ಸಿದ್ದಾಪುರ; ಭಕ್ತಿಯಿಂದ ದೇವರ ದರ್ಶನ ಮಾಡಿದರೆ ಶೀಘ್ರ ಫಲ ದೊರೆಯುತ್ತದೆ. ಶ್ರದ್ಧೆಗೆ, ಸಂಸ್ಕಾರಕ್ಕೆ ಆದ್ಯತೆ ಕೊಡಬೇಕು ಎಂದು ಶ್ರೀಮನ್ನೆಲೆಮಾವುಮಠದ ಮಾಧವಾನಂದ ಭಾರತೀ ಶ್ರೀ ನುಡಿದರು.
ಹೊಸನಗರದ ಶ್ರೀಸದಾನಂದ ಶಿವಯೋಗ ಆಶ್ರಮದ ಮುನಿಪ್ರ ಅಭಿನವ ಚನ್ನಬಸವ ಸ್ವಾಮೀಜಿ ಆಶೀರ್ವಚನ ನೀಡಿ, ನಾನು ಅನ್ನುವುದನ್ನು ಬಿಡಬೇಕು. ಬೇಕು ಎನ್ನುವ ಆಕಾಂಕ್ಷೆ ಬಿಡಬೇಕು. ಜೊತೆಗೆ ಸಂಕುಚಿತ ಭಾವನೆ ಕೂಡ ಬಿಡಬೇಕು. ಆಗ ಎಲ್ಲರಿಗೂ ಶಾಂತಿ ಸಾಧ್ಯ ದೊರೆಯುತ್ತದೆ. ಏಕ ಮುಖಿಗಳು ಲೋಕ ಮುಖಿಯಾಗಬೇಕು ಎಂದರು.
ಶಿರಳಗಿ ರಾಜಾರಾಮ ಚೈತನ್ಯ ಕ್ಷೇತ್ರದ ಬ್ರಹ್ಮಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ ಪ್ರಕೃತಿ ಜಡವಲ್ಲ. ಅದು ಭಗವಂತನ ಪ್ರತಿರೂಪ. ಬೇರೆಯವರು ಪ್ಲಾಸ್ಟಿಕ್ ಎಸೆದರೆ ಬಿಡಿಸಬೇಕು. ನಾವು ಅದನ್ನು ಮಾಡುತ್ತಿದ್ದರೆ ಬಿಡಬೇಕು. ಶಾಲೆಯಲ್ಲಿ ಮಕ್ಕಳಿಗೆ ಆ ಮೌಲ್ಯ ತಿಳಿಸಬೇಕು ಎಂದರು.ಧರ್ಮಸ್ಥಳ ಯೋಜನೆಯ ನಿವೃತ್ತ ಕಾರ್ಯನಿರ್ವಾಹಕ ಅಧಿಕಾರಿ ಕಾರ್ಯದಕ್ಷ ಪ್ರಶಸ್ತಿ ಸ್ವೀಕರಿಸಿದ ಡಾ. ಎಲ್.ಎಚ್ .ಮಂಜುನಾಥ, ಇದೊಂದು ಪುಣ್ಯದ ಕಾರ್ಯ. ಇದು ನಾಟ್ಯ ಗಣಪತಿಯಲ್ಲ. ಸಂಜೀವಿನಿ ಗಣಪತಿ. ಕಲಗದ್ದೆ ಸ್ವಾಮಿಯಲ್ಲಿ ಪ್ರಾರ್ಥಿಸಿಕೊಂಡರೆ ಜೀವನದಲ್ಲಿ ನಗು ಸಾಧ್ಯ ಎಂಬುದು ವಯಕ್ತಿಕವಾಗಿ ಅನುಭವಕ್ಕೆ ಬಂದಿದೆ ಎಂದರು.
ಇನ್ನೋರ್ವ ಪ್ರಶಸ್ತಿ ಪುರಸ್ಕೃತ ರಾಜ್ಯ ಕೃಷಿ ಉತ್ಪನ್ನ ಮಾರಾಟ, ಸಂಸ್ಕರಣ ಹಾಗೂ ರಫ್ತು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ್ ಗೋವುಗಳ ಸಂರಕ್ಷಣೆಗೆ ಆದ್ಯತೆ ನೀಡಿ ಸೇವೆ ಮಾಡಬೇಕು. ನೂರಾ ಹದಿನೈದು ಗಂಡು ಕರುಗಳನ್ನು ಸಾಕುತ್ತಿದ್ದೇವೆ. ಗೋವುಗಳು ನಮ್ಮನ್ನು ಸಾಕುತ್ತವೆ. ಪ್ಲಾಸ್ಟಿಕ್ ವಸ್ತು ಬಳಸಬಾರದು. ನಿಗಮದಿಂದ ೧೫ ಲ.ರೂ. ತನಕ ಸಬ್ಸಿಡಿ ಕೊಡುತ್ತೇವೆ. ಅದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.ನಾಟ್ಯ ವಿನಾಯಕ ದೇವಸ್ಥಾನದ ವಿಶ್ವಸ್ಥ ವಿನಾಯಕ ಹೆಗಡೆ ಕಲಗದ್ದೆ ಸ್ವಾಗತಿಸಿದರು.