ಪೂರ್ಣ ಹೆಲ್ಮೆಟ್‌ನಿಂದ ಬೇಸಿಗೆ ವಿನಾಯಿತಿ ನೀಡಿ

KannadaprabhaNewsNetwork | Published : Mar 1, 2025 1:01 AM

ಸಾರಾಂಶ

ಉರಿ ಬಿಸಿಲಿನ ಝಳದಿಂದ ದಾವಣಗೆರೆ ಜನರು ತತ್ತರಿಸುತ್ತಿದ್ದಾರೆ. ಈ ಹಿನ್ನೆಲೆ ಹಿಂದಿನ ಐದಾರು ವರ್ಷಗಳಂತೆ ಬೇಸಿಗೆ ಕಾಲ ಮುಗಿಯುವವರೆಗೂ ಜಿಲ್ಲಾ ಪೊಲೀಸ್ ಇಲಾಖೆ ದ್ವಿಚಕ್ರ ವಾಹನ ಸವಾರರು ಪೂರ್ಣ ಪ್ರಮಾಣದ ಹೆಲ್ಮೆಟ್‌ ಧರಿಸುವ ಕಡ್ಡಾಯ ನೀತಿಯಿಂದ ವಿನಾಯಿತಿ ನೀಡುವಂತೆ ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಒತ್ತಾಯಿಸಿದ್ದಾರೆ.

- ಐದಾರು ವರ್ಷಗಳಿಂದ ನೀಡುತ್ತಿದ್ದ ರಿಯಾಯಿತಿ ಮುಂದುವರಿಸಿ: ದಿನೇಶ ಕೆ. ಶೆಟ್ಟಿ ಒತ್ತಾಯ । ಜನಾಭಿಪ್ರಾಯ ಸಂಗ್ರಹ ಸಭೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಉರಿ ಬಿಸಿಲಿನ ಝಳದಿಂದ ದಾವಣಗೆರೆ ಜನರು ತತ್ತರಿಸುತ್ತಿದ್ದಾರೆ. ಈ ಹಿನ್ನೆಲೆ ಹಿಂದಿನ ಐದಾರು ವರ್ಷಗಳಂತೆ ಬೇಸಿಗೆ ಕಾಲ ಮುಗಿಯುವವರೆಗೂ ಜಿಲ್ಲಾ ಪೊಲೀಸ್ ಇಲಾಖೆ ದ್ವಿಚಕ್ರ ವಾಹನ ಸವಾರರು ಪೂರ್ಣ ಪ್ರಮಾಣದ ಹೆಲ್ಮೆಟ್‌ ಧರಿಸುವ ಕಡ್ಡಾಯ ನೀತಿಯಿಂದ ವಿನಾಯಿತಿ ನೀಡುವಂತೆ ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ಒತ್ತಾಯಿಸಿದರು.

ನಗರದ ಹೈಸ್ಕೂಲ್ ಮೈದಾನದ ಬಾಸ್ಕೆಟ್ ಬಾಲ್ ಅಂಕಣದಲ್ಲಿ ಗುರುವಾರ ಸಂಜೆ ಹೆಲ್ಮೆಟ್‌ ಧಾರಣೆ ಕುರಿತಂತೆ ಜನಾಭಿಪ್ರಾಯ ಸಂಗ್ರಹ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ವಿಚಾರ ತೀವ್ರತೆ ಪಡೆಯಲು, ವಿಕೋಪಕ್ಕೆ ಹೋಗಲು ಅ‍ವಕಾಶ ಕೊಡಬೇಡಿ ಎಂದರು.

ಐದಾರು ವರ್ಷದಿಂದಲೂ ಪೂರ್ಣ ಪ್ರಮಾಣದ ಹೆಲ್ಮೆಟ್‌ ಕಡ್ಡಾಯ ಮಾಡಿಲ್ಲ. ಈ ಸಲ ಬೇಸಿಗೆಯಲ್ಲಿ ವಿನಾಯಿತಿ ಕೋರಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿ ಮಾಡೋಣ. ಕಾನೂನು ಪಾಲನೆ ವಿಚಾರವನ್ನೇ ತೆಗೆದುಕೊಂಡರು, ಬೇರೆಯದ್ದೇ ವಿಷಯಗಳೂ ಚರ್ಚೆಗೆ ಬರುತ್ತವೆ. ಹಾಗಾಗಿ ಅಂತಹ ಚರ್ಚೆಗಳು ಅನಗತ್ಯ. ಇತರೆ ಕಾನೂನುಗಳನ್ನೂ ಪೊಲೀಸರು ಸರಿಯಾಗಿ ಪಾಲನೆ ಮಾಡುತ್ತಿದ್ದಾರಾ? ದಾವಣಗೆರೆಯಲ್ಲಿ ಏನೆಲ್ಲಾ ನಡೆಯುತ್ತಿವೆ ಎಂಬುದನ್ನೂ ಪೊಲೀಸರು ತಿಳಿಯಬೇಕು ಎಂದರು.

ಜನರ ಆರೋಗ್ಯ ದೃಷ್ಟಿಯಿಂದ ರಿಯಾಯಿತಿ ನೀಡಲು ಸೌಮ್ಯವಾಗಿ ಕೇಳುತ್ತಿದ್ದೇವೆ. ನಮಗೂ ಎಲ್ಲಾ ಹೋರಾಟಗಳು ಗೊತ್ತಿದೆ. ಅಧಿಕಾರಿಗಳು 2 ವರ್ಷಕ್ಕೆ ಬರುತ್ತಾರೆ, ಹೋಗುತ್ತಾರೆ. ಆದರೆ, ಈ ಊರಿನಲ್ಲಿ ಇರುವವರ ನಾವು. ದಯಮಾಡಿ ಈ ಮನವಿ ಪರಿಗಣಿಸಿ. ಕಾನೂನು ಅಡ್ಡ ತರಬೇಡಿ. 2 ದಿನಗಳಲ್ಲೇ ಜಿಲ್ಲಾ ಪೊಲೀಸ್ ಅಧೀಕ್ಷಕರನ್ನು ಭೇಟಿ ಮಾಡಿ, ಬಳ್ಳಾರಿ, ರಾಯಚೂರು, ಕಲಬುರಗಿ, ಕೊಪ್ಪಳ ಇತರೆ ಜಿಲ್ಲೆಗಳಲ್ಲಿ ಬೇಸಿಗೆ ಕಾಲದಲ್ಲಿ ಹೆಲ್ಮೆಟ್‌ನಿಂದ ವಿನಾಯಿತಿ ನೀಡಿರುವಂತೆ ನಮ್ಮ ಜಿಲ್ಲೆಯಲ್ಲೂ ರಿಯಾಯಿತಿ ನೀಡುವಂತೆ ನಿಯೋಗ ತೆರಳಿ ಮನವಿ ಮಾಡುತ್ತೇವೆ ಎಂದರು.

ತೆರಿಗೆ ಸಲಹೆಗಾರರ ಸಂಘದ ಜಿಲ್ಲಾಧ್ಯಕ್ಷ ಜಂಬಗಿ ರಾಧೇಶ ಮಾತನಾಡಿ, ನಗರ ವ್ಯಾಪ್ತಿಯಲ್ಲಿ 30 ಕಿಮೀಗಿಂತ ಹೆಚ್ಚು ವೇಗವಾಗಿ ವಾಹನ ಚಾಲನೆ ಸಾಧ್ಯವಿಲ್ಲ. ಹಾಗಾಗಿ ಪೂರ್ಣ ಪ್ರಮಾಣದ ಹೆಲ್ಮೆಟ್ ಅಗತ್ಯವಿಲ್ಲ. ವಾಸ್ತವ ಹೀಗಿದ್ದರೂ ಸಂಚಾರ ಪೊಲೀಸ್ ಅಧಿಕಾರಿ, ಸಿಬ್ಬಂದಿ ದ್ವಿಚಕ್ರ ವಾಹನ ಸವಾರರ ಮೇಲೆ ದೌರ್ಜನ್ಯ ಸರಿಯಲ್ಲ. ಹೆಲ್ಮೆಟ್ ಹೆಸರಿನಲ್ಲಿ ಜನರಿಗೆ ಭಯಭೀತರಾಗಿಸಬೇಡಿ. ಅತಿವೇಗ, ಅಜಾಗರೂಕತೆ ಚಾಲನೆ, ಸಿಗ್ನಲ್ ಜಂಪ್ ಮಾಡುವವರು, ಟ್ರಿಪಲ್ ರೈಡ್ ಮಾಡುವವರಿಗೆ ಮೊದಲು ಕಡಿವಾಣ ಹಾಕಿ ಎಂದರು.

ವಿಶ್ವ ಕರವೇ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ ಮಾತನಾಡಿ, ದ್ವಿಚಕ್ರ ವಾಹನ ಸವಾರರು ಪೂರ್ಣ ಪ್ರಮಾಣದ ಹೆಲ್ಮೆಟ್ ಧರಿಸುವುದರಿಂದ ಹಿಂದಿನಿಂದ, ಪಕ್ಕ ಬರುವ ವಾಹನಗಳ ಸದ್ದಾಗಲಿ, ಹಾರ್ನ್ ಆಗಲಿ ಕೇಳುವುದಿಲ್ಲ. ಚರ್ಮಸಂಬಂಧಿ, ಕೂದಲು ಉದುರುವಿಕೆ ಸಮಸ್ಯೆ ಬಾಧಿಸುತ್ತಿವೆ ಎಂದರು.

ಕರವೇ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ, ಮಾಜಿ ಮೇಯರ್ ರೇಣುಕಾಬಾಯಿ ಮಾಲತೇಶ, ಪಾಲಿಕೆ ಮಾಜಿ ಸದಸ್ಯರಾದ ಎ.ನಾಗರಾಜ, ಜಾಕೀರ್‌, ನಗರಸಭೆ ಮಾಜಿ ಸದಸ್ಯ ಎಸ್.ಮಲ್ಲಿಕಾರ್ಜುನ, ಆಮ್ ಆದ್ಮಿ ಪಕ್ಷದ ರಾಘವೇಂದ್ರ, ಕಾಂಗ್ರೆಸ್ ಮುಖಂಡ ಎಚ್.ಜೆ. ಮೈನುದ್ದೀನ್‌, ಕೊಟ್ರಯ್ಯ, ಸಂತೋಷ, ಮಹಾಂತೇಶ, ಮಂಗಳಮ್ಮ, ಮುರುಗೇಶ, ಅಯೂಬ್ ಪೈಲ್ವಾನ್ ಸೇರಿದಂತೆ ಅನೇಕ ಸಂಘ-ಸಂಸ್ಥೆ, ಸಂಘಟನೆ, ಪಕ್ಷಗಳ, ಕ್ರೀಡಾಪಟುಗಳು, ಮಹಿಳೆಯರು, ಹಿರಿಯ ನಾಗರೀಕರು, ವಿದ್ಯಾರ್ಥಿ, ಯುವಜನರಿದ್ದರು.

- - -

ಕೋಟ್ಸ್‌

ಹೆಲ್ಮೆಟ್ ಧರಿಸುವುದನ್ನು ವಾಹನ ಸವಾರರ ಇಚ್ಛೆಗೆ ಬಿಡಬೇಕು. ಕಡ್ಡಾಯದ ಹೆಸರಿನಲ್ಲಿ ದೌರ್ಜನ್ಯ ಎಸಗುತ್ತಿರುವುದು ಸರಿಯಲ್ಲ. ಟ್ರಿಪಲ್ ರೈಡಿಂಗ್, ಸಿಗ್ನಲ್‌ ಜಂಪ್, ಅಜಾಗರೂಕತೆ ಚಾಲನೆ, ದಾಖಲಾತಿ ಇಲ್ಲದ ವಾಹನಗಳು ಇತರೆ ಕಾನೂನು ಉಲ್ಲಂಘನೆ ಪ್ರಕರಣಗಳನ್ನು ತಡೆಯಲು ಪೊಲೀಸರು ಮುಂದಾಗಬೇಕು

- ಎಸ್.ಮಲ್ಲಿಕಾರ್ಜುನ, ಕಾಂಗ್ರೆಸ್ ಮುಖಂಡ

ಪೂರ್ಣ ಹೆಲ್ಮೆಟ್‌ನಿಂದಾಗಿ ಮಹಿಳೆಯರಿಗೆ ತೀವ್ರ ತೊಂದರೆಯಾಗುತ್ತಿದೆ. ಮದುವೆ ಸೇರಿದಂತೆ ಶುಭ ಕಾರ್ಯಕ್ಕೆ ಹೋಗಲು ಇನ್ನಿಲ್ಲದ ಸಮಸ್ಯೆ ಕಾಡುತ್ತಿದೆ. ಚರ್ಮದ ಸಮಸ್ಯೆ ಮಹಿಳೆಯರಿಗೆ ಕಾಡುತ್ತಿದೆ. ವಿದ್ಯಾರ್ಥಿನಿಯರಿಗೂ ಸಮಸ್ಯೆಯಾಗುತ್ತಿದೆ. ಕಾಲೇಜಿಗೆ ಹೋಗುವವರಿಗೆ, ಮಕ್ಕಳನ್ನು ಶಾಲೆಗೆ ಬಿಟ್ಟು ಬರಲು, ಕರೆ ತರಲು ಹೋಗುವ ಮಹಿಳೆಯರಿಗೂ ಸಮಸ್ಯೆ ಮಾಡಲಾಗುತ್ತಿದೆ

- ಅನಿತಾ ಬಾಯಿ ಮಾಲತೇಶ, ಮಾಜಿ ಮೇಯರ್

- - -

-27ಕೆಡಿವಿಜಿ5, 6.ಜೆಪಿಜಿ:

ಸಭೆಯಲ್ಲಿ ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ ಮಾತನಾಡಿದರು.

Share this article