ಶಿರಹಟ್ಟಿ: ಮಕ್ಕಳು ದೈಹಿಕವಾಗಿಯಷ್ಟೇ ಅಲ್ಲದೇ ಮಾನಸಿಕವಾಗಿಯೂ ಸದೃಢರಾಗಿರಬೇಕು. ಈ ದಿಸೆಯಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವುದು ಅವರ ಚಟುವಟಿಕೆಗಳನ್ನು ಗಮನಿಸಿ ಕ್ರಿಯಾಶೀಲರಾಗಿರುವಂತೆ ನೋಡಿಕೊಳ್ಳಬೇಕು. ಮಕ್ಕಳ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸದೆ ಗುಣಮಟ್ಟದ ಪೌಷ್ಟಿಕ ಆಹಾರ ನೀಡಿ ಓದಿಗೆ ಎಲ್ಲರೂ ಸಹಕರಿಸಬೇಕು ಎಂದು ಪಪಂ ಮಾಜಿ ಅಧ್ಯಕ್ಷ ಹಾಗೂ ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ ಲಕ್ಕುಂಡಿ ಕರೆ ನೀಡಿದರು.
ಇಂದಿನ ಮಕ್ಕಳು ನಾಳಿನ ಪ್ರಜೆಗಳಾಗುವುದರಿಂದ ಅವರನ್ನು ಸದೃಢ ಪ್ರಜೆಗಳನ್ನಾಗಿಸಬೇಕು. ಸದೃಢ ಪ್ರಜೆಗಳಿಂದ ಮಾತ್ರ ದೇಶ ಸುಭಿಕ್ಷವಾಗಲು ಸಾಧ್ಯ. ಯಾವುದೇ ಮಗು ಹಸಿವು, ಅಪೌಷ್ಟಿಕತೆಯಿಂದ ಬಳಲದಂತೆ ನೋಡಿಕೊಳ್ಳಬೇಕು. ಈಗಿನ ಸಾಮಾಜಿಕ ಪರಿಸ್ಥಿತಿಯಲ್ಲಿ ಮಕ್ಕಳನ್ನು ಸದೃಢರನ್ನಾಗಿ ಮಾಡಲು ಏನೇನು ಆಹಾರ ಕೊಡಬೇಕೆಂಬ ಬಗ್ಗೆ ಶಾಲಾ ಸಿಬ್ಬಂದಿ, ಎಸ್‌ಡಿಎಂಸಿ ಜವಾಬ್ದಾರಿ ವಹಿಸಬೇಕೆಂದರು.
ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳ ಪಾಲಕರು ಹೆಚ್ಚಿನ ಸಂಖ್ಯೆಯಲ್ಲಿ ಬಡವರು ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರೆ ಹೆಚ್ಚಿದ್ದಾರೆ. ಅಂತಹ ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ಪೌಷ್ಟಿಕ ಆಹಾರ ನೀಡಿ ಅವರ ಭವಿಷ್ಯ ಉಜ್ವಲಗೊಳಿಸಬೇಕು ಎಂದರು.ಸಿಸಿಎನ್ ಸರಕಾರಿ ಪ್ರೌಢ ಶಾಲೆಯಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ಹಾಜರಾತಿ ಸಂಖ್ಯೆ ಹೆಚ್ಚುತ್ತಲೇ ಇದೆ. ಇದಕ್ಕನುಗುಣವಾಗಿ ಶಾಲಾ ಕೊಠಡಿ, ಆಟದ ಮೈದಾನ, ಗ್ರಂಥಾಲಯ ಅಗತ್ಯವಿದ್ದು, ಈಗಾಗಲೇ ಸಭಾಪತಿ ಬಸವರಾಜ ಹೊರಟ್ಟಿ, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಅವರಿಗೆ ಶಾಲೆ ವತಿಯಿಂದ ಲಿಖಿತ ಮನವಿ ಪತ್ರ ಕೂಡ ನೀಡಲಾಗಿದೆ. ಆದಷ್ಟು ಬೇಗ ಅನುದಾನ ಮಂಜೂರ ಮಾಡಿ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಸಹಕರಿಸಬೆಕು ಎಂದು ವಿನಂತಿಸಿದರು.