ಕನ್ನಡಪ್ರಭ ವಾರ್ತೆ ಬ್ಯಾಕೋಡು ಮುಳುಗಡೆ ರೈತರ ಜೀವನಾಧಾರಿತ ಮತ್ತು ಅನುಭವಿಸಿದ ಕಷ್ಟ- ನಷ್ಟಗಳನ್ನು ಕವನ ಸಂಕಲನವನ್ನಾಗಿ ಮಾಡಿದ ಸತ್ಯನಾರಾಯಣ ಅವರು ಮೊದಲಿನಿಂದಲೂ ಹೋರಾಟ ಮತ್ತು ಜನರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡಿದವರು. ಈ ಕವನ ಸಂಕಲನವನ್ನು ಓದಿಯಾದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ದ್ವೀಪದ ಜನರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು ಎಂದು ಸುಧೀರಕುಮಾರ್ ಮುರಳಿ ಹೇಳಿದರು. ಸಂವಿಧಾನ ಪೀಠಿಕೆ ಓದುವ ಮುಖಾಂತರ ಆರಂಭವಾದ ಕರೂರಿನ, ಜಿ.ಟಿ. ಸತ್ಯನಾರಾಯಣ ಅವರ "ಅಪ್ಪಯ್ಯ " ಮತ್ತು "ನೆನಪು ನದಿಯಾಗಿ " ಕವನ ಸಂಕಲನಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾರತಮಾತೆಯರು ಎಂದರೆ ಯಾವುದೇ ಪ್ರತಿಮೆ ಅಥವಾ ಚಿತ್ರ ಅಲ್ಲ, ಬದಲಾಗಿ ನಮ್ಮ ದೇಶದ ಶ್ರೀಸಾಮಾನ್ಯರು. ತಪ್ಪು-ಸರಿಗಳ ತಿದ್ದಿ ಬುದ್ಧಿ ಹೇಳುವ ತಂದೆ- ತಾಯಂದಿರೇ ನಿಜವಾದ ಭಾರತಮಾತೆಯರು ಎಂದರು. ಮುಳುಗಡೆಯ ದಟ್ಟ ಅರಣ್ಯ ಪ್ರದೇಶದಲ್ಲಿ ನಮ್ಮ ಪೂರ್ವಜರು ವಾಸವಾಗಿದ್ದು, ಮುಳುಗಡೆಯಲ್ಲಿ ಮುಳುಗಿಹೋಗಿದೆ. ನಮ್ಮ ಜಮೀನು ಮನೆಗಳು ಮಾತ್ರವಲ್ಲ, ಒಂದು ದೊಡ್ಡ ಸಂಸ್ಕೃತಿ ಮುಳುಗಿಹೋಗಿದೆ ಎನ್ನುವಂತದ್ದು ಕರಾಳವಾದದ್ದು. ಅದರಲ್ಲೂ, ಪೂರ್ವಜರು ತಮ್ಮ ಪೀಳಿಗೆಯಲ್ಲಿ ಮೂರು ಮೂರು ಬಾರಿ ಎತ್ತಂಗಡಿ ಆಗಿರುವಂತಹ ಸಂದರ್ಭಗಳು ಎದುರಾಗಿದೆ ಎಂದರೆ, ಇಲ್ಲಿಯ ಜನರು ಎಂತಹ ಸಂದಿಗ್ಧ ಪರಿಸ್ಥಿತಿಗೆ ಬಂದಿದ್ದಾರೆ ಎನ್ನುವುದು ಶೋಚನೀಯ ಎಂದರು. ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ದ್ವೀಪದ ಜನರಿಗೆ ಮಾರ್ಗದರ್ಶಕ, ಹೋರಾಟಗಾರ ಮತ್ತು ಲೇಖಕರಾಗಿ, ಈಗ ತಮ್ಮ ಕವನ ಸಂಕಲನಗಳ ಮೂಲಕ ಜನರು ಅನುಭವಿಸಿದ ನೈಜನೋವನ್ನು ಕವನ ಸಂಕಲನಗಳಲ್ಲಿ ಸವಿವರವಾಗಿ ವಿವರಿಸಿದ್ದಾರೆ. ಇಂತಹ ದ್ವೀಪ ಪ್ರದೇಶಗಳಲ್ಲಿ ಲೇಖಕರು ಇಮ್ಮಡಿಯಾಗಬೇಕು ಎಂದರು. ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ಕರೂರು ಹೋಬಳಿಯ ಸಾರಾಯಿ ಹೋರಾಟದಿಂದ ಇಡೀ ಹೋಬಳಿಯನ್ನೇ ಸಾರಾಯಿಮುಕ್ತ ಹೋಬಳಿ ಎನ್ನುವ ಘೋಷಣೆಯತ್ತ ಕೊಂಡೊಯ್ದು, ಇನ್ನಿತರ ಜನಪರವಾಗಿ ಹೋರಾಟದಿಂದ ನ್ಯಾಯ ಕೊಡಿಸುವ ಮತ್ತು ಎಲ್ಲ ಕ್ಷೇತ್ರಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡವರು ಸತ್ಯನಾರಾಯಣ. ಇವರಂಥ ವ್ಯಕ್ತಿಗಳು ಸಿಗುವುದು ಮುಳುಗಡೆ ರೈತರ ಪುಣ್ಯ ಎಂದು ಹೇಳಿದರು. ನೆನಪು ನದಿಯಾಗಿ ಕವನ ಸಂಕಲನಕ್ಕೆ ಮುನ್ನುಡಿ ಬರೆದ ಲೇಖಕ ಹಾಗೂ ಪತ್ರಕರ್ತ ಶಶಿ ಸಂಪಳ್ಳಿ ಕವನ ಸಂಕಲನಗಳಲ್ಲಿ, ಕೆಲವು ಆಯ್ದ ಕವಿತೆಗಳ ಬಗ್ಗೆ ವಿವರಿಸಿದರು. ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮತ್ತು ಊರಿನ ಹಿರಿಯರು ಆದ ಕರೂರಿನ ಶಾಂತಮ್ಮ ಅವರು ಕವನ ಸಂಕಲನಗಳ ಬಿಡುಗಡೆ ಮಾಡಿದರು. ಮಲೆನಾಡಿನಲ್ಲಿ ಸಿಗುವಂತಹ ಅಡಕೆ ಗೊನೆ, ಭತ್ತ ,ಅಕ್ಕಿ ಕೊಳಗ, ಹಾಳೆ ಟೊಪ್ಪಿ, ಎತ್ತಿನಗಾಡಿ ಚಕ್ರ, ಅಡಕೆ ಸಿಂಗಾರ, ಮಲೆನಾಡಿನಲ್ಲಿ ಬೆಳೆಯುವಂತಹ ವಿವಿಧ ಉತ್ಪನ್ನಗಳಿಂದ ವೇದಿಕೆಯನ್ನು ನಿರ್ಮಿಸಿದ್ದು ವಿಶೇಷವಾಗಿತ್ತು. ರಾಜ್ಯ ಪ್ರಶಸ್ತಿ ಪುರಸ್ಕೃತ ಚನ್ನಶೆಟ್ಟಿ ಕೊಪ್ಪದ ಜಾನಪದ ತಂಡದಿಂದ ಎಲ್ಲಮ್ಮನ ಜೋಗತಿ ನೃತ್ಯ ಏರ್ಪಡಿಸಲಾಗಿತ್ತು. ವಕೀಲ ಕೆ.ಪಿ.ಶ್ರೀಪಾಲ್, ಅಶೋಕ್ ಬರದವಳ್ಳಿ, ತುಮರಿ ಗ್ರಾಪಂ ಅಧ್ಯಕ್ಷೆ ಶ್ರೀದೇವಿ ರಾಮಚಂದ್ರ, ತಾಪಂ ಮಾಜಿ ಸದಸ್ಯ ಹರೀಶ್ ಗಂಟೆ ಮತ್ತಿತರರು ಹಾಜರಿದ್ದರು. - - - -29ಬ್ಯಾಕೋಡು02: ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮತ್ತು ಊರಿನ ಹಿರಿಯರಾದ ಕರೂರಿನ ಶಾಂತಮ್ಮ ಕವನ ಸಂಕಲನಗಳ ಬಿಡುಗಡೆ ಮಾಡಿದರು. ಮಲ್ಲಿಕಾರ್ಜುನ ಹಕ್ರೆ, ಮುಂತಾದವರು ಹಾಜರಿದ್ದರು.