ಮಹದೇವಪ್ಪಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಿ

KannadaprabhaNewsNetwork |  
Published : Jun 01, 2026, 01:30 AM IST
ನಗರದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿದ ವಿವಿಧ ದಲಿತ ಪರ ಸಂಘಟನೆಗಳ ಮುಖಂಡರು ಬಳಿಕ ಬಿ.ಎಂ. ರಸ್ತೆಯಲ್ಲಿರುವ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಎದುರು ಜಮಾಯಿಸಿ ಪ್ರತಿಭಟನೆಯ ವೇಳೆ ಮಹದೇವಪ್ಪ ಪರ ಘೋಷಣೆಗಳು ಮೊಳಗಿದವು | Kannada Prabha

ಸಾರಾಂಶ

ರಾಜ್ಯದಲ್ಲಿ ರಾಜಕೀಯ ನಾಯಕತ್ವ ಬದಲಾವಣೆಯ ಚರ್ಚೆಗಳು ನಡೆದ ಸಂದರ್ಭದಲ್ಲಿ ದಲಿತ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ನೀಡುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆಯಬೇಕಾಗಿತ್ತು. ದಲಿತ ಸಮುದಾಯದಲ್ಲಿ ಸಮರ್ಥ, ಅನುಭವಿ ಹಾಗೂ ರಾಜ್ಯಮಟ್ಟದಲ್ಲಿ ಸ್ವೀಕಾರಾರ್ಹ ನಾಯಕರ ಕೊರತೆ ಇಲ್ಲ. ಪ್ರಿಯಾಂಕ್ ಖರ್ಗೆ, ಡಾ. ಜಿ. ಪರಮೇಶ್ವರ್ ಹಾಗೂ ಎಚ್. ಸಿ. ಮಹದೇವಪ್ಪ ಅವರಂತಹ ನಾಯಕರು ದೀರ್ಘಕಾಲದ ರಾಜಕೀಯ ಅನುಭವ ಹೊಂದಿದ್ದು, ಸರ್ಕಾರ ಹಾಗೂ ಆಡಳಿತದ ಬಗ್ಗೆ ಉತ್ತಮ ಅರಿವು ಹೊಂದಿದ್ದಾರೆ. ಇಂತಹ ನಾಯಕರಿಗೆ ಉನ್ನತ ಹುದ್ದೆಗಳನ್ನು ನೀಡುವ ಮೂಲಕ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಸರ್ಕಾರ ಸಾಕಾರಗೊಳಿಸಬೇಕು ಎಂದು ಅವರು ಹೇಳಿದರು.

ಕನ್ನಡಪ್ರಭ ವಾರ್ತೆ ಹಾಸನ

ರಾಜ್ಯದಲ್ಲಿ ನೂತನ ಸಚಿವ ಸಂಪುಟ ರಚನೆಗೆ ಸಂಬಂಧಿಸಿದ ರಾಜಕೀಯ ಚಟುವಟಿಕೆಗಳು ಗರಿಗೆದರಿರುವ ನಡುವೆಯೇ, ಹಿರಿಯ ದಲಿತ ನಾಯಕ ಹಾಗೂ ಮಾಜಿ ಸಚಿವ ಎಚ್. ಸಿ. ಮಹದೇವಪ್ಪ ಅವರನ್ನು ಸಚಿವ ಸಂಪುಟದಲ್ಲಿ ಮುಂದುವರಿಸಿ ಮಹತ್ವದ ಖಾತೆ ನೀಡಬೇಕು ಎಂದು ಒತ್ತಾಯಿಸಿ ಹಾಸನ ನಗರದಲ್ಲಿ ವಿವಿಧ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಮೊದಲು ನಗರದ ಪ್ರವಾಸಿಮಂದಿರದಲ್ಲಿ ಸಭೆ ನಡೆಸಿದ ವಿವಿಧ ದಲಿತ ಪರ ಸಂಘಟನೆಗಳ ಮುಖಂಡರು ಬಳಿಕ ಬಿ. ಎಂ. ರಸ್ತೆಯಲ್ಲಿರುವ ಭಾರತ ರತ್ನ ಡಾ. ಬಿ.ಆರ್‌. ಅಂಬೇಡ್ಕರ್‌ ಪ್ರತಿಮೆ ಎದುರು ಜಮಾಯಿಸಿ ಪ್ರತಿಭಟನೆಯ ವೇಳೆ ಮಹದೇವಪ್ಪ ಪರ ಘೋಷಣೆಗಳು ಮೊಳಗಿದವು ಹಾಗೂ ಸರ್ಕಾರವು ದಲಿತ ಸಮುದಾಯದ ಭಾವನೆಗಳಿಗೆ ಸ್ಪಂದಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಆಗ್ರಹವನ್ನು ಸರ್ಕಾರದ ಗಮನಕ್ಕೆ ತಂದು ಆಗ್ರಹಿಸಲಾಯಿತು. ಪ್ರತಿಭಟನೆಯ ವೇಳೆ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ. ಸೋಮಶೇಖರ್ ಮಾತನಾಡಿ, ರಾಜ್ಯ ರಾಜಕಾರಣದಲ್ಲಿ ದಲಿತ ಸಮುದಾಯದ ಪಾತ್ರ ಹಾಗೂ ಕೊಡುಗೆ ಅತ್ಯಂತ ಮಹತ್ವದ್ದಾಗಿದ್ದರೂ, ಅಧಿಕಾರ ಹಂಚಿಕೆ ವಿಚಾರದಲ್ಲಿ ನಿರಂತರವಾಗಿ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.

ಸ್ವಾತಂತ್ರ್ಯಾನಂತರದಿಂದಲೂ ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತ ಸಮುದಾಯಗಳು ಕಾಂಗ್ರೆಸ್ ಪಕ್ಷಕ್ಕೆ ಬಲವಾದ ಬೆಂಬಲ ನೀಡುತ್ತಾ ಬಂದಿವೆ. ಚುನಾವಣೆಗಳ ಸಂದರ್ಭದಲ್ಲಿ ಈ ಸಮುದಾಯಗಳ ಮತಗಳು ಪಕ್ಷದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿವೆ. ಆದಾಗ್ಯೂ, ಮುಖ್ಯಮಂತ್ರಿ ಸೇರಿದಂತೆ ಉನ್ನತ ಹುದ್ದೆಗಳನ್ನು ನೀಡುವ ಸಂದರ್ಭದಲ್ಲಿ ಈ ಸಮುದಾಯಗಳ ನಾಯಕರನ್ನು ಕಡೆಗಣಿಸಲಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯದಲ್ಲಿ ರಾಜಕೀಯ ನಾಯಕತ್ವ ಬದಲಾವಣೆಯ ಚರ್ಚೆಗಳು ನಡೆದ ಸಂದರ್ಭದಲ್ಲಿ ದಲಿತ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ನೀಡುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆಯಬೇಕಾಗಿತ್ತು. ದಲಿತ ಸಮುದಾಯದಲ್ಲಿ ಸಮರ್ಥ, ಅನುಭವಿ ಹಾಗೂ ರಾಜ್ಯಮಟ್ಟದಲ್ಲಿ ಸ್ವೀಕಾರಾರ್ಹ ನಾಯಕರ ಕೊರತೆ ಇಲ್ಲ. ಪ್ರಿಯಾಂಕ್ ಖರ್ಗೆ, ಡಾ. ಜಿ. ಪರಮೇಶ್ವರ್ ಹಾಗೂ ಎಚ್. ಸಿ. ಮಹದೇವಪ್ಪ ಅವರಂತಹ ನಾಯಕರು ದೀರ್ಘಕಾಲದ ರಾಜಕೀಯ ಅನುಭವ ಹೊಂದಿದ್ದು, ಸರ್ಕಾರ ಹಾಗೂ ಆಡಳಿತದ ಬಗ್ಗೆ ಉತ್ತಮ ಅರಿವು ಹೊಂದಿದ್ದಾರೆ. ಇಂತಹ ನಾಯಕರಿಗೆ ಉನ್ನತ ಹುದ್ದೆಗಳನ್ನು ನೀಡುವ ಮೂಲಕ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಸರ್ಕಾರ ಸಾಕಾರಗೊಳಿಸಬೇಕು ಎಂದು ಅವರು ಹೇಳಿದರು.

ಎಚ್. ಸಿ. ಮಹದೇವಪ್ಪ ಅವರು ಕೇವಲ ರಾಜಕಾರಣಿಯಲ್ಲ, ದಲಿತ ಸಮುದಾಯದ ಆಶೋತ್ತರಗಳ ಪ್ರತಿನಿಧಿಯಾಗಿದ್ದಾರೆ. ಸಮಾಜದ ವಿವಿಧ ವರ್ಗಗಳ ನಡುವೆ ಸಮನ್ವಯ ಸಾಧಿಸುವ ಸಾಮರ್ಥ್ಯ ಅವರಿಗಿದೆ. ಒಳಮೀಸಲಾತಿ, ಸಾಮಾಜಿಕ ನ್ಯಾಯ, ಸಮಾನ ಅವಕಾಶಗಳು ಹಾಗೂ ಹಿಂದುಳಿದ ಸಮುದಾಯಗಳ ಹಕ್ಕುಗಳ ಪರವಾಗಿ ಅವರು ನಿರಂತರವಾಗಿ ಧ್ವನಿ ಎತ್ತಿದ್ದಾರೆ. ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ ಅವಧಿಯಲ್ಲೂ ಜನಪರ ಹಾಗೂ ಅಭಿವೃದ್ಧಿ ಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ಅವರನ್ನು ಸಚಿವ ಸಂಪುಟದಿಂದ ಕೈಬಿಡಬಾರದು ಎಂದು ಒತ್ತಾಯಿಸಿದರು. ರಾಜ್ಯದಲ್ಲಿ ಒಳಮೀಸಲಾತಿ ವಿಚಾರ ಹೆಚ್ಚು ಚರ್ಚೆಯಾಗುತ್ತಿರುವ ಈ ಸಂದರ್ಭದಲ್ಲಿ ದಲಿತ ಸಮುದಾಯದ ವಿವಿಧ ಉಪವರ್ಗಗಳನ್ನು ಒಗ್ಗೂಡಿಸಿಕೊಂಡು ಹೋಗುವ ಸಾಮರ್ಥ್ಯ ಎಚ್. ಸಿ. ಮಹದೇವಪ್ಪ ಅವರಿಗೆ ಇದೆ. ಬಲಗೈ ಮತ್ತು ಎಡಗೈ ಸಮುದಾಯಗಳ ನಡುವೆ ಸಮನ್ವಯ ಸಾಧಿಸುವ ಮೂಲಕ ಸಮಾಜದ ಏಕತೆಯನ್ನು ಬಲಪಡಿಸುವ ಕೆಲಸವನ್ನು ಅವರು ಮಾಡಿದ್ದಾರೆ. ಇಂತಹ ಅನುಭವಿ ನಾಯಕರನ್ನು ಸರ್ಕಾರದಿಂದ ದೂರ ಇಡುವುದು ದಲಿತ ಸಮುದಾಯಕ್ಕೆ ನಿರಾಶೆ ಉಂಟುಮಾಡಲಿದೆ ಎಂದು ಪ್ರತಿಭಟನಾಕಾರರು ಅಭಿಪ್ರಾಯಪಟ್ಟರು.

ಹುಡಾ ಮಾಜಿ ಅಧ್ಯಕ್ಷ ಕೃಷ್ಣ ಕುಮಾರ್‌ ಮತ್ತು ವಕೀಲ ಬಿ.ಸಿ. ರಾಜೇಶ್ ಮಾತನಾಡಿ, ರಾಜ್ಯದಲ್ಲಿ ನೂತನ ಸಚಿವ ಸಂಪುಟ ರಚನೆಯಾಗುತ್ತಿರುವ ಸಂದರ್ಭದಲ್ಲಿ ಸಾಮಾಜಿಕ ನ್ಯಾಯ ಹಾಗೂ ಸಂವಿಧಾನದ ಆಶಯಗಳಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು.

ದಲಿತ ಸಮುದಾಯದ ಪರವಾಗಿ ದೀರ್ಘಕಾಲ ಹೋರಾಟ ನಡೆಸಿರುವ ಎಚ್. ಸಿ. ಮಹದೇವಪ್ಪ ಅವರಿಗೆ ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ. ಅವರಿಗೆ ಕೇವಲ ಸಚಿವ ಸ್ಥಾನ ನೀಡುವುದಷ್ಟೇ ಅಲ್ಲದೆ, ಅವರ ಅನುಭವ ಹಾಗೂ ಸಾಮರ್ಥ್ಯಕ್ಕೆ ತಕ್ಕಂತಹ ಪ್ರಭಾವಿ ಖಾತೆಯನ್ನು ನೀಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ದಲಿತ ಸಮುದಾಯದ ಮುಖಂಡರಾದ ಗಣೇಶ್ ವೇಲಪುರಿ, ಉಮೇಶ್, ಮಂಜು ತೇಜೂರು, ರಾಮು, ಚಂದ್ರಣ್ಣ, ಭದ್ರಿ, ಹರೀಶ್ (ಅರಕಲಗೂಡು ದಸಂಸ ಸಂಚಾಲಕ),ಪುಟ್ಟರಾಜಪ್ಪ, ಕುಮಾರ್‌, ಮೋಹನ್, ಚಿನ್ನಸ್ವಾಮಿ, ಅಭಿಷೇಕ್, ಗುರು ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.=====*ಬಾಕ್ಸ್:ಎಚ್. ಸಿ. ಮಹದೇವಪ್ಪ ಅವರು ಮೈಸೂರು ಜಿಲ್ಲೆಯವರಾಗಿದ್ದರೂ ಹಾಸನ ಜಿಲ್ಲೆಯ ಜನರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದಾರೆ. ಹಲವು ವರ್ಷಗಳಿಂದ ಜಿಲ್ಲೆಯ ವಿವಿಧ ಸಾಮಾಜಿಕ ಹಾಗೂ ಅಭಿವೃದ್ಧಿ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಾ ಬಂದಿದ್ದಾರೆ. ಈ ಕಾರಣದಿಂದಲೇ ಹಾಸನ ಜಿಲ್ಲೆಯ ಜನರು ಅವರನ್ನು ತಮ್ಮ ಜಿಲ್ಲೆಯ ದತ್ತು ಪುತ್ರನಂತೆ ಕಾಣುತ್ತಾರೆ. ಅವರ ಸರಳತೆ, ಪ್ರಾಮಾಣಿಕತೆ, ಸಾಮಾಜಿಕ ಕಾಳಜಿ ಹಾಗೂ ಜನಪರ ಚಿಂತನೆಗಳು ರಾಜ್ಯದಾದ್ಯಂತ ಅವರಿಗೆ ವಿಶಿಷ್ಟ ಗೌರವ ತಂದುಕೊಟ್ಟಿವೆ ಎಂದು ಹುಡಾ ಮಾಜಿ ಅಧ್ಯಕ್ಷ ಕೃಷ್ಣ ಕುಮಾರ್‌ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಸನ- ಸೋಲಾಪುರ ರೈಲು ನಿಲುಗಡೆಗೆ ಸಚಿವ ಸೋಮಣ್ಣ ಚಾಲನೆ
ಸ್ವಚ್ಛತೆ ಎಂಬುದು ಪ್ರತಿಯೊಬ್ಬರ ಕರ್ತವ್ಯ ಎಂದ ಶಾಸಕ ಬಾಲಕೃಷ್ಣ