ಮಧು ಬಂಗಾರಪ್ಪಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿ: ರಾಘವೇಂದ್ರ ನಾಯ್ಕ್

KannadaprabhaNewsNetwork |  
Published : Jun 03, 2026, 01:30 AM IST
ಪೊಟೋ: 02ಎಸ್‌ಎಂಜಿಕೆಪಿ01ಶಿವಮೊಗ್ಗದ ಪತ್ರಿಕಾಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಶಿಕಾರಿಪುರ ತಾಲೂಕು ಕಾಂಗ್ರೆಸ್ ಮುಖಂಡ ಹಾಗೂ ಕೆಡಿಪಿ ಸದಸ್ಯ ರಾಘವೇಂದ್ರ ನಾಯ್ಕ್ ಮಾತನಾಡಿದರು.  | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಕೋಮುವಾದಿ ಶಕ್ತಿಗಳನ್ನು ಸಮರ್ಥವಾಗಿ ಎದುರಿಸಿ ಪಕ್ಷವನ್ನು ಸಂಘಟಿಸುವ ದೃಷ್ಟಿಯಿಂದ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಸಚಿವ ಸಂಪುಟದಲ್ಲಿ ಶಾಸಕ ಮಧು ಬಂಗಾರಪ್ಪ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಶಿಕಾರಿಪುರ ತಾಲೂಕು ಕಾಂಗ್ರೆಸ್ ಮುಖಂಡ ಹಾಗೂ ಕೆಡಿಪಿ ಸದಸ್ಯ ರಾಘವೇಂದ್ರ ನಾಯ್ಕ್ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲೆಯಲ್ಲಿ ಕೋಮುವಾದಿ ಶಕ್ತಿಗಳನ್ನು ಸಮರ್ಥವಾಗಿ ಎದುರಿಸಿ ಪಕ್ಷವನ್ನು ಸಂಘಟಿಸುವ ದೃಷ್ಟಿಯಿಂದ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಸಚಿವ ಸಂಪುಟದಲ್ಲಿ ಶಾಸಕ ಮಧು ಬಂಗಾರಪ್ಪ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಶಿಕಾರಿಪುರ ತಾಲೂಕು ಕಾಂಗ್ರೆಸ್ ಮುಖಂಡ ಹಾಗೂ ಕೆಡಿಪಿ ಸದಸ್ಯ ರಾಘವೇಂದ್ರ ನಾಯ್ಕ್ ಮನವಿ ಮಾಡಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಬುಧವಾರ ಕಾಂಗ್ರೆಸ್ ಪಕ್ಷದ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದೆ. ಪಕ್ಷದ ಸಾಮಾನ್ಯ ಕಾರ್ಯಕರ್ತರಾಗಿ ಬೆಳೆದ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುತ್ತಿರುವುದು ನಮಗೆ ಖುಷಿ ತಂದಿದೆ. ಅವರ ಹಾಗೆಯೇ ಶಾಲಾ ಶಿಕ್ಷಣ ಸಚಿವರಾಗಿ ಕಳೆದ ಮೂರು ವರ್ಷ ಮಹತ್ತರ ಸಾಧನೆ ಮಾಡಿ ಇಡೀ ರಾಜ್ಯದ ಗಮನ ಸೆಳೆದ ಮಧು ಬಂಗಾರಪ್ಪ ಅವರನ್ನು ಕಾಂಗ್ರೆಸ್ ಪಕ್ಷವು ಉಪ ಮುಖ್ಯಮಂತ್ರಿಯನ್ನಾಗಿ ಮಾಡಿದರೆ ನಮಗೆ ಇನ್ನಷ್ಟು ಖುಷಿ ಕೊಡಲಿದೆ ಎಂದು ಹೇಳಿದರು.

ಶಿಕಾರಿಪುರ ಸೇರಿ ಶಿವಮೊಗ್ಗ ಜಿಲ್ಲೆ ಬಿಜೆಪಿ ಭದ್ರಕೋಟೆಯಾದರೂ, ಇಲ್ಲಿ ಕೋಮುವಾದಿ ಶಕ್ತಿಗಳನ್ನು ಕಾಂಗ್ರೆಸ್ ಪಕ್ಷ ಸಮರ್ಥವಾಗಿ ಎದುರಿಸುತ್ತಾ ಬಂದಿದೆ. ವಿಶೇಷವಾಗಿ ಮಧು ಬಂಗಾರಪ್ಪ ಅವರು ಸಚಿವರಾದ ನಂತರ ಜಿಲ್ಲೆಯಲ್ಲಿ ಬಿಜೆಪಿ ಮತ್ತು ಸಂಘ ಪರಿವಾರವನ್ನು ಸಮರ್ಥವಾಗಿ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಆ ಸ್ಥಾನದಲ್ಲಿ ಯಾರೇ ಇದ್ದರೂ ಇಲ್ಲಿ ಬಿಜೆಪಿಯನ್ನು ಎದುರಿಸುವುದಕ್ಕೆ ಕಷ್ಟವಿತ್ತು. ಆದರೆ, ತಮ್ಮ ತಂದೆಯಂತೆಯೇ ತುಂಬಾ ನೇರ ನಿಷ್ಟುರ ನಡೆಯ ಮಧು ಬಂಗಾರಪ್ಪ ಅವರು ತಮ್ಮ ಮಾತಿನ ಜಾಣತನದಿಂದ ಕೋಮುವಾದಿ ಶಕ್ತಿಗಳಿಗೆ ಸರಿಯಾದ ಪಾಠ ಕಲಿಸಿದ್ದಾರೆ ಎಂದರು.

ಶಿಕಾರಿಪುರ ವಿಧಾನ ಸಭಾ ಕ್ಷೇತ್ರವು ಬಿಜೆಪಿ ಭದ್ರಕೋಟೆಯಾದರೂ ಎಸ್. ಬಂಗಾರಪ್ಪ ಅವರ ರಾಜಕೀಯ ಇತಿಹಾಸದಲ್ಲಿ ಶಿಕಾರಿಪುರ ವಿಶೇಷ ಕೊಡುಗೆ ನೀಡಿದೆ. ಅವರು ಸೇರಿದಂತೆ ಅವರ ಕುಟುಂಬವನ್ನು ಶಿಕಾರಿಪುರ ಕ್ಷೇತ್ರ ಎಂದಿಗೂ ಬಿಟ್ಟುಕೊಟ್ಟಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರಿಗೆ ಹೆಚ್ಚಿನ ಮತಗಳು ಬಂದಿದ್ದವು. ಆ ನಂಟಿನ ಮೂಲಕವೇ ತಾವು ಸಚಿವರಾದ ಬಳಿಕ ಮಧುಬಂಗಾರಪ್ಪ ಅವರು ಶಿಕಾರಿಪುರಕ್ಕೆ ಹಲವು ಬಾರಿ ಭೇಟಿ ನೀಡುವ ಮೂಲಕ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ನೀಡಿದ್ದನ್ನು ಮರೆಯುವಂತಿಲ್ಲ. ಹಾಗಾಗಿ ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸಲು ಮತ್ತು ಕೋಮುವಾದಿ ಶಕ್ತಿಗಳನ್ನು ಎದುರಿಸಲು ಮಧು ಬಂಗಾರಪ್ಪ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ತಾವು ಕಾಂಗ್ರೆಸ್ ಹೈಕಮಾಂಡ್‌ಗೆ ಮನವಿ ಮಾಡುತ್ತಿದ್ದೇವೆ ಎಂದರು.

ವಕೀಲ ಹಾಗೂ ಕಾಂಗ್ರೆಸ್ ಮುಖಂಡ ನಿಂಗಪ್ಪ ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ಒಮ್ಮೆ ಸೊರಬದಲ್ಲಿ ಮಾತನಾಡುವ ವೇಳೆ ಮುಂದೆ ಕ್ಷೇತ್ರದ ಜನರು ಮಧು ಬಂಗಾರಪ್ಪ ಅವರಲ್ಲಿ ಬಂಗಾರಪ್ಪ ಅವರನ್ನು ಕಾಣಬೇಕೆಂದು ಹೇಳಿದ್ದರು. ಆ ರೀತಿಯೇ ನಾವು ಮಧು ಬಂಗಾರಪ್ಪ ಅವರಲ್ಲಿ ಬಂಗಾರಪ್ಪನವರನ್ನು ಕಾಣುತ್ತಿದ್ದೇವೆ. ತಂದೆಯಂತೆ ಅವರು ದಲಿತರು, ಶೋಷಿತರು ಹಾಗೂ ಹಿಂದುಳಿದ ವರ್ಗಗಳ ಬಗ್ಗೆ ವಿಶೇಷ ಕಾಳಜಿ ಇಟ್ಟುಕೊಂಡಿದ್ದಾರೆ ಎಂದರು.

ಗೋಷ್ಠಿಯಲ್ಲಿ ಪ್ರಮುಖರಾದ ಬಾಷಾ ಸಾಬ್, ಜಗದೀಶ್ ಚುರ್ಚಿ ಗುಂಡಿ, ಮಂಜು ನಾಯ್ಕ, ಚರಣ್, ಸುನೀಲ್ ಬನ್ನೂರು, ಅಬ್ಬಾಸ್ ಸಾಬ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಶಾಲೆ ಮಕ್ಕಳಿಗೆ ಮನ್ಮುಲ್ ಒಕ್ಕೂಟದ ದರ್ಶನ: ಸಿ.ಶಿವಕುಮಾರ್
ರೈತ ಫಲಾನುಭವಿಗಳಿಗೆ ಮನ್ಮುಲ್‌ನಿಂದ ಡಿಜಿಟಲ್ ಪೇಮೆಂಟ್: ಸಿ.ಶಿವಕುಮಾರ್