ಸಾಹಿತ್ಯ ಮನುಷ್ಯನನ್ನು ಪರಿಪೂರ್ಣಗೊಳಿಸುತ್ತದೆ: ಜೋಗಿ

KannadaprabhaNewsNetwork | Published : Jul 2, 2024 1:31 AM

ಸಾರಾಂಶ

ಹಿರ್ಗಾನದ ಕ್ರಿಯೇಟಿವ್ ಕಾಲೇಜಿನ ಸಪ್ತಗಿರಿ ಕ್ಯಾಂಪಸ್ ಸಭಾಂಗಣದಲ್ಲಿ ಪುಸ್ತಕಮನೆ ಪ್ರಕಾಶನದ ವಿವಿಧ ಪುಸ್ತಕಗಳನ್ನು ಹಿರಿಯ ಸಾಹಿತಿ, ಕನ್ನಡಪ್ರಭ ಪತ್ರಿಕೆಯ ಪುರವಣಿ ಸಂಪಾದಕ ಗಿರೀಶ್ ರಾವ್ ಹತ್ವಾರ್ (ಜೋಗಿ) ಬಿಡುಗಡೆಗೊಳಿಸಿದರು.

ಕನ್ನಡಪ್ರಭ ವಾರ್ತೆ ಕಾರ್ಕಳ

ಇಂದಿನ ಯಾಂತ್ರಿಕ ಬದುಕಿನಲ್ಲಿ ಪುಸ್ತಕಗಳು ಬೆಳಕು ನೀಡುತ್ತವೆ, ದಾರಿ ತೋರಿಸುತ್ತವೆ ಎಂದು ಹಿರಿಯ ಸಾಹಿತಿ, ಕನ್ನಡಪ್ರಭ ಪತ್ರಿಕೆಯ ಪುರವಣಿ ಸಂಪಾದಕ ಗಿರೀಶ್ ರಾವ್ ಹತ್ವಾರ್ (ಜೋಗಿ) ಹೇಳಿದರು.

ಅವರು ಸೋಮವಾರ ಇಲ್ಲಿನ ಹಿರ್ಗಾನದ ಕ್ರಿಯೇಟಿವ್ ಕಾಲೇಜಿನ ಸಪ್ತಗಿರಿ ಕ್ಯಾಂಪಸ್ ಸಭಾಂಗಣದಲ್ಲಿ ನಡೆದ ಪುಸ್ತಕಮನೆ ಪ್ರಕಾಶನದ ವಿವಿಧ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಶಿಕ್ಷಣವು ಮನುಷ್ಯನ ಜೀವನಕ್ಕೆ ಸಂಪಾದನೆಯ ದಾರಿ ತೋರಿಸಿದರೆ, ಸಾಹಿತ್ಯವು ಆತನನ್ನು ಪರಿಪೂರ್ಣ ಮನುಷ್ಯನನ್ನಾಗಿ ರೂಪಿಸುತ್ತದೆ. ಪುಸ್ತಕಗಳಿಂದ ಜೀವನದ ಪಥವನ್ನು ಬದಲಿಸಲು ಹಾಗೂ ಭಾವ ಜಗತ್ತನ್ನು ವಿಸ್ತರಿಸಲು ಸಾಧ್ಯವಿದೆ. ಹಿಂದಿನ ಕಾಲದಲ್ಲಿ ಅನ್ನದ ಹಸಿವಿತ್ತು‌. ನಂತರ ಸಮಾನತೆ ಬಳಿಕ ಜ್ಞಾನದ ಹಸಿವು ಅರಂಭವಾಯಿತು‌. ಆದರೆ ಇಂದಿನ ಕಾಲದಲ್ಲಿ ತಂತ್ರಜ್ಞಾನ ಹಸಿವು ಯುವ ಸಮುದಾಯವನ್ನು ಕಾಡುತ್ತಿದೆ. ಸಾಹಿತ್ಯ ಕೂಡ ತಂತ್ರಜ್ಞಾನಕ್ಕೆ ಹೊಂದಿಕೊಂಡು ಓದುಗರ ಸಂಖ್ಯೆ ಹೆಚ್ಚಿಸಿದೆ ಎಂದರು.

ಲೇಖಕನ ವ್ಯಕ್ತಿಯ ಮನಸ್ಸಿನ‌ ತೊಳಲಾಟಗಳು ಸಾಹಿತ್ಯದ ಮೂಲಕ ಪುಸ್ತಕ ರೂಪಕ್ಕೆ ಬರುತ್ತದೆ. ಪುಸ್ತಕ ಓದಿನಲ್ಲಿ ಹುಟ್ಟುವ ಆನಂದ ಅಪರಿಮಿತವಾಗಿರುತ್ತದೆ. ಪಠ್ಯ ಪುಸ್ತಕಗಳ ಜೊತೆ ಸಾಹಿತ್ಯದ ಓದಿಗೂ ಅವಕಾಶ ನೀಡುತ್ತಿರುವ ಕ್ರಿಯೇಟಿವ್ ಕಾಲೇಜು ಸಂಸ್ಥಾಪಕರು ಅಭಿನಂದನಾರ್ಹರು ಎಂದು ಜೋಗಿ ಹೇಳಿದರು.

ಕಾರ್ಕಳದ ಹಿರಿಯ ಸಾಹಿತಿ ಪ್ರೊ. ಎಂ‌.ರಾಮಚಂದ್ರ ಅವರನ್ನು ನೆನಪಿಸಿಕೊಂಡ ಜೋಗಿ, ವಿದ್ಯಾರ್ಥಿಗಳು ಮುಕ್ತವಾಗಿ ಬರೆಯಿರಿ, ಕವಿಗಳಾಗಿ ಎಂದು ಕಾಲೇಜು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಇದೇ ಸದಂರ್ಭ ಜೋಗಿ ಅವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿ ಕಾರ್ಕಳ ಶಾಸಕ ಸುನಿಲ್ ಕುಮಾ‌ರ್, ಪುಸ್ತಕ‌ಮನೆಯ ಪರಿಕಲ್ಪನೆಯೊಂದಿಗೆ ಕ್ರಿಯೇಟಿವ್ ಕಾಲೇಜು ಶಿಕ್ಷಣದೊಂದಿಗೆ ಸಾಹಿತ್ಯ ಬೆಳವಣಿಗೆಗೆ ಪ್ರೇರಣೆಯಾಗಿದೆ. ಪುಸ್ತಕಗಳು ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುತ್ತವೆ. ರಾಜಕೀಯದ ನಡುವೆಯೂ ನನ್ನ ನಿತ್ಯದ ಜೀವನದಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಮುಂದುವರಿಸಿಕೊಂಡು ಹೋಗುತಿದ್ದೇನೆ. ಇದು ಸದಾಭಿರುಚಿಯನ್ನು ಹೆಚ್ಚಿಸಿದೆ ಎಂದರು.

ಇನ್ನೊಬ್ಬ ಮುಖ್ಯ ಅತಿಥಿ ಕಾರ್ಕಳ ಕ.ಸಾ.ಪ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ, ಸೃಜನಶೀಲತೆ, ಹೃದಯ ಶ್ರೀಮಂತಿಕೆಯನ್ನು ಹೆಚ್ಚಿಸಲು ಸಾಹಿತ್ಯ ಪುಸ್ತಕಗಳು ಸಹಕಾರಿಯಾಗಿವೆ ಎಂದು ಹೇಳಿದರು.

ಕ್ರಿಯೇಟಿವ್ ಕಾಲೇಜಿನ ಸಂಸ್ಥಾಪಕ ಅಶ್ವಥ್ ಎಸ್.ಎಲ್. ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿ, ಪುಸ್ತಕ ಮನೆಯು ಮೊಬೈಲ್ ಬಿಡಿ, ಪುಸ್ತಕ ಹಿಡಿ ಯೋಜನೆಯಲ್ಲಿ ದಾನಿಗಳ ಸಹಾಯದಿಂದ ಗ್ರಾಮೀಣ ಶಾಲಾ ವಿದ್ಯಾರ್ಥಿಗಳಿಗೆ‌ ಸಾಹಿತ್ಯ ಪುಸ್ತಕಗಳನ್ನು ಹಂಚಿ ಸಾಹಿತ್ಯದ ಬೆಳವಣಿಗೆಗೆ ಪ್ರೇರಣೆ ನೀಡುವ ಕೆಲಸ ಮಾಡುತ್ತಿದೆ ಎಂದರು.

ಕಾಲೇಜು ಸಂಸ್ಥಾಪಕರಾದ ವಿದ್ವಾನ್‌ ಗಣಪತಿ ಭಟ್‌, ಡಾ. ಗಣನಾಥ ಶೆಟ್ಟಿ, ಅಮೃತ್‌ ರೈ, ಆದರ್ಶ ಎಂ.ಕೆ., ವಿಮಲ್‌ ರಾಜ್‌ ಜಿ., ಗಣಪತಿ ಭಟ್‌ ಕೆ.ಎಸ್‌. ಉಪಸ್ಥಿತರಿದ್ದರು. ಉಪನ್ಯಾಸಕರಾದ ಲೋಹಿತ್ ಎಸ್.ಕೆ. ಮತ್ತು ಪ್ರಿಯಾ ಕಾರ್ಯಕ್ರಮ ನಿರೂಪಿಸಿದರು.15 ಪುಸ್ತಕಗಳ ಬಿಡುಗಡೆ

ಕಾರ್ಯಕ್ರಮದಲ್ಲಿ ಲೇಖಕರಾದ ನರೇಂದ್ರ ಪೈಯವರ ‘ಸಾವಿರದೊಂದು ಪುಸ್ತಕ’, ಯಶೋದಾ ಮೋಹನ್ ಅವರ ‘ಇಳಿ ಹಗಲಿನ ತೇವಗಳು’, ಸುಧಾ ನಾಗೇಶ್ ಅವರ ‘ಹೊಂಬೆಳಕು’, ವಾಣಿರಾಜ್‌ರವರ ‘ಸವಿನೆನಪುಗಳ ಹಂದರ’, ಡಾ. ಸುಬ್ರಹ್ಮಣ್ಯ ಸಿ. ಕುಂದೂರು ಅವರ ‘ಜೀವನಯಾನ’, ಅನುಬೆಳ್ಳೆ ಅವರ ‘ನಗುವ ನಯನ ಮಧುರ ಮೌನ’, ರಾಮಕೃಷ್ಣ ಹೆಗಡೆಯವರ ‘ಒಲವಧಾರೆ’, ಲಕ್ಷ್ಮಣ ಬಜಿಲರ ‘ನಿರ್ವಾಣ’, ಅಶ್ವತ್ಥ ಎಸ್.ಎಲ್.ರ ‘ಅರಿವಿನ ದಾರಿ’, ರಾಜೇಂದ್ರ ಭಟ್‌ರ ‘ರಾಜಪಥ’, ಕೊಂಡಳ್ಳಿ ಪ್ರಭಾಕರ ಶೆಟ್ಟಿಯವರ ‘ಸಾರ್ಥಕ ಜೀವನಕ್ಕೆ ಕಗ್ಗೋಪದೇಶ’, ಲಲಿತಾ ಮುದ್ರಾಡಿಯವರ ‘ಅರ್ಥವಾಗದವರು’, ದಿಗಂತ್‌ ಬಿಂಬೈಲ್‌ರ ‘ಕೊಂದ್ ಪಾಪ ತಿಂದ್ ಪರಿಹಾರ’, ಡಾ. ರಾಜಶೇಖ‌ರ್ ಹಳೆಮನೆ ಯವರ ‘ಒಡಲುಗೊಂಡವರು’, ಮಹೇಶ್ ಪುತ್ತೂರು ಬರೆದ ‘ವರ್ಣ ಪುಸ್ತಕಗಳು’ ಬಿಡುಗಡೆ ಮಾಡಲಾಯಿತು.

Share this article