ವಿಳಂಬ ಮಾಡದೇ ಬಡವರಿಗೆ ಆಶ್ರಯ ಮನೆ ನೀಡಿ: ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ

KannadaprabhaNewsNetwork | Published : Jul 2, 2024 1:31 AM

ಸಾರಾಂಶ

ಶಿವಮೊಗ್ಗದಲ್ಲಿ ಬಡವರಿಗಾಗಿ ಸೂರು ನೀಡಲು ಆಶ್ರಯ ಮನೆ ಯೋಜನೆಯನ್ನು ಕಳೆದ 9 ವರ್ಷಗಳ ಹಿಂದೆಯೇ ಜಾರಿಗೆ ತರಲಾಗಿತ್ತು. ಸ್ವಂತ ಮನೆಯ ಕನಸು ಕಾಣುತ್ತಿರುವ ಬಡವರಿಗೆ ಸರ್ಕಾರ ವಿಳಂಬ ಮಾಡದೇ ಸೂರು ನೀಡಬೇಕು ಎಂದು ಕೆ.ಎಸ್‌.ಈಶ್ವರಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಆಶ್ರಯ ಯೋಜನೆಯಡಿ ಸ್ವಂತ ಮನೆಯ ಕನಸು ಕಾಣುತ್ತಿರುವ ಬಡವರಿಗೆ ಸರ್ಕಾರ ವಿಳಂಬ ಮಾಡದೇ ಸೂರು ನೀಡಬೇಕು ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಆಗ್ರಹಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಶಿವಮೊಗ್ಗದಲ್ಲಿ ಬಡವರಿಗಾಗಿ ಸೂರು ನೀಡಲು ಆಶ್ರಯ ಮನೆ ಯೋಜನೆಯನ್ನು ಕಳೆದ 9 ವರ್ಷಗಳ ಹಿಂದೆಯೇ ಜಾರಿಗೆ ತರಲಾಗಿತ್ತು. ಗೋವಿಂದಪುರದಲ್ಲಿ 3 ಸಾವಿರ ಆಶ್ರಯ ಮನೆಗಳು ನಿರ್ಮಾಣವಾಗಬೇಕಿತ್ತು. ಅಲ್ಲಿ ಕೇವಲ 288 ಮನೆಗಳಿಗೆ ಹಕ್ಕುಪತ್ರ ನೀಡಲಾಗಿದೆ. ಉಳಿದವರು ಇನ್ನೂ ಪರದಾಡುತ್ತಲೇ ಇದ್ದಾರೆ ಎಂದು ಆರೋಪಿಸಿದರು.

ಸಾಮಾನ್ಯ ವರ್ಗಕ್ಕೆ ಸೇರಿದ ಜನರು 80 ಸಾವಿರ, ಪರಿಶಿಷ್ಟರು 50 ಸಾವಿರ ರೂ.ಗಳನ್ನು ಈಗಾಗಲೇ ಅಡ್ವಾನ್ಸ್ ರೂಪದಲ್ಲಿ ಕೊಟ್ಟಿದ್ದಾರೆ. 3 ವರ್ಷಗಳಲ್ಲಿ ಮನೆ ನೀಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ 9 ವರ್ಷವಾದರೂ ನೀಡಿಲ್ಲ. ಹಣ ಕಟ್ಟಿದವರು, ಸಾಲ ಸೋಲ ಮಾಡಿದ್ದಾರೆ. ಬಡ್ಡಿ ಕಟ್ಟಲು ಆಗುತ್ತಿಲ್ಲ. ಅತ್ಯಂತ ಕಷ್ಟದಲ್ಲಿದ್ದಾರೆ. ತಕ್ಷಣವೇ ಅವರಿಗೆ ಆಶ್ರಯ ನೀಡಬೇಕು ಎಂದರು.

ಈಗ ಕೊಟ್ಟಿರುವ ಮನೆಗಳಿಗೂ ಮೂಲಭೂತ ಸೌಲಭ್ಯಗಳಿಲ್ಲ. ಬೀದಿ ದೀಪವಿಲ್ಲ, ರಸ್ತೆಗಳಿಲ್ಲ, ರಾತ್ರಿ ಹೆಣ್ಣು ಮಕ್ಕಳು ಓಡಾಡುವುದು ಕಷ್ಟವಾಗುತ್ತದೆ. ಗೋಪಿಶೆಟ್ಟಿಕೊಪ್ಪದಲ್ಲಿ ಯೂ ಕೂಡ ಯಾವುದೇ ಮನೆಗಳು ಇನ್ನೂ ನಿರ್ಮಾಣವಾಗಿಲ್ಲ. ನಾನು ಶಾಸಕನಾಗಿದ್ದಾಗ. ಒಂದಿಷ್ಟು ಶ್ರಮಪಟ್ಟಿದ್ದೆ ಎಂದು ತಿಳಿಸಿದರು.

ಈ ಹಿನ್ನೆಲೆಯಲ್ಲಿ ವಸತಿ ಸಚಿವ ಜಮೀರ್ ಅಹ್ಮದ್ ಅವರನ್ನು ಭೇಟಿ ಮಾಡಿದ್ದೇವೆ. ಅವರು ನಾನೇ ಶಿವಮೊಗ್ಗಕ್ಕೆ ಬಂದು ಪರಿಸ್ಥಿತಿಯನ್ನು ಅವಲೋಕಿಸಿ ಅಗತ್ಯ ಕ್ರಮ ಕೈಗೊಳ್ಳುವೆ ಎಂದು ಹೇಳಿದ್ದಾರೆ. ಅವರ ಮಾತಿನ ಮೇಲೆ ನಮಗೆ ಭರವಸೆ ಇದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಜು.15ರೊಳಗೆ ವಿಶೇಷ ಸಭೆಯನ್ನು ಕರೆಯಬೇಕು. ಈ ಸಭೆಗೆ ಸಚಿವರು ಬರಬೇಕು. ಅವರು ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಶಿವಮೊಗ್ಗ ನಗರದ ಅಭಿವೃದ್ಧಿ ಕುಂಠಿತಗೊಂಡಿದೆ. ಈ ಅಭಿವೃದ್ಧಿಗೆ ಮಹಾನಗರ ಪಾಲಿಕೆ ಪಾತ್ರ ಹೆಚ್ಚಾಗಿದೆ. ಆದರೆ ಪಾಲಿಕೆಯ ಅವಧಿ ಮುಗಿದು ಹಲವು ತಿಂಗಳುಗಳು ಆದರು ಕೂಡ ಚುನಾವಣೆ ಇನ್ನೂ ಘೋಷಣೆಯಾಗಿಲ್ಲ. ಅಧಿಕಾರಿಗಳು ಬೇಜವಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಕೂಡಲೇ ಮಹಾನಗರ ಪಾಲಿಕೆಗೆ ಚುನಾವಣೆ ನಡೆಸಬೇಕು ಎಂದರು.

ಮಹಾಲಿಂಗ ಶಾಸ್ತ್ರಿಗೆ ಸನ್ಮಾನ:

ಸ್ಥಳೀಯ ಸಂಸ್ಥೆ ಚುನಾವಣೆಗೆ ಸಂಬಂಧಿಸಿದಂತೆ ರಾಷ್ಟ್ರಭಕ್ತ ಬಳಗವು ಆಯಾ ಸಂದರ್ಭಕ್ಕೆ ತಕ್ಕಂತೆ ತೀರ್ಮಾನ ತೆಗೆದುಕೊಳ್ಳುತ್ತದೆ. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ರಾಷ್ಟ್ರಭಕ್ತ ಬಳಗದ ಮಹಾಲಿಂಗ ಶಾಸ್ತ್ರಿಯವರು ವಿಜೇತರಾಗಿದ್ದಾರೆ. ಅವರನ್ನು ಜು.15ರಂದು ಸನ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಮಹಾಲಿಂಗ ಶಾಸ್ತ್ರಿ, ಈ.ವಿಶ್ವಾಸ್, ಗನ್ನಿಶಂಕರ್, ಅ.ಮಾ.ಪ್ರಕಾಶ್, ಭೂಪಾಲ್, ಬಾಲು, ನಾಗರಾಜು, ಮೋಹನ್ ಇದ್ದರು.ಕಾಂಗ್ರೆಸ್ಸಿಂದ ಮಠಾಧಿಪತಿ ಸ್ಥಾನಗಳ ದುರುಪಯೋಗ

ಕಾಂಗ್ರೆಸ್ಸಿನ ನಾಯಕರು ಸಿಎಂ ಮತ್ತು ಡಿಸಿಎಂ ಸ್ಥಾನ ವಿಚಾರದಲ್ಲಿ ಬಹಿರಂಗವಾಗಿ ಬೆತ್ತಲೆಯಾಗಿದ್ದಾರೆ. ಮಠಾಧಿಪತಿಗಳಿಗೆ ದೇವರ ಸ್ಥಾನ ಕೊಟ್ಟಿದ್ದೇವೆ. ದೇವರ ಸ್ಥಾನವನ್ನು ದುರುಪಯೋಗ ಮಾಡಿಕೊಳ್ಳುವ ಕೆಲಸವನ್ನು ಕಾಂಗ್ರೆಸ್ಸಿಗರು ಮಾಡಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

ಇದರಂತಹ ನೀಚ ರಾಜಕಾರಣ ಮತ್ತೊಂದು ಇಲ್ಲ. ಇದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ. ಬಿಜೆಪಿ ಸೇರಿದಂತೆ ಯಾವ ಪಕ್ಷ ಇದರಲ್ಲಿ ತಲೆ ಹಾಕಲು ಬರುವುದಿಲ್ಲ. ನಾಲ್ಕು ಗೋಡೆಗಳ ಮಧ್ಯೆ ಕುಳಿತು ಏನು ಬೇಕಾದರೂ ಮಾಡಿಕೊಳ್ಳಿ. ಸಂವಿಧಾನದಲ್ಲಿ ಸಿಎಂ ಸ್ಥಾನಕ್ಕೆ ಮಾತ್ರ ಅವಕಾಶವಿದೆ. ಮುಖ್ಯಮಂತ್ರಿ ಸ್ಥಾನದ ನಂತರ ಎಷ್ಟು ಉಪ ಮುಖ್ಯ ಮಂತ್ರಿ ಬೇಕಾದರೂ ಮಾಡಿಕೊಳ್ಳಿ. ಆದರೆ, ಅದರ ಬಗ್ಗೆ ನಿಮ್ಮ ಪಕ್ಷದ ಸಭೆ ಕರೆದು ತೀರ್ಮಾನ ತೆಗೆದುಕೊಳ್ಳಿ ಎಂದು ಸಲಹೆ ನೀಡಿದರು.

Share this article