ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಹಿಂದೂ ಸಂಗಮ ಆಯೋಜನ ಸಮಿತಿಯಿಂದ ತಾಕೇರಿ ಸಮುದಾಯಭವನದಲ್ಲಿ ಆಯೋಜಿಸಿದ್ದ ಕಿರಗಂದೂರು ಮಂಡಲ ಹಿಂದೂ ಸಂಗಮ ಕಾರ್‍ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಿದೇಶಿಯರು ಭಾರತದ ಸಂಪತ್ತು ಕೊಳ್ಳೆ ಹೊಡೆವುದರೊಂದಿಗೆ ಸಂಸ್ಕೃತಿ ಸಂಪ್ರದಾಯವನ್ನು ನಾಶ ಮಾಡಿ ಹೋದರು. ಇನ್ನಾದರೂ ಹಿಂದೂಗಳು ಒಂದಾಗಬೇಕು. ದೇವರು, ದೇವಸ್ಥಾನ, ಮಠಗಳ ಬಗ್ಗೆ ಗೌರವ, ನಂಬಿಕೆ ಇರಬೇಕು. ತಂದೆ ತಾಯಂದಿರು ಮಕ್ಕಳಿಗೆ ನೀತಿ ಪಾಠವನ್ನು ಹೇಳಿಕೊಡಬೇಕು. ಮಕ್ಕಳಿಗೆ ಹಿಂದೂ ಧರ್ಮ, ಸಂಸ್ಕೃತಿ ಬಗ್ಗೆ ಹೇಳಿಕೊಡಬೇಕು. ಮೊಬೈಲ್‌ಗಳಿಗೆ ದಾಸರಾಗಲು ಬಿಟ್ಟು ವಿದೇಶಗಳಲ್ಲಿ ಓದುವಂತೆ ಒತ್ತಡ ಹಾಕಿದರೆ, ಪೋಷಕರೇ ವೃದ್ಧಾಶ್ರಮಕ್ಕೆ ಸೇರಬೇಕಾಗುತ್ತದೆ. ಭಾರತದ ಶಿಕ್ಷಣ ಪವಿತ್ರವಾಗಿದೆ. ಇಲ್ಲಿಯೇ ಮಕ್ಕಳು ಬೆಳೆದು ಬದುಕಲು ಅವಕಾಶ ಮಾಡಿಕೊಡಿ ಎಂದು ತಿಳಿ ಹೇಳಿದರು. ನಿಜವಾದ ಮಾನವ ಧರ್ಮವೇ ಹಿಂದೂ ಧರ್ಮ, ಬದುಕಿದರೆ ನೆಮ್ಮದಿ ಸಿಗುತ್ತದೆ. ಧರ್ಮವನ್ನು ನಾವು ಕಾಪಾಡಿದರೆ ಧರ್ಮ ನಮ್ಮನ್ನು ಕಾಪಾಡುತ್ತದೆ ಎಂದು ಹೇಳಿದರು. ಕುಟುಂಬ ಪ್ರಬೋಧನ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ ಸುಬ್ರಾಯ ನಂದೋಡಿ ಮಾತನಾಡಿ, ಇಡೀ ಜಗತ್ತನ್ನು ಒಂದು ಗೂಡಿಸುವ ಶಕ್ತಿ ಭಾರತಕ್ಕಿದೆ. ಹಿಂದೂಗಳು ಒಗ್ಗಟ್ಟಾಗಿ, ಸಾಮರಸ್ಯದಿಂದ ಬದುಕಿದರೆ ಬಲಿಷ್ಠ ಭಾರತವನ್ನು ಕಟ್ಟಬಹುದು ಎಂದರು.ಭಾರತದ ಒಂದು ತುದಿಯಲ್ಲಿ ಹಿಮಾಲಯ ಪರ್ವತವಿದೆ. ಮೂರು ಕಡೆ ಸಮುದ್ರವಿದೆ. ಪ್ರಾಕೃತಿಕವಾಗಿ ರಕ್ಷಣಾತ್ಮಕ ದೇಶವಾಗಿದೆ. ಅತೀ ಹೆಚ್ಚು ನದಿಗಳು ದೇಶದೊಳಗೆ ಹರಿಯುತ್ತವೆ. ಸಮೃದ್ಧವಾದ ಜಲ ಸಂಪತ್ತು, ಖನಿಜ ಸಂಪತ್ತು ಯಥೇಚ್ಚವಾಗಿದೆ. ವೇದ, ಉಪನಿಷತ್ತುಗಳ ಜ್ಞಾನ ಸಂಪತ್ತು ದೇಶಕ್ಕಿದೆ. ಸ್ವಾತಂತ್ರ್ಯ ಸಿಕ್ಕಿ ಶತಮಾನೋತ್ಸವ ಅಚರಿಸಲು ಇನ್ನು ಎರಡು ದಶಕಗಳು ಮಾತ್ರ ಉಳಿದಿದೆ. ಅಷ್ಟರೊಳಗೆ ಪ್ರಪಂಚಕ್ಕೆ ಮಾದರಿ ರಾಷ್ಟ್ರವನ್ನು ನಾವೆಲ್ಲರೂ ಕಟ್ಟಬೇಕಿದೆ ಎಂದು ಹೇಳಿದರು. ಕಿರಗಂದೂರು ಮಂಡಲ ಅಧ್ಯಕ್ಷ ಎಚ್.ಪಿ. ಶಿವಕುಮಾರ್, ಕಾಫಿ ಬೆಳೆಗಾರ ಎಂ.ಪಿ. ಮುತ್ತಣ್ಣ, ಗೃಹಿಣಿ ವಿಮಲ ಕೃಷ್ಣಕಾಂತ್, ಆಯೋಜಕರಾದ ಅಮೃತ್, ಸುದೀರ್, ಪ್ರವೀಣ್ ಉಪಸ್ಥಿತರಿದ್ದರು. ಶಾಲಾ ಮಕ್ಕಳಿಂದ ಭರತ ನಾಟ್ಯ, ಯಕ್ಷಗಾನ ನೃತ್ಯ, ಜಾನಪದ ನೃತ್ಯ, ಭಗವದ್ಗೀತೆ ಪಠಣ ಗಮನ ಸೆಳೆಯಿತು. ಕಿರಗಂದೂರು ಅಂಗನವಾಡಿಯಿಂದ ಮಹಿಳೆಯರು ಕಲಸ ಹೊತ್ತು ಶೋಭಯಾತ್ರೆಯಲ್ಲಿ ಭಾಗವಹಿಸಿದ್ದರು.