟ್ಟು ಕುಳಿತಿದ್ದು, ಬರಗಾಲ ಪೀಡಿತ ತಾಲೂಕು ಎಂದು ಘೋಷಣೆಯಾದರೂ ಪರಿಹಾರ ಬಂದಿಲ್ಲ. ಕಳೆದ 2 ವರ್ಷದಿಂದ ಬೆಳೆ ವಿಮೆ ರೈತರ ಖಾತೆಗೆ ಜಮಾ ಆಗಿಲ್ಲ. ರೈತರನ್ನು ಸರ್ಕಾರ ನಿರ್ಲಕ್ಷ್ಯಿಸಿದೆ ಎಂದು ಆರೋಪಿಸಿ ಸುಮಾರು ೩ ಗಂಟೆ ಶಿರಸಿ-ಹಾವೇರಿ ರಾಜ್ಯ ಹೆದ್ದಾರಿ ಬಂದ್ ಮಾಡಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಧಿಕ್ಕಾರ ಕೂಗಿದರು.
ರೈತ ಸಂಘದ ರಾಜ್ಯ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಕಿರವತ್ತಿ ಮಾತನಾಡಿ, ಭೀಕರ ಬರಗಾಲದಿಂದ ತತ್ತರಿಸಿರುವ ತಾಲೂಕಿನಲ್ಲಿ ರೈತರ ಸ್ಥಿತಿ ಗಂಭೀರವಾಗಿದ್ದು, ಇಂತಹ ಸಮಯದಲ್ಲಿ ರೈತರನ್ನು ಸರ್ಕಾರ ಮರೆತಿದೆ ಎಂದು ಆರೋಪಿಸಿದರು.ಕಸ್ತೂರಿ ರಂಗನ್ ವರದಿಯಲ್ಲಿ ಶಿರಸಿ ತಾಲೂಕಿನ ಹಳ್ಳಿಗಳು ಸೇರ್ಪಡೆಯಾಗಿದ್ದು, ಅದನ್ನು ಕೃಷಿಕರ ಪರವಾಗಿರುವಂತೆ ಸರಿಪಡಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಎಲ್ಲ ವರ್ಗದ ರೈತರಿಗೂ ಅವಕಾಶ ನೀಡಬೇಕು. ಖರೀದಿ ಕೇಂದ್ರಗಳನ್ನು ಕಾಯಂ ಆಗಿ ದಾಸನಕೊಪ್ಪದಲ್ಲಿ ತೆರೆಯುವಂತಾಗಬೇಕು. ಬದನಗೋಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಾಯಂ ವೈದ್ಯರನ್ನು ನೇಮಿಸಬೇಕು ಎಂದು ಹೇಳಿದರು.
ತಾಲೂಕಾಧ್ಯಕ್ಷ ಸತೀಶ ನಾಯ್ಕ ಮಾತನಾಡಿ, 2 ವರ್ಷವಾದರೂ ರೈತರಿಗೆ ವಿಮೆ ಮೊತ್ತ ಬಂದಿಲ್ಲ. ಜನಪ್ರತಿನಿಧಿಗಳು ರೈತರ ಕಷ್ಟಕ್ಕೆ ನೆರವಾಗುತ್ತಿಲ್ಲ. ಒಂದು ವಾರದೊಳಗೆ ಬರಗಾಲದ ಪರಿಹಾರ ಮತ್ತು ಬೆಳೆ ವಿಮಾ ಮೊತ್ತ ರೈತರ ಖಾತೆಗೆ ಜಮಾ ಆಗಬೇಕು. ಇಲ್ಲವಾದಲ್ಲಿ ಮತ್ತೆ ಬೀದಿಗಳಿದು ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.ರೈತ ಮುಖಂಡ ಪ್ರಮೋದ ಜಕಲಣ್ಣನವರ್ ಮಾತನಾಡಿ, ಬರ ಪರಿಹಾರ ಮತ್ತು ಬೆಳೆ ವಿಮೆ ಪರಿಹಾರ ದೊರೆಯದಿದ್ದರೆ ರೈತರಿಗೆ ಆತ್ಮಹತ್ಯೆ ಮಾರ್ಗವೊಂದೆ ಬಾಕಿ ಉಳಿಯಲಿದೆ. ಇದಕ್ಕೆ ಸರ್ಕಾರ ಅವಕಾಶ ನೀಡಬಾರದು ಎಂದರು.
ಧರ್ಮ ಜಲಾಶಯದ ನೀರು ಹಾವೇರಿ ಜಿಲ್ಲೆಗೆ ಹೋಗುತ್ತಿರುವುದನ್ನು ಸ್ಥಗಿತಗೊಳಿಸಬೇಕು. ಸಹಾಯಕ ಆಯುಕ್ತರು ತುರ್ತು ಸಭೆ ನಡೆಸಿ, ಧರ್ಮ ಜಲಾಶಯದಲ್ಲಿ ನೀರು ಸಂಗ್ರಹ ಇಟ್ಟುಕೊಂಡು ತಾಲೂಕಿನ ಪೂರ್ವ ಭಾಗದ ರೈತರಿಗೆ ಕುಡಿಯುವ ನೀರು ಪೂರೈಸಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ಜಾಕೀರ್ ಹುಸೇನ್, ತಾಲೂಕು ಕಾರ್ಯದರ್ಶಿ ನಾಗರಾಜ ಡಾಂಗೆ, ಸಹ ಕಾರ್ಯದರ್ಶಿ ನವೀನ್ ಜಡೆದರ್, ತಾಲೂಕು ಉಪಾಧ್ಯಕ್ಷ ಹಾಲಪ್ಪ ಜಕಲಣ್ಣನವರ ಹಾಗೂ ನೂರಾರು ರೈತರು ಪಾಲ್ಗೊಂಡಿದ್ದರು.
ಕಾಟಾಚಾರಕ್ಕೆ ಜನತಾ ದರ್ಶನ ಕಾರ್ಯಕ್ರಮ: ೨೦ ದಿನಗಳ ಹಿಂದೆ ಬನವಾಸಿಯಲ್ಲಿ ಸರ್ಕಾರದ ವತಿಯಿಂದ ಜನತಾ ದರ್ಶನ ಹಮ್ಮಿಕೊಳ್ಳಲಾಗಿತ್ತು. ರೈತರ ಬೇಡಿಕೆ ಈಡೇರಿಕೆಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿತ್ತು. ರೈತರ ಸಮಸ್ಯೆಗೆ ಪರಿಹಾರ ನೀಡುತ್ತೇನೆ ಎಂದು ಭರವಸೆಯನ್ನೂ ನೀಡಿದ್ದರು. ಇಷ್ಟು ದಿನ ಕಳೆದರೂ, ಯಾರೂ ರೈತರ ನೆರವಿಗೆ ಬಂದಿಲ್ಲ. ಬರಗಾಲ ಪೀಡಿತ ತಾಲೂಕು ಎಂದು ಘೋಷಣೆಯಾದರೂ, ಕನಿಷ್ಠ ಸೌಜನ್ಯಕ್ಕಾದರೂ ರೈತರ ಅಳಲು ಕೇಳಲು ಜಿಲ್ಲಾ ಉಸ್ತುವಾರಿ ಸಚಿವರು ಶಿರಸಿ ಪೂರ್ವ ಭಾಗಕ್ಕೆ ಭೇಟಿ ನೀಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಮನೆಗೆ ತೆರಳಲಿ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರೈತರು ಆಕ್ರೋಶ ವ್ಯಕ್ತಪಡಿಸಿದರು.ಹೆದ್ದಾರಿಯಲ್ಲಿ ಊಟ ತಯಾರಿಸಲು ಮುಂದಾದ ರೈತರು: ರೈತರ ಬೇಡಿಕೆ ಈಡೇರಿಸಲು ಸಹಾಯಕ ಆಯುಕ್ತರು ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದ ರೈತರು, ಅಲ್ಲಿಯ ವರೆಗೆ ಹೆದ್ದಾರಿ ತೆರವುಗೊಳಿಸುವುದಿಲ್ಲ. ನಿರ್ದಿಷ್ಟ ದಿನಾಂಕ ನೀಡಿ, ಸಭೆ ನಡೆಸಿ, ರೈತರ ನೆರವಿಗೆ ಧಾವಿಸಬೇಕು. ಇಲ್ಲಿಯೇ ಊಟ ತಯಾರಿಸುತ್ತೇವೆ ಎಂದು ಹೇಳಿದಾಗ ಸ್ಥಳಕ್ಕಾಗಮಿಸಿ, ತಹಸೀಲ್ದಾರ್ ಶ್ರೀಧರ ಮುಂದಲಮನಿ, ರೈತರನ್ನು ಮನವೊಲಿಸಿ, ರೈತರ ಬೇಡಿಕೆಯನ್ನು ಮೇಲಧಿಕಾರಿಗಳ ಗಮನಕ್ಕೆ ತಂದು, ಸಭೆ ನಡೆಸಿ, ರೈತರಿಗೆ ನ್ಯಾಯ ದೊರಕಿಸುತ್ತೇನೆ ಎಂದು ಸಮಾಧಾನ ಪಡಿಸಿದಾಗ ರೈತರು ಪ್ರತಿಭಟನೆ ಮೊಟಕುಗೊಳಿಸಿದರು.