ಬರಗಾಲದಿಂದ ತತ್ತರಿಸಿರುವ ಎಲ್ಲ ರೈತರಿಗೂ ಬರ ಪರಿಹಾರ ನೀಡಿ

KannadaprabhaNewsNetwork | Updated : May 21 2024, 02:19 PM IST

ಸಾರಾಂಶ

ರೈತರನ್ನು ವಿಂಗಡಣೆ ಮಾಡದೆ ಬರಗಾಲದಿಂದ ತತ್ತರಿಸಿರುವ ಎಲ್ಲ ರೈತರಿಗೆ ಬರ ಪರಿಹಾರದ ಹಣ ಒದಗಿಸುವಂತೆ ರೋಣ ಬ್ಲಾಕ್‌ ಕಾಂಗ್ರೆಸ್‌ ಸಮಿತಿಯಿಂದ ಗದಗ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರ ಮೂಲಕ ಕೃಷಿ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಗದಗ: ರೈತರನ್ನು ವಿಂಗಡಣೆ ಮಾಡದೆ ಬರಗಾಲದಿಂದ ತತ್ತರಿಸಿರುವ ಎಲ್ಲ ರೈತರಿಗೆ ಬರ ಪರಿಹಾರದ ಹಣ ಒದಗಿಸುವಂತೆ ರೋಣ ಬ್ಲಾಕ್‌ ಕಾಂಗ್ರೆಸ್‌ ಸಮಿತಿಯಿಂದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರ ಮೂಲಕ ಕೃಷಿ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಸಮಿತಿ ಅಧ್ಯಕ್ಷ ವೀರಣ್ಣ ಶೆಟ್ಟರ ಮಾತನಾಡಿ, ರೈತರಿಗೆ ಬರ ಪರಿಹಾರ ಒದಗಿಸುವ ಸಂಬಂಧ ಕೇಂದ್ರ ಸರಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ. ರಾಜ್ಯ ಸರ್ಕಾರ ಉಚ್ಚ ನ್ಯಾಯಾಲಯದ ಮೊರೆ ಹೋಗಿ ಕೇಂದ್ರ ಸರ್ಕಾರ ಸರ್ಕಾರದಿಂದ ಪರಿಹಾರ ಹಣ ತಂದಿದೆ. ರಾಜ್ಯ ಸರ್ಕಾರವು ಶೀಘ್ರವಾಗಿ ಕ್ರಮ ತೆಗೆದುಕೊಂಡು, ಕೆಲವು ರೈತರಿಗೆ ಪರಿಹಾರದ ಹಣ ಬಿಡುಗಡೆ ಮಾಡುತ್ತಿದೆ. 

ಆದರೆ ಎಲ್ಲ ರೈತರಿಗೆ ತಲುಪಿಲ್ಲ. ಈ ಕುರಿತು ಅಧಿಕಾರಿಗಳನ್ನು ಸಂಪರ್ಕಿಸಿದಾಗ ಆದೇಶ ಮತ್ತು ನಿಯಮದಂತೆ ಖಾಲಿ ಇರುವ ಜಮೀನುಗಳಲ್ಲಿ ಎಫ್‌.ಐ.ಡಿ. ಮಾಡದ ರೈತರಿಗೆ ಬರ ಪರಿಹಾರ ನೀಡುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಬರಗಾಲ ಹಾಗೂ ಕ್ಷಾಮದ ಈ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಎಲ್ಲ ರೈತರಿಗೆ ಪರಿಹಾರ ತಲುಪಿಸಲು ಕ್ರಮ ಕೈಗೊಳ್ಳಬೇಕಿದೆ. ಸಾಮಾನ್ಯವಾಗಿ ಬರಗಾಲ ಎಂದರೆ ಎಲ್ಲ ಕುಟುಂಬಗಳು ಕಷ್ಟದಲ್ಲಿದ್ದು, ಎಲ್ಲ ರೈತರಿಗೂ ಪರಿಹಾರದ ಅವಶ್ಯಕತೆ ಇದೆ. ಖಾಲಿ ಜಮೀನಿಗೆ ರಾಜ್ಯ ಸರ್ಕಾರ ಪರಿಹಾರ ನೀಡುವುದಿಲ್ಲ ಎಂಬ ವಿಷಯ ರೈತರಿಗೆ ತಿಳಿದುಬಂದಿದೆ. ನಮ್ಮ ರಾಜ್ಯ ಸರ್ಕಾರ ಬೀಜ, ಗೊಬ್ಬರಗಳಿಗಷ್ಟೆ ಪರಿಹಾರ ನೀಡುವ ಬದಲು ಕ್ಷಾಮದಲ್ಲಿರುವ ಎಲ್ಲ ರೈತರಿಗೂ ಪರಿಹಾರ ನೀಡಬೇಕಾಗಿದೆ ಎಂದರು.

ಪ್ರತಿಯೊಂದು ಗ್ರಾಮದಲ್ಲಿಯೂ ದನಕರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಇಂತಹ ಪರಿಸ್ಥಿತಿಯಲ್ಲಿ ರೈತರನ್ನು ವಿಂಗಡಣೆ ಮಾಡುವುದು ಸರಿಯಾದ ಕ್ರಮವಲ್ಲ. ಅದಕ್ಕಾಗಿ ಸರ್ಕಾರ ಎಲ್ಲ ರೈತರನ್ನು ಸಮಾನ ದೃಷ್ಟಿಯಿಂದ ಕಂಡು ಬರಗಾಲದಲ್ಲಿ ತತ್ತರಿಸಿರುವ ಎಲ್ಲ ರೈತರಿಗೂ ಪರಿಹಾರದ ಹಣ ವಿತರಿಸಬೇಕು ಎಂದು ಒತ್ತಾಯಿಸಿದರು.

Share this article