ಕನ್ನಡಪ್ರಭ ವಾರ್ತೆ ಬೇಲೂರು ಪಟ್ಟಣದ 11ನೇ ವಾರ್ಡಿನಲ್ಲಿ ವಾಸವಾಗಿರುವ ಭದ್ರೆಗೌಡ ಎಂಬುವರು ವಾಸಿಸುತ್ತಿದ್ದ ಮನೆಯು ಕಳೆದ ಮಳೆಗಾಲದಲ್ಲಿ ಬಿದ್ದುಹೋದ ಕಾರಣ, ಬೇರೆ ಮನೆಯನ್ನು ಅದೇ ಜಾಗದಲ್ಲಿ ಕಟ್ಟಲು ಅನುಮತಿಗಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರೂ ಸಂಬಂಧಪಟ್ಟ ಇಲಾಖೆ ಅನುಮತಿ ನೀಡುತ್ತಿಲ್ಲ . ವಿಷ ಕೊಡಿ, ಇಲ್ಲಾ ಮನೆ ಕಟ್ಟಲು ಅನುಮತಿ ಕೊಡಿ ಎಂದು ಕುಟುಂಬದವರು ತಮ್ಮ ಅಸಹಾಯಕತೆ ತೋಡಿಕೊಂಡರು.
ಬಿಜೆಪಿ ಮುಖಂಡ ಹಾಗೂ ನಿವಾಸಿ ಹೇಮಣ್ಣ ಮಾತನಾಡಿ, ನಾವು ಇಲ್ಲಿ ಬಹಳ ವರ್ಷಗಳಿಂದ ವಾಸವಾಗಿದ್ದೇವೆ, ಒಂದು ಸಣ್ಣ ಮನೆಯನ್ನು ಕಟ್ಟಲು ಅನುಮತಿ ನೀಡದ ಸರ್ಕಾರಕ್ಕೆ ದಿಕ್ಕಾರ, ಉಳ್ಳವರಿಗೆ ಮನೆ ಅಥವಾ ಕಟ್ಟಡ ಕಟ್ಟಿಕೊಳ್ಳಲು ಅನುಮತಿ ಹೇಗೋ ದೊರೆಯುತ್ತದೆ ಆದರೆ ನಮ್ಮಂತ ಬಡವರಿಗೆ ಅನುಮತಿ ದೊರೆಯುವುದು ಕಷ್ಟಕರವಾಗಿದೆ, ಅನುಮತಿ ನೀಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದರು.
ಈ ವೇಳೆ ವಾರ್ಡಿನ ನಿವಾಸಿಗಳಾದ ಕಮಲಮ್ಮ,ಪ್ರಕಾಶ್, ಸವಿತಾ, ಲಕ್ಷ್ಮಿ, ಮೀನಾಕ್ಷಿ, ದುರ್ಗಮ್ಮ, ರಾಜಣ್ಣ, ಲೀಲಾವತಿ ಇನ್ನೂ ಮುಂತಾದವರು ಹಾಜರಿದ್ದರು.