ಹಿಂದುಳಿದ ಜಾತಿಗಳಿಗೂ ಒಳಮೀಸಲು ಕೊಡಿ : ನಂಜುಂಡಿ

KannadaprabhaNewsNetwork |  
Published : Apr 25, 2026, 01:45 AM IST
Vishwakarma

ಸಾರಾಂಶ

ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಯ ಮಾದರಿಯಲ್ಲಿ ಹಿಂದುಳಿದ ವರ್ಗಗಳ 102 ಜಾತಿಗಳಲ್ಲಿ ಒಳ ಮೀಸಲಾತಿ ನೀಡುವಂತೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷ ಕೆ.ಪಿ.ನಂಜುಂಡಿ ವಿಶ್ವಕರ್ಮ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

  ಬೆಂಗಳೂರು :  ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಯ ಮಾದರಿಯಲ್ಲಿ ಹಿಂದುಳಿದ ವರ್ಗಗಳ 102 ಜಾತಿಗಳಲ್ಲಿ ಒಳ ಮೀಸಲಾತಿ ನೀಡುವಂತೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷ ಕೆ.ಪಿ.ನಂಜುಂಡಿ ವಿಶ್ವಕರ್ಮ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ರೇಸ್‌ಕೋರ್ಸ್‌ ರಸ್ತೆಯ ಗುರುರಾಜ ಕಲ್ಯಾಣ ಮಂಟಪದಲ್ಲಿ ಮಹಾಸಭಾದಿಂದ ಶುಕ್ರವಾರ ಆಯೋಜಿಸಿದ್ದ 3ನೇ ರಾಜ್ಯ ಮಟ್ಟದ ವಧು-ವರರ ಸಮಾವೇಶದಲ್ಲಿ ಮಾತನಾಡಿದರು.

ಇಂದು ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ನೀಡಲು ಸರ್ಕಾರ ಮುಂದಾಗಿದೆ. ಅದೇ ರೀತಿ ಹಿಂದುಳಿದ ವರ್ಗಗಳ 102 ಜಾತಿಗಳಲ್ಲಿ ಒಳ ಮೀಸಲಾತಿ ಜಾರಿಯಾಗಬೇಕು. ಏಕೆಂದರೆ ವಿಶ್ವಕರ್ಮರಿಗೆ ಮೀಸಲಾತಿ ಸಿಗುತ್ತಿಲ್ಲ. ರಾಜ್ಯದಲ್ಲಿ ಕುರುಬ ಸಮುದಾಯದ ನಂತರ ಎರಡನೇ ಸ್ಥಾನದಲ್ಲಿ ವಿಶ್ವಕರ್ಮರಿದ್ದಾರೆ. ದೇಶದಲ್ಲಿ ನಾವು 11 ಕೋಟಿ ಜನಸಂಖ್ಯೆಯಿದ್ದು, ರಾಜ್ಯದಲ್ಲಿ 40 ಲಕ್ಷ ಇದ್ದೇವೆ. ಆದರೆ ಸಮೀಕ್ಷೆಯಲ್ಲಿ 8 ಲಕ್ಷ ತೋರಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಚಿನ್ನ-ಬೆಳ್ಳಿ, ಮರ, ಕಬ್ಬಿಣ ಸೇರಿದಂತೆ ನಾವು ಐದು ಕಸುಬು ಮಾಡುವವರು ಒಂದಾಗಬೇಕು. 41 ಪಂಗಡಗಳಾಗಿ ನಮ್ಮನ್ನು ಗುರುತಿಸಿದ್ದಾರೆ. ಐದು ಕಸುಬು ಮಾಡುವವರ ನಡುವೆ ವಿವಾಹ ಸಂಬಂಧಗಳು ಉಂಟಾಗುತ್ತಿಲ್ಲ, ಇದರಿಂದ ಸಮಾಜ ಛಿದ್ರವಾಗುತ್ತಿದೆ. ಆದ್ದರಿಂದ ನಾವೆಲ್ಲಾ ಒಂದಾಗಬೇಕು. ಬ್ರಾಹ್ಮಣರಿಗಿಂತ ನಾವು ಮೇಲು, ಬ್ರಾಹ್ಮಣ ಜಾತಿಗೆ ಅಂಟಿಕೊಳ್ಳಬೇಡಿ ಎಂದು ಸಮುದಾಯದವರಿಗೆ ಮನವಿ ಮಾಡಿದರು.

ವರ್ಷಕ್ಕೆ 2 ವಧು-ವರರ ಸಮಾವೇಶ:

ಸಮುದಾಯದ ಹಿತದೃಷ್ಟಿಯಿಂದ ಇನ್ನು ಮುಂದೆ ವರ್ಷಕ್ಕೆ 2 ಬಾರಿ ಈ ರೀತಿ ಬೃಹತ್‌ ವಧು-ವರರ ಸಮಾವೇಶ ಆಯೋಜಿಸಲಾಗುವುದು. ಸೊಸೆಯನ್ನು ಮಗಳಾಗಿ ನೋಡಿ, ಅಳಿಯನನ್ನು ಮಗನಂತೆ ಕಾಣಿರಿ. ನಾವು ಸಂಬಂಧಗಳನ್ನು ಗಟ್ಟಿ ಮಾಡಿಕೊಳ್ಳಬೇಕು. ಸಾಮಾಜಿಕ ಸ್ಥಾನಮಾನ ಹಾಗೂ ರಾಜಕೀಯ ನ್ಯಾಯ ಸಿಗಬೇಕೆಂದರೆ ನಾವೆಲ್ಲರೂ ಒಂದಾಗಬೇಕು ಎಂದು ತಿಳಿಸಿದರು.

ಸಂಸದ ಜಿ.ಸಿ.ಚಂದ್ರಶೇಖರ್‌ ಮಾತನಾಡಿ, ಕೆ.ಪಿ.ನಂಜುಂಡಿ ಎಂದರೆ ಅದೊಂದು ಶಕ್ತಿ. ಯಾವುದರಲ್ಲೂ ಅವರು ರಾಜಿ ಮಾಡಿಕೊಳ್ಳದ ಸ್ವಾಭಿಮಾನಿ. ಹಣ, ಅಧಿಕಾರ ಬರುತ್ತದೆ, ಹೋಗುತ್ತದೆ. ನಂಜುಂಡಿ ಅವರು ಹಣ, ಅಧಿಕಾರದ ಹಿಂದೆ ಹೋದವರಲ್ಲ. ನಂಜುಂಡಿ ಅವರು ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿದ್ದು ಮುಂದಿನ ದಿನಗಳಲ್ಲಿ ಅವರಿಗೆ ಉಜ್ವಲ ಭವಿಷ್ಯವಿದೆ. ಇಂತಹ ವಧು-ವರರ ಸಮಾವೇಶಗಳಿಗೆ ಆದ್ಯತೆ ನೀಡಿದಾಗ ಸಮಾಜದ ಸಂಕಷ್ಟವೂ ಬಗೆಹರಿಯುತ್ತದೆ ಎಂದು ಅಭಿಪ್ರಾಯಪಟ್ಟರು.

ನೀಲಕಂಠ ಸ್ವಾಮೀಜಿ, ದೊಡ್ಡೇಂದ್ರ ಸ್ವಾಮೀಜಿ, ಗಣೇಶ ಸ್ವಾಮೀಜಿ, ನಾಗಮಾತೇಂದ್ರ ಸ್ವಾಮೀಜಿ, ವೃಷೇಂದ್ರ ಸ್ವಾಮೀಜಿ, ಉತ್ತಪ್ಪನಾಥ ಸ್ವಾಮೀಜಿ, ಪತ್ರಕರ್ತ ಚನ್ನೇಗೌಡ ಮತ್ತಿತರರು ಉಪಸ್ಥಿತರಿದ್ದರು.ವಿಶ್ವಕರ್ಮ ಸಮುದಾಯದ ಬೇಡಿಕೆಗಳು:

ಕಾಳಿಕಾಂಬ ದೇವಿ ದೇವಸ್ಥಾನದ ಅಭಿವೃದ್ಧಿಗೆ ಪ್ರಾಧಿಕಾರ ರಚಿಸಬೇಕು

ಸಿರಂಗಿ ಕ್ಷೇತ್ರದ ಕಾಳಿಕಾಂಬ ದೇವಿ ದೇವಸ್ಥಾನದ ಅಭಿವೃದ್ಧಿಗೆ ಪ್ರಾಧಿಕಾರ ರಚಿಸಬೇಕು. ಸಮುದಾಯದ ಕುಲಶಾಸ್ತ್ರೀಯ ಅಧ್ಯಯನದಲ್ಲಿ ಸಮಾಜಕ್ಕೆ ಮಾರಕವಾದ ವರದಿ ಸಲ್ಲಿಸಿದ್ದು, ಇದನ್ನು ತಿರಸ್ಕರಿಸಬೇಕು. ಮೈಸೂರು ವಿಶ್ವವಿದ್ಯಾಲಯ ಹೊರತುಪಡಿಸಿ ಬೇರೆ ವಿವಿಯಿಂದ ಕುಲಶಾಸ್ತ್ರೀಯ ಅಧ್ಯಯನ ನಡೆಸಲು ಸರ್ಕಾರ ಆದೇಶಿಸಬೇಕು. ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡಬೇಕು, ಜೊತೆಗೆ 3 ವರ್ಷಗಳ ಹಿಂದಿನ ಎಲ್ಲಾ ಸಾಲವನ್ನು ಮನ್ನಾ ಮಾಡಬೇಕು. ವರವಿ, ತಿಂಥಣಿ, ಲಿಂಗನಬಂಡಿ, ಗೋನಾಳ ಕ್ಷೇತ್ರಗಳ ಅಭಿವೃದ್ಧಿಗೆ ಪ್ರಾಧಿಕಾರ ರಚಿಸಬೇಕು ಎಂಬುದು ಸೇರಿ ಹಲವು ಬೇಡಿಕೆಗಳ ಮನವಿಯನ್ನು ಸಂಸದ ಜಿ.ಸಿ.ಚಂದ್ರಶೇಖರ್‌ ಅವರಿಗೆ ಸಲ್ಲಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಉತ್ತಮ ಸಂಸ್ಕಾರದಿಂದ ಮಕ್ಕಳ ಭವಿಷ್ಯ ಉಜ್ವಲ
ಬಸ್-ಲಾರಿ ನಡುವೆ ಭೀಕರ ಅಪಘಾತ: ಇಬ್ಬರ ಸಾವು