ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ವೇಣೂರಿನಲ್ಲಿ ಮಹಾಮಸ್ತಕಾಭಿಷೇಕ ಮಂಗಲೋತ್ಸವ ಸಮಾರಂಭ ಶನಿವಾರ ಕೊನೆಯ ಮಹಾಮಸ್ತಕಾಭಿಷೇಕದೊಂದಿಗೆ ನಡೆಯಿತು. ಮೂಡುಬಿದಿರೆ ಜೈನ ಮಠ ಸಹಿತ ರಾಜ್ಯದ ವಿವಿಧ ಭಾಗಗಳ ಶ್ರಾವಕ ಶ್ರಾವಿಕೆಯರು ಮಂಗಲೋತ್ಸವ ಮಹಾಮಸ್ತಕಾಭಿಷೇಕದಲ್ಲಿ ಪಾಲ್ಗೊಂಡರು.ಸರ್ವರಿಗೂ ಹಿತಕಾರಿಯಾದುದನ್ನು ತಿಳಿಸುವುದೇ ಧರ್ಮ. ಭಗವಾನ್ ಮಹಾವೀರ್ ಸ್ವಾಮಿ ನಿರ್ವಾಣ 2550 ವರ್ಷ ಹಾಗೂ ಚಾರಿತ್ರ ಚಕ್ರವರ್ತಿ 108ಶಾಂತಿ ಸಾಗರ ಆಚಾರ್ಯ ಪದರೋಹಣ, ಆಚಾರ್ಯ 108 ವಿದ್ಯಾನಂದ ಜನ್ನ ಶತಾಬ್ಧಿ ನಿಮಿತ್ತ ಈ ಮಹಾಮಸ್ತಕಾಭಿಷೇಕ ಸಂಪನ್ನಗೊಂಡಿರುವುದಾಗಿ ಮೂಡುಬಿದಿರೆ ಜೈನ ಮಠದ ಭಟ್ಟಾರಕ ಶ್ರೀಗಳು ತಿಳಿಸಿದರು.
ವೇಣೂರು ಪಾರ್ಶ್ವನಾಥ ಬಸದಿಯಿಂದ ಕಲ್ಲು ಬಸದಿ ವರೆಗೆ ರಜತ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯ ವರ್ಯ ಮಹಾ ಸ್ವಾಮೀಜಿ ಮಾರ್ಗದರ್ಶನ, ನೇತೃತ್ವದಲ್ಲಿ ಪ್ರಥಮ ಕಲಶ ಅಭಿಷೇಕವನ್ನು ಅರುವ ಅಳದಂಗಡಿ ಅರಸ ಡಾ.ಪದ್ಮಪ್ರಸಾದ್ ಅಜಿಲರು ನೆರವೇರಿಸಿದರು.ಬಳಿಕ ಪಟ್ಣ ಶೆಟ್ಟಿ ಸುದೇಶ್ ಕುಮಾರ್, ಪಡುಬೀಡು ಕಿನ್ಯಕ್ಕ ಅರಸ ರತ್ನಕರ ಬಲ್ಲಾಳ್, ಸತೀಶ್ ಪಡಿವಾಳ್, ಸೀಮಂದರ್ ಅರಿಗಾ ಕುಳವಳಿಕೆ ಕಡಬ, ಸಂಜಯಂತ ಕುಮಾರ್ ಧನಕೀರ್ತಿ ಬಲಿಪ, ಕ್ರಮವಾಗಿ ವಿವಿಧ ಕಲಶ ಅಭಿಷೇಕ ನೆರವೇರಿಸಿದರು.
ಮೂಡುಬಿದಿರೆ ಜೈನ ಮಠ ವತಿಯಿಂದ ಅಮೆರಿಕದಲ್ಲಿ ನಾಲ್ಕು ದಶಕದಿಂದ ವೈದ್ಯಕೀಯ ಸೇವೆ ಸಲ್ಲಿಸಿ ಅಷ್ಟ ಗಂಧ ಅಭಿಷೇಕ ವಹಿಸಿಕೊಂಡ ಡಾ.ವಸಂತ ಕುಮಾರಯ್ಯ ದಂಪತಿ, ಅಜಿಲ ಅರಸರನ್ನು, ಪ್ರವೀಣ್ ಇಂದ್ರ, ಅಭಯಚಂದ್ರ ಜೈನ್, ಪುಷ್ಪರಾಜ್ ಜೈನ್, ಶಿವಪ್ರಸಾದ್ ಅಜಿಲ ಹಾಗೂ ಅಭಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಿವಿಧ ಮಹನೀಯರನ್ನು ಸ್ವಾಮೀಜಿ ಗೌರವಿಸಿದರು.ಈ ಬಾರಿಯ ಕೊನೆಯ ಅಭಿಷೇಕದಂದು ಹೆಚ್ಚುವರಿಯಾಗಿ ಚಂದನ, ಸರ್ವ ಔಷಧಿ, ಸುಗಂಧ ಕಲಶ, ರತ್ನ ಕನಕ, ಪುಷ್ಪ ವೃಷ್ಟಿ ಅಭಿಷೇಕ ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ವಿದೇಶದ ಜೈನ ಭಕ್ತರು ಸುಮಾರು 5500 ಜನ ಪಾಲ್ಗೊಂಡು 1008 ಕಲಶ ಅಭಿಷೇಕದ ಪುಣ್ಯ ಲಾಭ ಪಡೆದುಕೊಂಡರು. ಸುಮಾರು 800 ಕಲಶ ಉಚಿತವಾಗಿ ಹಂಚಲಾಗಿತ್ತು.ರಾತ್ರಿ 8.35ರಿಂದ ಪಂಚಾಮೃತ ಅಭಿಷೇಕ ಆರಂಭಗೊಂಡಿತು. ಮಹಾಶಾಂತಿ ಧಾರವನ್ನು ಕಡಬ ಹೇಮಲತಾ ರಾಜರತ್ನ ಆರಿಗ ನೆರವೇರಿಸಿದರು. ಬಳಿಕ ಮಹಾ ಮಂಗಳಾರತಿ, ಸ್ವಾಮೀಜಿಗಳ ಪಾದ ಪೂಜೆ ನೆರವೇರಿತು.