ಉತ್ತಮ ಸಂಸ್ಕಾರ ನೀಡಿ ಭವಿಷ್ಯ ರೂಪಿಸಿ

KannadaprabhaNewsNetwork |  
Published : Feb 27, 2026, 03:00 AM IST
26ಬಿಎಸ್ವಿ01- ಬಸವನಬಾಗೇವಾಡಿ ತಾಲೂಕಿನ ಹೂವಿನಹಿಪ್ಪರಗಿ ಗ್ರಾಮದ ಆಶೀರ್ವಾದ ಶಿಕ್ಷಣ ಸಂಸ್ಥೆಯ ಅಭಿವ್ಯಕ್ತಿ ಸಂಭ್ರಮ-2025-26 ಕಾರ್ಯಕ್ರಮ ಉದ್ಘಾಟಿಸಿದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮನಗೌಡ ಹಟ್ಟಿ ಮಾತನಾಡಿದರು. | Kannada Prabha

ಸಾರಾಂಶ

ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಜೊತೆಗೆ ಉತ್ತಮ ವಿದ್ಯಾವಂತರನ್ನಾಗಿ ಮಾಡುವ ಮೂಲಕ ಅವರ ಭವಿಷ್ಯ ರೂಪಿಸಬೇಕು ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮನಗೌಡ ಹಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವ ಜೊತೆಗೆ ಉತ್ತಮ ವಿದ್ಯಾವಂತರನ್ನಾಗಿ ಮಾಡುವ ಮೂಲಕ ಅವರ ಭವಿಷ್ಯ ರೂಪಿಸಬೇಕು ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮನಗೌಡ ಹಟ್ಟಿ ಹೇಳಿದರು.

ತಾಲೂಕಿನ ಹೂವಿನಹಿಪ್ಪರಗಿ ಗ್ರಾಮದ ಆಶೀರ್ವಾದ ಶಿಕ್ಷಣ ಸಂಸ್ಥಯ ಆಶೀರ್ವಾದ ಪಬ್ಲಿಕ್ ಸ್ಕೂಲ್ ಹಾಗೂ ಪರಿವರ್ತನ ವಿದ್ಯಾಮಂದಿರದ ಶಾಲಾ ವಾರ್ಷಿಕೋತ್ಸವ ಹಾಗೂ ಸನ್ಮಾನ ಸಮಾರಂಭದಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಅಭಿವ್ಯಕ್ತಿ ಸಂಭ್ರಮ-2025-26 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಒತ್ತಡದ ಜೀವನದಲ್ಲಿ ಪಾಲಕರು ತಮ್ಮ ಮಕ್ಕಳ ಕಡೆಗೆ ಸರಿಯಾದ ಗಮನ ಹರಿಸದೇ ಇರುವುದರಿಂದಾಗಿ ಮಕ್ಕಳು ಹಾದಿ ತಪ್ಪಿ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಮಕ್ಕಳು ದಾರಿ ತಪ್ಪಿದರೇ ಅವರನ್ನು ಪಾಲಕರು ಸರಿ ದಾರಿಗೆ ತರಲು ಸಾಹಸ ಮಾಡಬೇಕಾಗುತ್ತದೆ. ಅದಕ್ಕಾಗಿ ಮೊದಲಿನಿಂದಲೂ ಪಾಲಕರು ತಮ್ಮ ಮಕ್ಕಳ ಕಡೆಗೆ ಸದಾ ಗಮನ ಹರಿಸಬೇಕು. ಮನೆಯೇ ಮೊದಲ ಪಾಠ ಶಾಲೆಯಾಗಿರುವುದರಿಂದ ಪಾಲಕರು ಉತ್ತಮ ಮಾರ್ಗದರ್ಶಕರಾಗುವ ಅಗತ್ಯವಿದೆ. ಈ ಗ್ರಾಮದಲ್ಲಿರುವ ಆಶೀರ್ವಾದ ಶಿಕ್ಷಣ ಸಂಸ್ಥೆಯು ಉತ್ತಮ ಶಿಕ್ಷಣ, ಸಂಸ್ಕಾರ ನೀಡುತ್ತಿರುವುದು ಶ್ಲಾಘನೀಯ ಎಂದರು. ಮಡಿಕೇಶ್ವರ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ, ವಾಗ್ಮಿ ಬಸವರಾಜ ಹಂಚಲಿ ಮಾತನಾಡಿ, ಪಾಲಕರು ತಮ್ಮ ಮಕ್ಕಳ ಆಸಕ್ತಿಯ ಅನುಗುಣವಾದ ಶಿಕ್ಷಣವನ್ನು ಕೊಡುವುದು ತುಂಬಾ ಮುಖ್ಯವಾಗಿದೆ. ಮಕ್ಕಳಿಗೆ ಸದಾ ಪ್ರೋತ್ಸಾಹ, ಧೈರ್ಯ ತುಂಬುವ ಕೆಲಸವನ್ನು ಪಾಲಕರು ಮಾಡಬೇಕು. ಎಂದಿಗೂ ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರಬಾರದು. ದೊಡ್ಡ ಮನೆ ಇರದೇ ಹೋದರೂ ದೊಡ್ಡ ಕನಸು ಹೊಂದುವಂತೆ ಮಾಡಬೇಕು. ಯಾವುದೇ ವಿಶ್ವವಿದ್ಯಾಲಯ, ಶಾಲೆ ಕಲಿಸದೇ ಇರುವದನ್ನು ತಾಯಿಯಾದವಳು ತನ್ನ ಮಕ್ಕಳಿಗೆ ಕಲಿಸುವ ಶಕ್ತಿ ಹೊಂದಿದ್ದಾಳೆ. ಈ ನಿಟ್ಟಿಯಲ್ಲಿ ತಾಯಿಯಾದವರು ತಮ್ಮ ಮಕ್ಕಳಿಗೆ ಉತ್ತಮವಾದ ಸಂಸ್ಕಾರ ನೀಡುವ ಮೂಲಕ ಸಂಸ್ಕಾರಯುತ ಮಕ್ಕಳನ್ನು ನಾಡಿಗೆ ನೀಡಬೇಕು. ವಿದ್ಯಾರ್ಥಿಗಳು ನಟ-ನಟಿ, ಕ್ರೀಡಾಪಟುಗಳನ್ನು ತಮ್ಮ ಹೀರೋ ಅಂದುಕೊಳ್ಳದೇ ತಮಗೆ ಶಿಕ್ಷಣ ನೀಡುವ ತನ್ನ ತಂದೆ-ತಾಯಿಯರನ್ನೇ ತನ್ನ ಹೀರೋಗಳೆಂದು ಅರಿತುಕೊಂಡು ನಿರಂತರ ಅಧ್ಯಯನದಿಂದ ವಿದ್ಯಾವಂತರಾಗಬೇಕು. ಜೀವನದಲ್ಲಿ ಯಾವುದು ಅಸಾಧ್ಯ ಇಲ್ಲ ಎಂಬುವುದನ್ನು ಅರಿತು ತಮ್ಮ ಸಾಧನೆ ಕಡೆಗೆ ಗಮನ ಹರಿಸಬೇಕು ಎಂದರು.ಆಶೀರ್ವಾದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ವಿ.ಸಜ್ಜನ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವು ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆಯ ಆರಂಭಿಸಿ ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶ ಹೊಂದಿ 2012ರಲ್ಲಿ ಸಂಸ್ಥೆ ಆರಂಭಿಸಿದ್ದೇವೆ. ಕೇವಲ 70 ವಿದ್ಯಾರ್ಥಿಗಳಿಂದ ಆರಂಭವಾದ ನಮ್ಮ ಶಾಲೆಯು ಎಲ್ಲ ಪಾಲಕರು ಸಹಕಾರದಿಂದಾಗಿ ಇಂದು 500 ಮಕ್ಕಳು ನಮ್ಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ನಮ್ಮ ಶಿಕ್ಷಕರ ಶ್ರಮದಿಂದಾಗಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ನೈತಿಕ ಶಿಕ್ಷಣ ನೀಡಲಾಗುತ್ತಿದೆ.ಇಂದು ಶಾಲೆಯು ಎಲ್ಲ ಸೌಲಭ್ಯಗಳನ್ನು ಹೊಂದಿ ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಪ್ರಗತಿ ಸಾಧಿಸುವ ಆಶಯ ಹೊಂದಲಾಗಿದೆ ಎಂದರು.ದೇವರಹಿಪ್ಪರಗಿಯ ಅಡವೀಶ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಶಿಕ್ಷಣ ವ್ಯವಸ್ಥೆಯಲ್ಲಿ ಇಂದು ಬಹಳ ಕೊರತೆ ಕಾಣುತೇವೆ. ಈ ಭಾಗದಲ್ಲಿ ಅತ್ಯುತ್ತಮ ಸೌಲಭ್ಯಗಳನ್ನು ಒದಗಿಸುವ ಮೂಲಕ ಈ ಭಾಗದಲ್ಲಿ ಆಶೀರ್ವಾದ ಶಿಕ್ಷಣ ಸಂಸ್ಥೆಯು ಶಿಕ್ಷಣ ಕ್ರಾಂತಿ ಮಾಡುತ್ತಿರುವುದು ಶ್ಲಾಘನೀಯ. ಈ ಶಾಲೆಯಲ್ಲಿ ಕಲಿಕೆಯೊಂದಿಗೆ ಸಂಸ್ಕಾರಕ್ಕೂ ಆದ್ಯತೆ ನೀಡಿರುವುದು ಸಂತಸ.ಇಲ್ಲಿನ ವಿದ್ಯಾರ್ಥಿಗಳು ಉನ್ನತ ಸ್ಥಾನ ಗಳಿಸುತ್ತಿರುವುದು ಹೆಮ್ಮೆಯ ಸಂಗತಿ. ಇದೊಂದು ಸುಂದರವಾದ ಸಂಸ್ಥೆಯಾಗಿದೆ ಎಂದರು.ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ಬಸವರಾಜ ತಿಳಗೊಳ, ಶಿಕ್ಷಣ ಸಂಸ್ಥೆಯ ನಿರ್ದೇಶಕ ರಾಜಶೇಖರ ಸಜ್ಜನ, ಗ್ರಾಪಂ ಮಾಜಿ ಸದಸ್ಯ ಆನಂದ ಪತ್ತಾರ, ಬೀರೇಶ್ವರ ಬ್ಯಾಂಕಿನ ನಿರ್ದೇಶಕ ಮಲ್ಲಣ್ಣ ಅಣ್ಣಪ್ಪನವರ, ವಕೀಲ ಜಿ.ಬಿ.ಬಾಗೇವಾಡಿ, ಗ್ರಾಪಂ ಮಾಜಿ ಅಧ್ಯಕ್ಷ ಮಲ್ಲಣ್ಣ ಲಚ್ಯಾಣ, ಸಂಸ್ಥೆಯ ಆಡಳಿತಾಧಿಕಾರಿ ಬಿ.ಟಿ.ದೊಡಮನಿ ಇತರರು ಇದ್ದರು. ಮುಖ್ಯಗುರು ಎಚ್.ಪಿ.ಹೊಸೂರ ಸ್ವಾಗತಿಸಿದರು. ಗುರುರಾಜ ಚಟ್ಟೇರ,ಸ್ನೇಹಾ ಬಿ. ನಿರೂಪಿಸಿದರು. ಶಿವರಾಜ ಜಂಗಿ ವಂದಿಸಿದರು. ಇದೇ ಸಂದರ್ಭದಲ್ಲಿ ಶಾಲಾ ಮಟ್ಟದಲ್ಲಿ ಉತ್ತಮ ವಿದ್ಯಾರ್ಥಿಗಳನ್ನು, ವಿವಿಧ ವಸತಿ ಶಾಲೆಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ನಂತರ ಶಾಲಾ ವಿದ್ಯಾರ್ಥಿಗಳಿಂದ ಜರುಗಿದ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ಮನಸೂರೆಗೊಂಡವು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪೆರಿಯಶಾಂತಿ, ಅಡ್ಡಹೊಳೆಯಲ್ಲಿ ಆನೆ ದಾಟು ಕಾಮಗಾರಿ ಪೂರ್ಣ
ಶಿರೋಮಣಿ ಪ್ರಶಸ್ತಿಯಿಂದ ಸಿದ್ದಕಟ್ಟೆ ಸಹಕಾರ ಸಂಘದ ಹೆಸರು ರಾಜ್ಯಾದ್ಯಂತ ಪಸರಿಸಿದೆ: ಸಂದೇಶ್ ಶೆಟ್ಟಿ