ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಯಾರು ಬೇಕಾದರೂ ಅವರವರ ಜಾತಿ ಮೀಸಲಾತಿಯಡಿ ಸಚಿವ ಸ್ಥಾನದ ಆಕಾಂಕ್ಷಿಯಾಗಬಹುದು. ಅದರಂತೆ ನಾನೂ ಕೂಡ ಹಿರಿತನ, ಅನುಭವನದ ಹಿನ್ನಲೆಯಲ್ಲಿ ನನ್ನ ಜಾತಿ ಮೀಸಲಿನಲ್ಲಿ ಸಚಿವ ಸ್ಥಾನ ನೀಡುವಂತೆ ಹೈಕಮಾಂಡ್‌ಗೆ ಒತ್ತಾಯಿಸಿದ್ದೇನೇಯೇ ವಿನಃ ಯಾರನ್ನೋ ಕೈಬಿಟ್ಟು ಯಾರಿಗೂ ಕೊಡಬೇಡಿ, ನನಗೆ ಕೊಡಿ ಎಂದು ಕೇಳಿಲ್ಲ ಎಂದು ಶಾಸಕ ಹಾಗೂ ಕೆಎಸ್‌ಡಿಎಲ್ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1981ರಿಂದ ಪಿಕೆಪಿಎಸ್‌ನಿಂದ ನಾನು ರಾಜಕೀಯ ಪ್ರಾರಂಭಿಸಿ ಎಸ್.ಬಂಗಾರಪ್ಪನವರ ಕಾಲದಲ್ಲಿ ನನಗೆ ಗೊತ್ತಿಲ್ಲದೇ ನಾನು ಕಾರ್ಮಿಕ ಸಚಿವನಾಗಿದ್ದೆ. ಅಲ್ಲಿಂದ ಇಲ್ಲಿಯ ತನಕ ಕಾಂಗ್ರೆಸ್ ಪಕ್ಷ ನೀಡಿದ ಎಲ್ಲ ಸ್ಥಾನಮಾನಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದೇನೆ. ಪ್ರತಿ ಬಾರಿಯೂ ಸರ್ಕಾರ ರಚನೆಯಲ್ಲಿ ಸಚಿವ ಸ್ಥಾನಗಳ ಪಟ್ಟಿಯಲ್ಲಿ ನನ್ನ ಹೆಸರಿತ್ತು. ಆದರೆ, ಕೊನೆ ಕ್ಷಣದಲ್ಲಿ ನನ್ನ ಹೆಸರು ಕೈಬಿಟ್ಟು ಬೇರೆಯವರಿಗೆ ಅವಕಾಶ ನೀಡಲಾಗುತ್ತಿತ್ತು. ಇದರ ಹಿಂದೆ ರಾಜಕೀಯ ಷಡ್ಯಂತ್ರವಲ್ಲದೇ ಬೇರೆನು. ಯಾವುದೇ ಒಂದು ಕ್ಷೇತ್ರದ ಅಭಿವೃದ್ಧಿಯಾಗಲು ಮಂತ್ರಿಯಾದರೆ ಮಾತ್ರ ಸಾಧ್ಯ ಎಂಬುದು ಇಂದಿನ ರಾಜಕಾರಣಿಗಳಿಗೆ ಗೊತ್ತಾಗತೊಡಗಿದೆ. ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರು ತಮ್ಮ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಕೇವಲ ಶಾಸಕರಾಗಿ ಉಳಿದರೆ ಅಭಿವೃದ್ಧಿ ಸಾಧ್ಯನಾ ಎಂಬ ಪ್ರಶ್ನೆ ಕಾಡುತ್ತಿದೆ ಎಂದರು.ರಾಜಕೀಯ ವ್ಯವಸ್ಥೆಯಲ್ಲಿ ಕೆಲವೊಂದು ಸಂದರ್ಭದಲ್ಲಿ ಜಿಲ್ಲೆಯ ಬಹುತೇಕ ಎಲ್ಲ ಶಾಸಕರಿಗೆ ಏನೇಲ್ಲ ಸಹಕಾರ ಕೊಟ್ಟಿದ್ದೇನೆ ಎಂಬುದದನ್ನು ಒಂದು ಕ್ಷಣ ಅರ್ಥೈಸಿಕೊಳ್ಳಬೇಕಿದೆ. ಯಶವಂತರಾಯಗೌಡ ಪಾಟೀಲರ ಹೇಳಿಕೆ ಬಗ್ಗೆ ಯಾರೂ ತಪ್ಪಾಗಿ ಅರ್ಥೈಸಿಕೊಳ್ಳುವ ಮತು ತಿರುಚುವ ಅಗತ್ಯವಿಲ್ಲ. ಹಾಗಂತ ನಾನು ಹೊಟ್ಟೆ ಕಿಚ್ಚಿಗೆ ಏನೇನೋ ಹೇಳಿ ಪಕ್ಷಕ್ಕೆ ಹಾಗೂ ಅವರ ಘನತೆ ದಕ್ಕೆ ತರುವುದಿಲ್ಲ ಎಂದು ಹೇಳಿದರು.ಈ ವೇಳೆ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ, ತಾಲೂಕು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ರಾಜುಗೌಡ ಗೌಡರ, ಉದ್ಯಮಿ ಶರಣು ಸಜ್ಜನ, ಗೋಪಿ ಮಡಿವಾಳರ, ಶಿವು ಶಿವಪೂರಿ, ಸಿಕಂದರ ಜಾನ್ವೇಕರ, ರಾಜೇಂದ್ರಗೌಡ ರಾಯಗೊಂಡ, ರಾಯನಗೌಡ ತಾತರಡ್ಡಿ ಸೇರಿ ಹಲವರು ಇದ್ದರು.ಕೋಟ್‌ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲರು ನನ್ನ ಸಹೋದರಂತೆ ಅನ್ಯೋನ್ಯದಿಂದ ಬೆಳೆದು ಬಂದಿದ್ದೇವೆ. ಅವರು ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದು ಹೇಳಿಕೊಂಡಿರುವುದರಲ್ಲಿ ತಪ್ಪೇನಿದೆ?. ಅವರ ಜಾತಿಲೆಕ್ಕಾಚಾರದಲ್ಲಿ ಮಂತ್ರಿ ಸ್ಥಾನ ಕೇಳಿದ್ದಾರೆ. ಜಿಲ್ಲೆಯ ಎಲ್ಲ ಶಾಸಕರು ಸಚಿವರು ಒಗ್ಗಟ್ಟಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹೈಕಮಾಂಡ್ ಬಳಿ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಜಿಲ್ಲೆಯಲ್ಲಿ ಯಾರಿಗಾದರೂ ಮಂತ್ರಿ ಮಾಡಿ ಎಂದು ಪತ್ರ ಬರೆದು ಮನವಿ ಮಾಡಿಕೊಳ್ಳೋಣ. ಆಗ ಹೈ ಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವೇಲ್ಲ ಬದ್ದರಾಗಿರೋಣ.ಸಿ.ಎಸ್.ನಾಡಗೌಡ(ಅಪ್ಪಾಜಿ), ಶಾಸಕ, ಕೆಎಸ್‌ಡಿಎಲ್ ಅಧ್ಯಕ್ಷರು.