ಪತ್ರಕರ್ತರು ತಂತ್ರಜ್ಞಾನವನ್ನು ಮಾಧ್ಯಮ ಕ್ಷೇತ್ರದಲ್ಲಿ ರೂಢಿಸಿಕೊಂಡರೆ ಉತ್ತಮ ಪತ್ರಕರ್ತರಾಗಿ ಹೊರಬರಬಹುದು ಎಂದು ಪತ್ರಕರ್ತ ಮರಿಯಪ್ಪ ಹೇಳಿದರು.
ಕನ್ನಡಪ್ರಭ ವಾರ್ತೆ ತುಮಕೂರು
ಪತ್ರಕರ್ತರು ತಂತ್ರಜ್ಞಾನವನ್ನು ಮಾಧ್ಯಮ ಕ್ಷೇತ್ರದಲ್ಲಿ ರೂಢಿಸಿಕೊಂಡರೆ ಉತ್ತಮ ಪತ್ರಕರ್ತರಾಗಿ ಹೊರಬರಬಹುದು ಎಂದು ಪತ್ರಕರ್ತ ಮರಿಯಪ್ಪ ಹೇಳಿದರು. ನಗರದ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ಕನ್ನಡ ಪತ್ರಿಕಾ ದಿನಾಚರಣೆ ನಿಮಿತ್ತ ವಿದ್ಯಾರ್ಥಿಗಳು ಹೊರ ತಂದಿದ್ದ ತಂತ್ರಜ್ಞಾನ ಆಧಾರಿತ ಎರಡು ವಿಶೇಷ ಕಾರ್ಯಕ್ರಮಗಳ ಸಾಂಕೇತಿಕ ಪ್ರದರ್ಶನವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ತಂತ್ರಜ್ಞಾನವು ಶೀಘ್ರವಾಗಿ ಮಾಹಿತಿ ಹಾಗೂ ಸುದ್ದಿಗಳನ್ನು ತಿಳಿದುಕೊಳ್ಳಲು ಪ್ರಯೋಜನಕಾರಿಯಾಗಿದೆ. ಈ ತಂತ್ರಜ್ಞಾನದ ಪ್ರಭಾವದಿಂದ ಪತ್ರಕರ್ತರ ಆಲೋಚನೆ, ಬರವಣಿಗೆಯ ಶೈಲಿ ಬದಲಾಗುತ್ತಿದೆ ಎಂದರು. ಇಂದು ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ನಾಗರಿಕ ಪತ್ರಿಕೋದ್ಯಮ ಹೆಚ್ಚಾಗುತ್ತಿದೆ. ದೃಶ್ಯ ಮತ್ತು ಮುದ್ರಣ ಮಾಧ್ಯಮಗಳಿಗೆ ಹೊಸ ವಿಚಾರಗಳನ್ನು ನೀಡುವಂತಹದ್ದು ಬಹುದೊಡ್ಡ ಸವಾಲಾಗಿದೆ. ಹಾಗಾಗಿ ಪತ್ರಕರ್ತರು ಓದುಗರ ಅಭಿರುಚಿಗೆ ಅನುಗುಣವಾಗಿ ಹೊಸ ಹೊಸ ಮಾಹಿತಿಗಳನ್ನು ನೀಡುವಂತಹ ಕೌಶಲ್ಯ ಪತ್ರಿಕೋದ್ಯಮದ ಯಾವುದೇ ಕ್ಷೇತ್ರದಲ್ಲಿ ಆದರೂ ಉದ್ಯೋಗವನ್ನು ಪಡೆಯಬಹುದು ಎಂದು ತಿಳಿಸಿದರು. ಪತ್ರಕರ್ತ ಈರಣ್ಣ ಮಾತನಾಡಿ, ಇತ್ತೀಚಿನ ವಿದ್ಯಮಾನದಲ್ಲಿ ತಂತ್ರಜ್ಞಾನದಿಂದ ಸಮಾಜ ಬದಲಾವಣೆ ಹೊಂದುತ್ತಿದ್ದರೂ ಸಹ ಮುದ್ರಣ ಮಾಧ್ಯಮ ಎನ್ನುವಂತಹದ್ದು ತನ್ನ ಗಟ್ಟಿ ನೆಲೆಯನ್ನ ಹೊಂದಿದೆ. ಸರ್ಕಾರವನ್ನು ತಿದ್ದಿ ತಿಡಿ ಸುಸಜ್ಜಿತ ಸಮಾಜವನ್ನಾಗಿ ನಿರ್ಮಾಣ ಮಾಡುವಲ್ಲಿ ಮಾಧ್ಯಮಗಳು ಬಹು ಮುಖ್ಯ ಪಾತ್ರವನ್ನು ವಹಿಸುತ್ತವೆ ಎಂದರು.ಇಂದು ಹಳೆಗನ್ನಡ ಪದಗಳು ಕಣ್ಮರೆಯಾಗುತ್ತಿವೆ. ಕೇವಲ ಕೆಲವೇ ಪತ್ರಿಕೆಗಳಲ್ಲಿ ಮಾತ್ರ ಕಾಣಸಿಗುತ್ತಿವೆ. ಇಂದಿನ ಜನರು ನಿರೀಕ್ಷಿಸುತ್ತಿರುವಂತಹದ್ದು ಅಥವಾ ಪತ್ರಿಕೋದ್ಯಮದಲ್ಲಿ ಇಂದು ಅಗತ್ಯವಾಗಿ ಬೇಕಾಗಿರುವಂತಹದ್ದು ಸಾಹಿತ್ಯದ ಜ್ಞಾನ, ಮತ್ತು ಬರವಣಿಗೆ. ಹಾಗಾಗಿ ಭವಿಷ್ಯದಲ್ಲಿ ವಿದ್ಯಾರ್ಥಿಗಳು ಉತ್ತಮ ಪತ್ರಕರ್ತರಾಗಿ ರೂಪುಗೊಳ್ಳಲು ಬರವಣಿಗೆ ಮತ್ತು ಸಾಹಿತ್ಯವನ್ನು ರೂಢಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಬಿ.ಟಿ ಮುದ್ದೇಶ್, ಪ್ರಾಂಶುಪಾಲೆ ಡಾ.ಮಮತ ಜಿ, ಸಹಾಯಕ ಪ್ರಾಧ್ಯಾಪಕಿ ಡಾ.ಜ್ಯೋತಿ ಸಿ, ಶ್ವೇತಾ, ಎಂ.ಪಿ, ಕಿರಣ್ ಕೆ.ಎನ್, ವಿನ್ಯಾಸಗಾರ ಶಿವಕುಮಾರ್ ಎಸ್, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.