ಕನ್ನಡಪ್ರಭ ವಾರ್ತೆ ತರೀಕೆರೆ
ಮುಂಬರುವ ಲೋಕಸಭಾ ಚುನಾವಣೆಯೊಳಗೆ ನಮ್ಮ ಭೂಮಿ ಸಮಸ್ಯೆ ಬಗೆಹರಿಸಿ, ಬಗರ್ ಹುಕುಂ ಸಾಗುವಳಿದಾರರಿಗೆ ಮಂಜೂರಾತಿ ನೀಡಬೇಕೆಂದು ರಾಜ್ಯಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಕಾರ್ಯದರ್ಶಿ ಮಂಡಳಿ ಸದಸ್ಯ ಕುಮಾರ್ ಸಮತಳ ಹೇಳಿದ್ದಾರೆ.ಅವರು, ರಾಜ್ಯ ಭೂಮಿ ಮತ್ತು ವಸತಿ ರಹಿತರ ಹೋರಾಟ ಸಮಿತಿ ವತಿಯಿಂದ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಏರ್ಪಾಡಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭೂಮಿಗಾಗಿ ಫಾರಂ 50, 53, ಹಾಗೂ 57 ಅರ್ಜಿ ಹಾಕಿರುವ ಅರ್ಜಿದಾರರಿಗೆ ಭೂಮಿ ಪಡೆಯುವ ಬಗ್ಗೆ ಹಾಗೂ ಅರಣ್ಯ ಭೂಮಿ, ಹುಲ್ಲುಬನ್ನಿ, ಮತ್ತು ಗೋಮಾಳ (ಸರ್ಕಾರಿ ಭೂಮಿ) ಭೂಮಿಗಳನ್ನು ಪಡೆದುಕೊಳ್ಳುವ ಬಗ್ಗೆ ಸವಿಸ್ತಾರವಾಗಿ ವಿವರಣೆ ನೀಡಿದರು.ಹಾಗೆಯೇ ತರೀಕೆರೆ ವಿಧಾನಸಭಾ ವ್ಯಾಪ್ತಿಯಲ್ಲಿ ಬರುವ ಇನ್ನೂ ಅನೇಕ ಅರ್ಜಿದಾರರು, ಈ ನಮ್ಮ ಭೂಮಿ ಹೋರಾಟ ಸಮಿತಿಯೊಟ್ಟಿಗೆ ಕೈ ಜೋಡಿಸಬೇಕಿದೆ. ಆದ್ದರಿಂದ ನಾವು ತರೀಕೆರೆ ತಾಲೂಕಿನಲ್ಲಿ ನಮ್ಮ ಹೋರಾಟ ಸಮಿತಿ ರಚಿಸಿ ಮುಂದಿನ ತಿಂಗಳು ಭೂಮಿ ಪಡೆಯುವ ಬಗ್ಗೆ ಶಾಂತಿಯುತ ಹೋರಾಟ ಮಾಡಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಹೇಳಿದರು.
ಈ ವಿಚಾರಕ್ಕೆ ಸ್ಥಳೀಯ ಶಾಸಕರು ಹಾಗೂ ತಾಲೂಕು ದಂಡಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಜನರಿಗೆ ನ್ಯಾಯ ದೊರೆಯುವಂತೆ ಮಾಡಬೇಕೆಂದು ಸಭೆಯಲ್ಲಿ ಒತ್ತಾಯಿಸಲಾಯಿತು. ಚುನಾವಣೆಯೊಳಗೆ ಭೂಮಿ ಹಕ್ಕು ಪಡೆದುಕೊಳ್ಳಲು ಎಲ್ಲಾ ಸಾಗುವಳಿದಾರರು, ನಿವೇಶನರಹಿತರು ಒಗ್ಗಟ್ಟಾಗಿ ಸಂಘಟಿತರಾಗುವ ಮೂಲಕ ಸರ್ಕಾರವನ್ನು ತಾಲೂಕು ಆಡಳಿತ, ಜಿಲ್ಲಾಡಳಿತವನ್ನು ಒತ್ತಾಯಿಸೋಣ ಎಂದು ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು.ಹಿರಿಯ ವಕೀಲರಾದ ಕೆ.ಚಂದ್ರಪ್ಪ ಮಾತನಾಡಿ, ಈ ವಿಚಾರವಾಗಿ ಕಾನೂನಿನ ಸಲಹೆ ನೀಡಿ ಮುಂದಿನ ಹೋರಾಟ ಗಳಲ್ಲಿ ನಾನೂ ಸಹ ನಿಮ್ಮೊಂದಿಗೆ ಸಹಕಾರ ನೀಡುತ್ತೇನೆ ಎಂದು ಅವರು ಹೇಳಿದರು.
ಪತ್ರಕರ್ತರಾದ ಜಿ.ಟಿ.ರಮೇಶ್, ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತ ವೇದಿಕೆ ಜಿಲ್ಲಾಧ್ಯಕ್ಷರಾದ ಓಂಕಾರಪ್ಪ ಎಂ.ಯುವ ದಲಿತ ಹೋರಾಟಗಾರರಾದ ಸುನಿಲ್ ದೋರನಾಳು ಮತ್ತು ಸಂಘಟನೆ ಹೋರಾಟಗಾರರಾದ ಕೆ.ಆರ್.ಉಮೇಶ್ ನಾಯ್ಕ್, ಪರಮೇಶ್ವರಪ್ಪ ಗೌರಮ್ಮ, ಗುಳ್ಳಮ್ಮ, ಲಕ್ಷ್ಮೀ, ಶುಭಾ, ಮತ್ತು ಕವಿತಾ ಮತ್ತಿತರರು ಭಾಗವಹಿಸಿದ್ದರು.