ದುಡ್ಡು ಕೊಡಿ, ಮನೆ ಪಡಿ ಕಾಂಗ್ರೆಸ್ ಹೊಸ ಘೋಷವಾಕ್ಯ : ಜೋಶಿ

KannadaprabhaNewsNetwork |  
Published : Jun 23, 2025, 01:17 AM ISTUpdated : Jun 23, 2025, 12:09 PM IST
Prahlad Joshi

ಸಾರಾಂಶ

ಸಚಿವ ಸಂತೋಷ ಲಾಡ್ ಮಾತೆತ್ತಿದರೆ ಬರೀ ಒಬಾಮಾ, ಟ್ರಂಪ್ ಬಗ್ಗೆ ಮಾತನಾಡುತ್ತಾರೆ. ಆಧಾರವಿಲ್ಲದೆ ಮಾತನಾಡುತ್ತಾರೆ. ಅವರ ಇಲಾಖೆ ಹಗರಣ ಹೊರ ಬಂದ ಮೇಲೆ, ಮಂತ್ರಿ ಪದವಿ ಉಳಿಸಿಕೊಳ್ಳಲು ಮೋದಿ ಅವರಿಗೆ ಬೈಯುತ್ತಿದ್ದಾರೆ. ಬಾಲಿಶವಾಗಿ ಮಾತನಾಡುತ್ತಿದ್ದು, ಅವರ ಹೇಳಿಕೆ ಪ್ರತಿಕ್ರಿಯಿಸಲ್ಲ.

ಹುಬ್ಬಳ್ಳಿ: ದುಡ್ಡು ಕೊಡಿ, ಮನೆ ಪಡಿ-ಇದು ಕಾಂಗ್ರೆಸ್ ಹೊಸ ಘೋಷವಾಕ್ಯ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಲೇವಡಿ ಮಾಡಿದರು.

ಶಾಸಕ ಬಿ.ಆರ್‌. ಪಾಟೀಲ ಅವರು ವಸತಿ ಇಲಾಖೆಯಲ್ಲಿ ದುಡ್ಡು ಕೊಟ್ಟವರಿಗೆ ಮಾತ್ರ ಮನೆ ಹಂಚಿಕೆ ಮಾಡಲಾಗುತ್ತಿದೆ ಎಂಬ ಹೇಳಿಕೆ ಕುರಿತಂತೆ ಭಾನುವಾರ ಪ್ರತಿಕ್ರಿಯೆ ನೀಡಿದರು.

ಶಾಸಕರಾದ ಬಿ.ಆರ್. ಪಾಟೀಲ, ಬಸವರಾಜ ರಾಯರಡ್ಡಿ ಅವರು ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಪಾಟೀಲ ಅವರ ಬಳಿ ಅದಕ್ಕೆ ಸಂಬಂಧಿಸಿದ ದಾಖಲೆಗಳು ಇರುವುದರಿಂದ ಅವರ ಮೇಲೆ ಕ್ರಮ ಕೈಗೊಳ್ಳುವ ತಾಕತ್ತು ಆ ಪಕ್ಷದವರಿಗಿಲ್ಲ ಎಂದು ವ್ಯಂಗ್ಯವಾಡಿದರು.

ಆರು ತಿಂಗಳ ನಂತರ ಮುಖ್ಯಮಂತ್ರಿ ಸ್ಥಾನದಲ್ಲಿ ತಾವು ಇರುವುದಿಲ್ಲ ಎಂದು ಸಿದ್ದರಾಮಯ್ಯ ಅವರಿಗೆ ಅನಿಸಿದೆ. ಹೀಗಾಗಿ ಅವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸರ್ಕಾರದ ಮೇಲೆ ಸಿಎಂಗೆ ಹಿಡಿತ ಇಲ್ಲ ಎಂದು ಟೀಕಿಸಿದರು.

ವಸತಿ ಯೋಜನೆ ಮನೆಗಳಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡುವಂತೆ ಕೇಂದ್ರ ಸರ್ಕಾರ 2019ರಲ್ಲಿ ಯಾವುದೇ ಸುತ್ತೋಲೆ ಹೊರಡಿಸಿಲ್ಲ. ಈ ಆದೇಶ ಇದ್ದರೆ ಸಿಎಂ ಕೂಡಲೇ ಬಿಡುಗಡೆ ಮಾಡಲಿ ಎಂದು ಸಿಎಂಗೆ ಸವಾಲು ಹಾಕಿದರು.

ಸಾರ್ವಜನಿಕ ಕಾರ್ಯಕ್ರಮದಲ್ಲಿ ರಾಜಕೀಯ ಮಾತನಾಡಬಾರದು ಎಂದು ಕುಂದಾಪುರ ಪೊಲೀಸರು ಚಕ್ರವರ್ತಿ ಸೂಲಿಬೆಲೆ ಅವರಿಗೆ ನೋಟಿಸ್ ನೀಡಿದ್ದಾರೆ. ನೋಟಿಸ್ ನೀಡಿದ ಪೊಲೀಸ್ ಅಧಿಕಾರಿಗೆ ಬುದ್ಧಿ ಇಲ್ಲವೇ? ಇದು ಅಸಹಿಷ್ಣುತೆಯ ಪರಮಾವಧಿ ಎಂದರು.

ಬಾಲಿಶ ಮಾತು: ಸಚಿವ ಸಂತೋಷ ಲಾಡ್ ಮಾತೆತ್ತಿದರೆ ಬರೀ ಒಬಾಮಾ, ಟ್ರಂಪ್ ಬಗ್ಗೆ ಮಾತನಾಡುತ್ತಾರೆ. ಆಧಾರವಿಲ್ಲದೆ ಮಾತನಾಡುತ್ತಾರೆ. ಅವರ ಇಲಾಖೆ ಹಗರಣ ಹೊರ ಬಂದ ಮೇಲೆ, ಮಂತ್ರಿ ಪದವಿ ಉಳಿಸಿಕೊಳ್ಳಲು ಮೋದಿ ಅವರಿಗೆ ಬೈಯುತ್ತಿದ್ದಾರೆ. ಬಾಲಿಶವಾಗಿ ಮಾತನಾಡುತ್ತಿದ್ದು, ಅವರ ಹೇಳಿಕೆ ಪ್ರತಿಕ್ರಿಯಿಸಲ್ಲ ಎಂದರು.

ಕಾನೂನಿನ ಮೇಲೆ ಗೌರವ ಇಲ್ಲ: 2019ರ ಅಧಿಸೂಚನೆಯಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಚಾಲಕ, ಚಾಲಕ ಕಂ ನಿರ್ವಾಹಕ ಸೇರಿ 2814 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು. ಆದರೆ, ಒಂದು ಸಾವಿರ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ನೀಡಿರುವುದು ತಪ್ಪು. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಕರೆ ಮಾಡಿ ಸಮಸ್ಯೆ ಸರಿಪಡಿಸುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಒಳಮೀಸಲಾತಿ ಜಾರಿಯಾದರೆ ನೇಮಕಾತಿ ಮತ್ತಷ್ಟು ವಿಳಂಬವಾಗುತ್ತದೆ ಎಂಬುದು ಅಭ್ಯರ್ಥಿಗಳ ಆತಂಕ. ಹೀಗಾಗಿ ನಿರ್ವಾಹಕ ಪರವಾನಗಿ ಇಲ್ಲದ ಅಭ್ಯರ್ಥಿಗಳಿಗೆ ಪರವಾನಗಿ ಮಾಡಿಸಿಕೊಳ್ಳಲು ಕಾಲವಕಾಶ ನೀಡಿ, ನೇಮಕಾತಿ ಮಾಡಿಕೊಳ್ಳಬೇಕು. ಅಭ್ಯರ್ಥಿಗಳಿಗೆ ಅನ್ಯಾಯವಾಗಬಾರದು ಎಂದರು.

ವಿದೇಶಿ ವ್ಯಾಸಂಗಕ್ಕಾಗಿ ಮುಸ್ಲಿಂ ವಿದ್ಯಾರ್ಥಿಗಳಿಗೆ ₹30 ಲಕ್ಷ ಬಡ್ಡಿ ರಹಿತ ಸಾಲ, ವಕ್ಫ್ ಆಸ್ತಿ ರಕ್ಷಣೆಗೆ ₹150 ಕೋಟಿ, ಮುಸ್ಲಿಮರ ಅಭಿವೃದ್ಧಿಗೆ ₹4 ಸಾವಿರ ಕೋಟಿ, ಅಲ್ಪಸಂಖ್ಯಾತರ ಕಾಲನಿ ಅಭಿವೃದ್ಧಿಗೆ ₹1 ಸಾವಿರ ಕೋಟಿಯನ್ನು ನೀಡುತ್ತಿದೆ. ಇವೆಲ್ಲವೂ ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ಉದಾಹರಣೆ ಎಂದರು.

PREV
Read more Articles on

Recommended Stories

ಸೆಂಚುರಿ ಕ್ಲಬ್‌ ಸೇರಿಯೇ ಬಿಟ್ಟಿತು ಸು ಫ್ರಂ ಸೋ
ಶ್ರೀಕೃಷ್ಣನೆಂಬ ನಿತ್ಯ ಸತ್ಯನಿಗೆ ಜನ್ಮಾಷ್ಟಮೀ