- ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯ, ಉಪವಾಸ ಸತ್ಯಾಗ್ರಹ
- - -ಕನ್ನಡಪ್ರಭ ವಾರ್ತೆ, ದಾವಣಗೆರೆ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಿಕೆ ಸೇರಿದಂತೆ ಎರಡೂವರೆ ದಶಕಗಳಿಂದ ನನೆಗುದಿಗೆ ಬಿದ್ದಿರುವ ಡಾ.ಸರೋಜಿನಿ ಮಹಿಷಿ ವರದಿ ಜಾರಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ನಗರದಲ್ಲಿ ಸೋಮವಾರ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಯಿತು.
ನಗರದ ಪಾಲಿಕೆ ಮುಂಭಾಗದಲ್ಲಿ ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ನೇತೃತ್ವದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವುದೂ ಸೇರಿದಂತೆ ವಿವಿಧ ಬೇಡಿಕೆ ಮುಂದಿಟ್ಟುಕೊಂಡು ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹಕ್ಕೆ ಕನ್ನಡಪರ ಸಂಘ- ಸಂಸ್ಥೆ, ಸಂಘಟನೆಗಳು, ಸಾರ್ವಜನಿಕರು, ಸಂಘಟನೆಗಳು ಬೆಂಬಲ ಸೂಚಿಸಿದವು.ಎಂ.ಎಸ್.ರಾಮೇಗೌಡ ಈ ಸಂದರ್ಭ ಮಾತನಾಡಿ, 25 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಡಾ.ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಬೇಕು. ಆಗಿನಿಂದಲೂ ವರದಿ ಜಾರಿಗಾಗಿ ನಿರಂತರ ಹೋರಾಟ ನಡೆಸಿದ್ದರೂ, ಆಳುವ ಸರ್ಕಾರಗಳು ಇಚ್ಛಾಶಕ್ತಿ, ಬದ್ಧತೆ ಪ್ರದರ್ಶಿಸಿಲ್ಲ. ಸರೋಜಿನಿ ಮಹಿಷಿ ವರದಿ ಸಮರ್ಪಕ ಗಿ ಜಾರಿಗೊಳ್ಳದ ಕಾರಣ ಕನ್ನಡದ ಯುವ ಸಮುದಾಯ ಉದ್ಯೋಗವಿಲ್ಲದೇ, ಅವಕಾಶ ವಂಚಿತರಾಗಿ ಬಾಳಬೇಕಾಗಿದೆ ಎಂದರು.
ಬೆಂಗಳೂರು ಸೇರಿದಂತೆ ರಾಜ್ಯದ ಮಹಾನಗರಗಳಲ್ಲಿ ವಲಸಿಗರ ಹಾವಳಿಯಿಂದಾಗಿ ಕನ್ನಡಿಗರ ಉದ್ಯೋಗಳು ಕೈತಪ್ಪುತ್ತಿವೆ. ಕೈಗಾರಿಕಾ ಉದ್ಯೋಗ ಸ್ಥಾಯಿ ಆದೇಶ ಕಾಯ್ದೆ 1946ರ ಅನ್ವಯ ರಾಜ್ಯ ಸರ್ಕಾರ ಬಲಿಷ್ಠವಾದ ಕಾನೂನು ರೂಪಿಸಿ, ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಬೇಕು. ಎಲ್ಲ ಖಾಸಗಿ ಸಂಸ್ಥೆಗಳಲ್ಲಿ ಸಿ ಮತ್ತು ಡಿ ದರ್ಜೆ ಹುದ್ದೆಗಳಲ್ಲಿ ಶೇ.100ರಷ್ಟು ಹಾಗೂ ಇತರೇ ಹುದ್ದೆಗಳಲ್ಲಿ ಶೇ.80ರಷ್ಟು ಹುದ್ದೆಗಳನ್ನು ಕನ್ನಡಿಗರಿಗೆ ಮೀಸಲಿಡಬೇಕು. 15 ವರ್ಷ ಕಾಲ ಕರ್ನಾಟಕದಲ್ಲಿ ನೆಲೆಸಿದವರಿಗೆ ಕಡ್ಡಾಯವಾಗಿ ಕನ್ನಡ ಬರವಣಿಗೆ ಪರೀಕ್ಷೆ ನಡೆಸಿ, ಉತ್ತೀರ್ಣರಾದವರನ್ನು ಮಾತ್ರ ಕನ್ನಡಿಗರೆಂದು ಪರಿಗಣಿಸಬೇಕು ಎಂದು ತಾಕೀತು ಮಾಡಿದರು.ಕರವೇ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಬಸಮ್ಮ, ಶಾಂತಮ್ಮ, ಮಂಜುಳಾ ಗಣೇಶ, ಚೈತ್ರಾ, ಅಭಿಷೇಕ, ರೇವಕ್ಕ, ಗೋಪಾಲ ದೇವರಮನೆ, ಗಿರೀಶ, ಕುಮಾರ, ಧರ್ಮರಾಜ, ಪರಮೇಶ, ಮಂಜುನಾಥ, ಹರೀಶ, ಗಿರೀಶ, ಖಾದರ್ ಬಾಷಾ, ತನ್ವೀರ್, ದಾದಾಪೀರ್, ದಾದೇಶ, ಲೋಕೇಶ, ಸಂತೋಷ, ಆಟೋ ರಫೀಕ್, ಹನುಮಂತಪ್ಪ, ವಿನಯ, ಚಂದ್ರು, ರುದ್ರೇಶ ಇತರರು ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.
ಹೋರಾಟಕ್ಕೆ ಬೆಂಬಲ:ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್.ಅರುಣ್ ಕುಮಾರ್, ಪೀಪಲ್ ಲಾಯರ್ಸ್ ಗಿಲ್ಡ್ ಅಧ್ಯಕ್ಷ ಅನೀಸ್ ಪಾಷಾ, ಕರವೇ ಕಾನೂನು ಸಲಹೆಗಾರ ಎ.ವೈ.ಕೃಷ್ಣಮೂರ್ತಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಇತರರು ಭಾಗವಹಿಸಿ, ಹೋರಾಟಕ್ಕೆ ಬೆಂಬಲ ಘೋಷಿಸಿದರು.
- - -ಬಾಕ್ಸ್ * ವೇದಿಕೆ ಬೇಡಿಕೆಗಳು 1. ಕೇಂದ್ರದ ಇಲಾಖೆ ಮತ್ತು ಸಾರ್ವಜನಿಕ ವಲಯದ ಘಟಕಗಳಲ್ಲಿ ಗ್ರೂಪ್ ಸಿ ಮತ್ತು ಗ್ರೂಪ್ ಡಿ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಶೇ.100 ಹಾಗೂ ಉಳಿದೆಲ್ಲಾ ಹುದ್ದೆಗಳಲ್ಲೂ ಶೇ.90 ಮೀಸಲಾತಿ ನೀಡಬೇಕು
2. ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸಲು ವಿಫಲರಾಗುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಅವಕಾಶ ಉದ್ದೇಶಿತ ಕಾನೂನಿನಲ್ಲಿ ಅಳವಡಿಸಬೇಕು3. ರಾಜ್ಯ ಸರ್ಕಾರಿ ಸಂಸ್ಥೆ ಮತ್ತು ಸಾರ್ವಜನಿಕ ವಲಯದ ಘಟಕಗಳಲ್ಲಿ ಕನ್ನಡಿರಿಗೆ ಶೇ.100 ಮೀಸಲಾತಿ ನೀಡಬೇಕು 4. ನಿಯಮಾವಳಿ ಪಾಲಿಸದ ಸಂಸ್ಥೆಗಳಿಗೆ ನೀಡಿರುವ ಭೂಮಿ ಸೇರಿದಂತೆ ಸರ್ಕಾರದ ಎಲ್ಲ ಸವಲತ್ತು ಹಿಂಪಡೆಯಬೇಕು 5. ನಿಯಮ ಪಾಲಿಸದ ಸಂಸ್ಥೆಗಳಿಗೆ ದಂಡ ವಿಧಿಸುವ ಜೊತೆಗೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು
6. ರಾಜ್ಯ ಸರ್ಕಾರ ರೂಪಿಸುವ ಕಾನೂನನ್ನು ಸಮರ್ಪಕ ಜಾರಿಗೆ ತರಲು ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ಅಧಿಕಾರ ನೀಡಬೇಕು7. ಕರ್ನಾಟಕ ಸರ್ಕಾರ ಮೊದಲು ಈ ನೆಲದ ಮಕ್ಕಳಾದ ಕನ್ನಡಿಗರ ಹಿತ ಕಾಯುವ ಕೆಲಸ ಮಾಡಬೇಕು
8. ಕಾನೂನು ಸಮಸ್ಯೆಗಳು ಎದುರಾದರೆ ಸಮರ್ಥ ವಕೀಲರ ತಂಡವನ್ನು ಸಿದ್ಧಪಡಿಸಬೇಕು- - - -1ಕೆಡಿವಿಜಿ6, 7:
ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಸೇರಿದಂತೆ ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ದಾವಣಗೆರೆ ಪಾಲಿಕೆ ಮುಂಭಾಗ ಕರವೇ ಜಿಲ್ಲಾ ಘಟಕದಿಂದ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಯಿತು.