ಜನರ ಸಮಸ್ಯೆ ಪರಿಹರಿಸಲು ಆದ್ಯತೆ ನೀಡಲಿ

KannadaprabhaNewsNetwork |  
Published : Jun 20, 2024, 01:07 AM IST
೧೯ಕೆಎಲ್‌ಆರ್-೯ಕೋಲಾರದ ನಗರಸಭೆಯ ಆವರಣದಲ್ಲಿ ಫಲಾನುಭವಿಗಳಿಗೆ ತ್ರಿಚಕ್ರವಾಹನ ಶಾಸಕ ಕೊತ್ತೂರು ಜಿ.ಮಂಜುನಾಥ್ ವಿತರಿಸಿದರು. | Kannada Prabha

ಸಾರಾಂಶ

ನಗರಸಭೆ ಸದಸ್ಯರ ಜವಾಬ್ದಾರಿ ಶಾಸಕರಿಗಿಂತ ಹೆಚ್ಚು ಇರುತ್ತದೆ. ಏನೇ ಸಮಸ್ಯೆ ಎದುರಾದರು ಜನ ಮೊದಲು ಸಂಪರ್ಕಿಸುವುದು ನಗರಸಭೆ ಸದಸ್ಯರನ್ನು. ಹೀಗಾಗಿ ಸಾರ್ವಜನಿಕರ ಸಮಸ್ಯೆಗಳನ್ನು ನಿಮ್ಮ ಗಮನಕ್ಕೆ ತಂದಾಗ ಅಧಿಕಾರಿಗಳು ಕಾಳಜಿಯಿಂದ ಬಗೆಹರಿಸಬೇಕು

ಕನ್ನಡಪ್ರಭ ವಾರ್ತೆ ಕೋಲಾರನಗರಸಭೆ ಸದಸ್ಯರು ನಗರದ ಜನತೆಯ ಆಶೀರ್ವಾದದಿಂದ ಆಯ್ಕೆಯಾದ ಜನಪ್ರತಿನಿಧಿಗಳು ಅವರನ್ನು ಗೌರವಯತವಾಗಿ ನಡೆದುಕೊಳ್ಳುವುದು ಅಧಿಕಾರಿಗಳ ಜವಾಬ್ದಾರಿ ಅದನ್ನು ಅರಿತು ಸಮಸ್ಯೆಗಳಿಗೆ ಮೊದಲ ಆಧ್ಯತೆ ನೀಡುವಂತೆ ಶಾಸಕ ಕೊತ್ತೂರು ಮಂಜುನಾಥ್ ಅಧಿಕಾರಿಗಳಿಗೆ ಸೂಚಿಸಿದರು.ನಗರಸಭೆಯ ಆವರಣದಲ್ಲಿ ಫಲಾನುಭವಿಗಳಿಗೆ ತ್ರಿಚಕ್ರವಾಹನ ವಿತರಿಸಿ ಮಾತನಾಡಿ, ನಗರಸಭೆ ಸದಸ್ಯರ ಜವಾಬ್ದಾರಿ ಶಾಸಕರಿಗಿಂತ ಹೆಚ್ಚು ಇರುತ್ತದೆ. ಏನೇ ಸಮಸ್ಯೆ ಎದುರಾದರು ಜನ ಮೊದಲು ಸಂಪರ್ಕಿಸುವುದು ನಗರಸಭೆ ಸದಸ್ಯರನ್ನು. ಹೀಗಾಗಿ ಸಾರ್ವಜನಿಕರ ಸಮಸ್ಯೆಗಳನ್ನು ನಿಮ್ಮ ಗಮನಕ್ಕೆ ತಂದಾಗ ಅಧಿಕಾರಿಗಳು ಕಾಳಜಿಯಿಂದ ಬಗೆಹರಿಸಬೇಕು ಎಂದರು. ₹೮.೧೪ ಕೋಟಿ ಮಂಜೂರು

ಕೋಲಾರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ೧೫ನೇ ಹಣಕಾಸು ಯೋಜನೆಯಲ್ಲಿ ಸುಮಾರು ೮.೧೪ ಕೋಟಿ ಮಂಜೂರಾಗಿದ್ದು, ಕ್ರಿಯಾಯೋಜನೆ ತಯಾರಿಸಿ ಆದ್ಯತೆ ಮೇರೆಗೆ ಕೆಲಸ ಕೈಗೆತ್ತಿಕೊಳ್ಳಲಾಗುವುದು. ಇದಕ್ಕೆ ಸದಸ್ಯರು ಸಹಕಾರ ನೀಡಬೇಕು. ನಗರದಲ್ಲಿ ಸ್ವಚ್ಚತೆ ಸಮಸ್ಯೆಯಿದೆ ಏಪ್ರಿಲ್, ಮೇ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿಗೆ ಮಳೆಯಾಗುವ ಸಾಧ್ಯತೆಯಿದೆ. ಕೋಲಾರ ನಗರಸಭೆ ಸದಸ್ಯರು, ಮುಳಬಾಗಿಲು ಸದಸ್ಯರಿಗಿಂತ ೧೦ ಹೆಜ್ಜೆ ಮುಂದಿದ್ದು, ಉತ್ತಮ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ರಸ್ತೆ, ಚರಂಡಿ ಸಮಸ್ಯೆ

ನಗರಸಭೆ ಎಂದರೆ ಸ್ವಚ್ಛಗೊಳಿಸುವುದು ಎಂದು ಅರ್ಥ. ಅದನ್ನು ಸಮರ್ಥಿಸಿಕೊಂಡು ಹೋಗುವುದು ಅಧಿಕಾರಿಗಳು ಮತ್ತು ಸದಸ್ಯರ ಕೆಲಸ. ಯಾವುದೇ ವಾರ್ಡಿನಲ್ಲಿ ಯುಜಿಡಿ, ನೀರು, ರಸ್ತೆ, ಚರಂಡಿ ಸಮಸ್ಯೆಯಿದ್ದರೆ ಪ್ರಮಾಣಿಕವಾಗಿ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್, ಪೌರಾಯುಕ್ತ ಶಿವಾನಂದ, ಸದಸ್ಯರಾದ ಅಂಬರೀಶ್, ಎಸ್.ಆರ್.ಮುರಳೀಗೌಡ, ರಾಕೇಶ್, ಷರೀಪ್, ಗುಣಶೇಖರ್ ಇದ್ದರು.

ಸಂಸದರಿಗೇ ಆಹ್ವಾನ ಇಲ್ಲ

ಇಲ್ಲಿನ ನಗರಸಭೆ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಂಗವಿಲಕರಿಗೆ ತ್ರಿಚಕ್ರ ವಾಹನ ವಿತರಣಾ ಕಾರ್ಯಕ್ರಮವು ಗೊಂದಲಾದ ಗೂಡಾಗಿತ್ತು.

ಶಿಷ್ಠಾಚಾರದ ಪ್ರಕಾರ ನಗರಸಭೆ ಪೌರಾಯುಕ್ತರು ಸಂಸದ ಎಂ.ಮಲ್ಲೇಶ್‌ಬಾಬು ಅವರನ್ನು ಆಹ್ವಾನಿಸದೆ ಶಿಷ್ಠಾಚಾರ ಉಲ್ಲಂಘನೆ ಮಾಡಿದ್ದಾರೆಂದು ಆರೋಪಿಸಿ ನಗರಸಭಾಸದಸ್ಯರಾದ ಪ್ರವೀಣ್ ಗೌಡ, ರಾಕೇಶ್, ರಮೇಶ್, ಗುಣಶೇಖರ್ ಆಕ್ರೋಶ ವ್ಯಕ್ತಪಡಿಸಿ, ಪೌರಾಯುಕ್ತ ಶಿವಾನಂದ ಹಾಗೂ ದ್ವೀತಿಯ ದರ್ಜೆ ಸಹಾಯಕ ಜೀವನ್‌ರನ್ನು ತರಾಟೆಗೆ ತೆಗೆದುಕೊಂಡರು.

ಸಂಸದರ ಕ್ಷಮೆ ಕೇಳಲು ಪಟ್ಟು

ಇದಕ್ಕೆ ಉತ್ತರಿಸಿದ ಶಾಸಕ ಕೊತ್ತೂರು ಜಿ.ಮಂಜುನಾಥ್, ಮುಂದಿನ ದಿನಗಳಲ್ಲಿ ಈ ರೀತಿಯಾಗದಂತೆ ಎಚ್ಚರವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು, ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಬೇಕು ಎಂದು ತಿಳಿಸಿದರು. ಇದಕ್ಕೆ ಒಪ್ಪದ ಸದಸ್ಯರು, ಪೌರಾಯುಕ್ತರು ಕೂಡಲೇ ಸಂಸದ ಮಲ್ಲೇಶ್ ಬಾಬುರಿಗೆ ದೂರವಾಣಿ ಕರೆ ಮಾಡಿ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದರು.

ಬಳಿಕ ಪೌರಾಯುಕ್ತರು ಸಂಸದ ಮಲ್ಲೇಶ್‌ಬಾಬುಗೆ ಫೋನ್‌ ಮಾಡಿ, ಸಣ್ಣಪುಟ್ಟ ಸಮಸ್ಯೆಯಿಂದ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿಲ್ಲ. ಮುಂದಿನ ದಿನಗಳಲ್ಲಿ ಶಿಷ್ಠಾಚಾರ ಪಾಲನೆ ಮಾಡಲಾಗುವುದು. ಕ್ಷಮೆಯಿರಲಿ ಎಂದು ಕೇಳಿದರು. ಆಗ ಸದಸ್ಯರು ಸಮಾಧಾನಗೊಂಡು ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದು 2028ರವರೆಗೂ ಸಿಎಂ, ಇಳಿಸಲು ಆಗೋಲ್ಲ: ಜಮೀರ್‌
ಫೆ.೮ರಂದು ಶ್ರೀ ರಾಮಲಿಂಗೇಶ್ವರ ಮಠ ಲೋಕಾರ್ಪಣೆ