ನನಗೂ ಒಂದು ಅವಕಾಶ ನೀಡಿ: ಗೀತಾ ಮನವಿ

KannadaprabhaNewsNetwork | Published : May 6, 2024 12:32 AM

ಸಾರಾಂಶ

ಶಿರಾಳಕೊಪ್ಪ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೀತಾ ರೋಡ್ ಶೋ ಮೂಲಕ ಮತ ಯಾಚಿಸಿದರು. ಇದೇ ವೇಳೆ ನಟ ದುನಿಯಾ ವಿಜಯ್‌ ಸಾಥ್‌ ನೀಡಿದರು.

ಕನ್ನಡಪ್ರಭ ವಾರ್ತೆ ಶಿರಾಳಕೊಪ್ಪ/ ಭದ್ರಾವತಿ

ಯಾವುದೇ ಜಾತಿ ಧರ್ಮ ಇರಲಿ ಎಲ್ಲರನ್ನೂ ಒಟ್ಟಿಗೆ ಸಹಬಾಳ್ವೆಯಿಂದ ತೆಗೆದುಕೊಂಡು ಹೋಗುವ ಏಕೈಕ ಪಕ್ಷ ಕಾಂಗ್ರೆಸ್. ಈ ಹಿಂದೆ ಜಿಲ್ಲೆ ಜನತೆ ನಮ್ಮ ತಂದೆ ಬಂಗಾರಪ್ಪನವರಿಗೆ ಆರ್ಶೀವಾದ ಮಾಡಿದ್ದೀರಿ, ನನಗೂ ಒಂದು ಅವಕಾಶ ನೀಡಿ ಎಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೀತಾ ಹೇಳಿದರು.

ಪಟ್ಟಣದ ಬಸ್ ನಿಲ್ದಾಣದ ವೃತ್ತದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಪಕ್ಷದ ರೋಡ್ ಶೋನಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡಿದರು.

ಯಾವುದೇ ಅಪಪ್ರಚಾರಕ್ಕೆ ಕಿವಿಗೊಡಬೇಡಿ, ನಾನು ನಿಮ್ಮ ಸೇವೆ ಮಾಡಲು ಸದಾ ಸಿದ್ಧಳಿದ್ದೇನೆ ಆದ್ದರಿಂದ ನನಗೂ ಒಂದು ಅವಕಾಶ ಕೊಡಿ ನನ್ನ ಕೆಲಸದ ಕಾರ್ಯವೈಖರಿ ನಿಮಗೂ ಗೊತ್ತಾಗುತ್ತದೆ. ಕಾಂಗ್ರೆಸ್‌ ಪಕ್ಷ ನೀಡಿದ ೫ ಗ್ಯಾರಂಟಿಗಳನ್ನು ನೀಡಿ ನುಡಿದಂತೆ ನಡೆದಿದೆ. ಮುಂದೆಯೂ ಅದು ಇರುತ್ತೆ. ಚುನಾವಣೆ ನುಗಿದ ಮೇಲೆ ಗ್ಯಾರಂಟಿ ನಿಲ್ಲಿಸುತ್ತಾರೆ ಎನ್ನುವುದು ಶುದ್ಧ ಸುಳ್ಳು ನನಗೆ ಮತ ನೀಡಿ ಗೆಲ್ಲಿಸಿ ಎಂದು ವಿನಂತಿಸಿದರು.

ನಟ ದುನಿಯಾ ವಿಜಯ ಮಾತನಾಡಿ, ಮನುಷ್ಯರಾದ ನಾವು ರಾಜಕೀಯದಲ್ಲಿ ಜಾತಿ ಧರ್ಮ ಹುಡುಕಬಾರದು. ಎಲ್ಲರೂ ಒಂದೇ ಎಂದು ಭಾವಿಸಬೇಕು. ಬಡವರ ಹೊಟ್ಟೆ ತುಂಬಿಸುವುದು ಜಾತಿ ಧರ್ಮದಿಂದಲ್ಲ, ಅವರ ಹಸಿವನ್ನು ನೀಗಿಸುವುದರಿಂದ. ಅಂತಹ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿ ತೋರಿಸಿದ್ದಾರೆ. ಹಾಗಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೀತಕ್ಕನನ್ನು ಒಂದು ಬಾರಿ ಗೆಲ್ಲಿಸಿ ಎಂದು ಕೋರಿದರು.

ಕಾಂಗ್ರೆಸ್ ಪಕ್ಷದ ಮುಖಂಡ ನಾಗರಾಜಗೌಡ ಮಾತನಾಡಿ, ಪಕ್ಷದ ಅಭ್ಯರ್ಥಿ ಗೀತಾ ಪರ ಮತಚಲಾಯಿಸುವಂತೆ ಮನವಿ ಮಾಡಿದರು. ಗೋಣಿ ಮಾಲತೇಶ, ರಾಜಾಸಾಬ್, ಮಹೇಶ ತಾಳಗುಂದ ಇನ್ನಿತರರು ರೋಡ್ ಶೋನಲ್ಲಿ ಭಾಗಿಯಾಗಿದ್ದರು.ಗೀತಾ ಪರ ಮಯೂರ್ ಜಯಕುಮಾರ್ ಮತಬೇಟೆ

ಭದ್ರಾವತಿ: ಶಿವಮೊಗ್ಗ ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಪರವಾಗಿ ತಾಲೂಕಿನ ಅರಳಿಹಳ್ಳಿ ಗ್ರಾಮದಲ್ಲಿ ಭಾನುವಾರ ಬಹಿರಂಗಸಭೆಯಲ್ಲಿ ಕೇಂದ್ರ ಮಾಜಿ ಸಚಿವ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಯೂರ್ ಜಯಕುಮಾರ್ ಮತಯಾಚಿಸಿದರು.ಕೂಡ್ಲಿಗೆರೆ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಅರಳಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದವರು, ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬಹಿರಂಗ ಮತಯಾಚನೆಗೆ ಕೆಲವು ಗಂಟೆಗಳು ಮಾತ್ರ ಬಾಕಿ ಉಳಿದಿದ್ದ ಹಿನ್ನಲೆಯಲ್ಲಿ ಮಧ್ಯಾಹ್ನ ಬಹಿರಂಗಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಜನಸಾಮಾನ್ಯರು ನೆಮ್ಮದಿಯಿಂದ ಬದುಕುವ ನಿಟ್ಟಿನಲ್ಲಿ ಕಾಂಗ್ರೆಸ್ ಗರಿಷ್ಠಮಟ್ಟದ ಜನಪರ ಯೋಜನೆಗಳನ್ನು ರೂಪಿಸುವ ಭರವಸೆ ನೀಡಿದೆ. ಬಿಜೆಪಿ ದುರಾಡಳಿತ ಕೊನೆಯಾಗಿಸುವ ನಿಟ್ಟಿನಲ್ಲಿ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬೆಂಬಲಿಸಿ ಮತ ನೀಡಬೇಕೆಂದು ಮನವಿ ಮಾಡಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಮಣಿಶೇಖರ್, ತಮಿಳು ಸಂಘದ ಅಧ್ಯಕ್ಷ ಚಂದ್ರಶೇಖರ್, ಹಿರಿಯ ಮುಖಂಡ ಕಣ್ಣಪ್ಪ, ಕಾಂಗ್ರೆಸ್ ಮುಖಂಡರಾದ ರವಿಕುಮಾರ್, ಅರುಣ್ ಕುಮಾರ್ ಸೇರಿದಂತೆ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

Share this article