ಶಿಗ್ಗಾಂವಿ: ಕುಲಪತಿಯಾಗಿ ಕಾರ್ಯನಿರ್ವಹಿಸಿದ ಅವಧಿಯಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯವನ್ನು ಶೈಕ್ಷಣಿಕ, ಸಂಶೋಧನೆ ಹಾಗೂ ಜಾನಪದ ಪರಂಪರೆಯ ಸಂರಕ್ಷಣೆಯ ಕ್ಷೇತ್ರದಲ್ಲಿ ಮತ್ತಷ್ಟು ಬಲಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ವಿಶ್ವವಿದ್ಯಾಲಯದ ಬೆಳವಣಿಗೆಯಲ್ಲಿ ಎಲ್ಲರ ಸಹಕಾರವೇ ನನ್ನ ದೊಡ್ಡ ಶಕ್ತಿ ಎಂದು ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ಹೇಳಿದರು.
ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ನೀಡಿದ ಸಹಕಾರವನ್ನು ಸದಾ ಸ್ಮರಿಸುತ್ತೇನೆ. ಜಾನಪದ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ನಿಟ್ಟಿನಲ್ಲಿ ಇನ್ನಷ್ಟು ಕಾರ್ಯಗಳು ಮುಂದುವರಿಯಬೇಕು. ಸಂಸ್ಥೆಯ ಹಿತವೇ ಎಲ್ಲರ ಪ್ರಮುಖ ಗುರಿಯಾಗಬೇಕು ಎಂದು ಅವರು ಹೇಳಿದರು.
ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಡಿ.ಬಿ. ನಾಯಕ ಮಾತನಾಡಿ, ಪ್ರೊ. ಟಿ.ಎಂ. ಭಾಸ್ಕರ್ ಅವರ ಆಡಳಿತದಲ್ಲಿ ವಿಶ್ವವಿದ್ಯಾಲಯ ಶೈಕ್ಷಣಿಕ ಹಾಗೂ ಆಡಳಿತಾತ್ಮಕವಾಗಿ ಹಲವು ಮಹತ್ವದ ಹೆಜ್ಜೆಗಳನ್ನು ಇಟ್ಟಿದೆ. ಅವರ ಸೇವೆ ಸಂಸ್ಥೆಯ ಬೆಳವಣಿಗೆಗೆ ಗಮನಾರ್ಹ ಕೊಡುಗೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಹಿರಿಯ ಸಾಹಿತಿ ಡಾ. ಸತೀಶ ಕುಲಕರ್ಣಿ ಮಾತನಾಡಿ, ಜಾನಪದ ಅಧ್ಯಯನ ಮತ್ತು ಸಂಶೋಧನೆಗೆ ವಿಶ್ವವಿದ್ಯಾಲಯದ ಪಾತ್ರ ಮಹತ್ವದ್ದಾಗಿದ್ದು, ಅದರ ವಿಸ್ತರಣೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ನೌಕರರ ಸಂಘದ ಅಧ್ಯಕ್ಷ ಡಾ. ವೆಂಕನಗೌಡ ಪಾಟೀಲ ಮಾತನಾಡಿ, ಸಮಾಚಿತ್ತ ಭಾವದ ಕುಲಪತಿ ಪ್ರೊ.ಟಿ.ಎಂ.ಭಾಸ್ಕರ್ ಅವರ ನಿವೃತ್ತ ಜೀವನ ಯಶಸ್ವಿಯಾಗಿರಲಿ ಎಂದು ಶುಭ ಹಾರೈಸಿದರು.
ಸಮಾರಂಭದಲ್ಲಿ ಲಲಿತಾ ಭಾಸ್ಕರ್, ನೌಕರರ ಸಂಘದ ಪದಾಧಿಕಾರಿಗಳಾದ ಡಾ. ಹುಲಗಪ್ಪ ನಾಯ್ಕರ್, ಡಾ.ಅರುಣಾಬಾಬು ಅಂಗಡಿ, ಶಂಕರಗೌಡ ಮಾಲಿಪಾಟೀಲ, ಸದಸ್ಯರಾದ ಡಾ.ಗಿರೇಗೌಡ ಅರಳಿಹಳ್ಳಿ, ಡಾ. ಬಸವರಾಜ ಸಿ, ಹನುಮಂತರಾಯಗೌಡ, ಗೇಮಸಿಂಗ್ ರಾಠೋಡ್, ರಾಕೇಶ ಮನ್ಪಡೆ ಸೇರಿದಂತೆ ಬೋಧಕ ಬೋಧಕೇತರ ಸಿಬ್ಬಂದಿಗಳಿದ್ದರು. ಡಾ.ಸುಮಂಗಲಾ ಅತ್ತಿಗೇರಿ, ಸ್ವಾಗತಿಸಿದರು. ರೇಣುಕಪ್ಪ ಸುಗ್ಗಿ ವಂದಿಸಿದರು. ಡಾ.ಶರೀಫ ಮಾಕಪ್ಪನವರ ಪ್ರಾರ್ಥಿಸಿದರು.