ಕನ್ನಡಪ್ರಭ ವಾರ್ತೆ ಮುಧೋಳ
ಬಾಗಲಕೋಟ ಬಿವಿವಿ ಸಂಘದ ನಗರದ ಶ್ರೀ ಎಸ್.ಆರ್.ಕಂಠಿ ಕಾಲೇಜಿನ ಐಕ್ಯೂಎಸಿ ಅಡಿಯಲ್ಲಿ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ, ವಿದ್ಯಾರ್ಥಿನಿಯರ ಒಕ್ಕೂಟ ಹಾಗೂ ಮಹಿಳಾ ಸಬಲೀಕರಣ ಘಟಕದ ಸಮಾರೋಪ ಸಮಾರಂಭ ಮತ್ತು ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಸ್ಥಾನವಹಿಸಿ ಅವರು ಮಾತನಾಡಿ, ಮಹಿಳೆಯರು ಎಲ್ಲ ರಂಗಗಳಲ್ಲೂ ಪುರುಷರಿಗೆ ಸರಿಸಮಾನರಾಗಿ ನಿಲ್ಲಬೇಕಾದರೆ ಅದು ಶಿಕ್ಷಣದಿಂದ ಮಾತ್ರ ಸಾಧ್ಯವಿದೆ ಎಂದರು.
ಇಂದಿನ ವಿದ್ಯಾರ್ಥಿನಿಯರು ತಮಗೆ ಸಿಕ್ಕ ಅವಕಾಶಗಳನ್ನು ಹಿಂಜರಿಯದೆ ಸದುಪಯೋಗ ಪಡಿಸಿಕೊಳ್ಳಬೇಕು. ವಿದ್ಯಾರ್ಥಿನಿಯರು ಸನ್ಮಾರ್ಗದ ಬದುಕು ರೂಪಿಸುವ ಮಾರ್ಗಗಳನ್ನು ಕಂಡುಕೊಳ್ಳಬೇಕು. ಜಗತ್ತು ಎಷ್ಟೇ ಆಧುನಿಕವಾಗಿ ಮುಂದುವರೆದರೂ ಅದರೊಂದಿಗೆ ದಾಪುಗಾಲು ಹಾಕುವ ನಾವುಗಳು ನಮ್ಮ ದೇಶದ ಸಂಸ್ಕೃತಿ, ಸನ್ನಡತೆ ಮರೆಯಬಾರದು. ಗುರುಹಿರಿಯರೊಂದಿಗೆ ಗೌರವದಿಂದ ನಡೆದುಕೊಂಡು ಪ್ರತಿಭಾ ಸಂಪನ್ನರಾಗಿ ನಾಡಿನ, ದೇಶದ ಸತ್ಪ್ರಜೆಗಳಾಗಿ ಬಾಳಬೇಕೆಂದು ಹೇಳಿದರು.ಇನ್ನೊರ್ವ ಅತಿಥಿ ಮುಧೋಳ ಪಿಸಿಎಸ್ ಅಜೀತಕುಮಾರ ಹೊಸಮನಿ ಮಾತನಾಡಿ, ಇಂದಿನ ಯುವ ಜನಾಂಗವು ಸಮಾಜಬಾಹಿರ ಕೃತ್ಯಗಳಲ್ಲಿ ತೊಡಗಿಕೊಂಡು ಹದಿಹರೆಯದ ವಯಸ್ಸಿನಲ್ಲಿ ಅಪರಾಧಿಗಳಾಗುತ್ತಿದ್ದಾರೆ. ಪಾಲಕರು ತಮ್ಮ ಮಕ್ಕಳ ಬಗ್ಗೆ ಉನ್ನತ ಕನಸು ಕಟ್ಟಿಕೊಂಡು ಶಿಕ್ಷಣ ಕಲಿಸಲು ಪ್ರತಿಷ್ಠಿತ ವಿದ್ಯಾಸಂಸ್ಥೆಗಳಿಗೆ ಕಳಿಸುತ್ತಿದ್ದಾರೆ. ಅವರ ಕನಸುಗಳಿಗೆ ನಿರಾಸೆಗೊಳಿಸದೆ ಶ್ರಮಪಟ್ಟು ವಿದ್ಯಾಭ್ಯಾಸ ನಡೆಸಿ ನಾಡಿಗೆ, ದೇಶಕ್ಕೆ ಕೀರ್ತಿ ಬೆಳಗಿಸಬೇಕು. ಪದವಿ ಶಿಕ್ಷಣ ಪೂರೈಸಿದ ನಂತರ ವಿದ್ಯಾರ್ಥಿಗಳಿಗೆ ಸಾಮಾಜಿಕ ಜವಾಬ್ದಾರಿ ನಿಭಾಯಿಸುವ ಸಾಮರ್ಥ್ಯ ಬೆಳಸಿ ಕೊಳ್ಳಬೇಕೆಂದರು.
ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಿತಿ ಕಾರ್ಯಾಧ್ಯಕ್ಷ ಡಾ.ಪ್ರಹ್ಲಾದ ಕೆ. ಸ್ವಾಗತಿಸಿ, ವಿದ್ಯಾರ್ಥಿನಿಯರ ಒಕ್ಕೂಟ ಹಾಗೂ ಮಹಿಳಾ ಸಬಲೀಕರಣ ಘಟಕದ ಕಾರ್ಯಾಧ್ಯಕ್ಷೆ ಪ್ರೊ.ಪ್ರೀತಿ ಕರಡಿ ಮತ್ತು ಪ್ರೊ.ಕವಿತಾ ಶಿವಪ್ಪಯ್ಯನಮಠ ವಾರ್ಷಿಕ ವರದಿ ವಾಚನ ಮಾಡಿದರು, ಪ್ರೊ.ಪಿ.ಡಿ.ಕುಂಬಾರ ಅತಿಥಿಗಳ ಪರಿಚಯ ಮಾಡಿದರು. ಐಕ್ಯೂಎಸಿ ಸಂಯೋಜಕ ಪ್ರೊ.ಎ.ಆರ್.ಕಡೂರ, ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ.ಎ.ವೈ.ಮುನ್ನೊಳ್ಳಿ, ವಿದ್ಯಾರ್ಥಿ ಪ್ರತಿನಿಧಿ ರಾಧಿಕಾ ಮಠಪತಿ ವೇದಿಕೆ ಮೇಲೆ ಉಪಸ್ಥಿತರಿದ್ದರು.