ಅನುಮಾನಾಸ್ಪದ ವ್ಯವಹಾರ ಮಾಹಿತಿ ನೀಡಿ: ಸೆಲ್ವಮಣಿ

KannadaprabhaNewsNetwork |  
Published : Mar 19, 2024, 01:47 AM IST
Mallatha halli | Kannada Prabha

ಸಾರಾಂಶ

ಬ್ಯಾಂಕ್‌ಗಳಲ್ಲಿ ನಡೆಯುವ ಅನುಮಾನಾಸ್ಪದ ವ್ಯವಹಾರಗಳ ಮಾಹಿತಿಯನ್ನು ನೀಡುವಂತೆ ಬ್ಯಾಂಕ್‌ಗಳಿಗೆ ಚುನಾವಣಾ ವಿಶೇಷ ಆಯುಕ್ತ ಸೆಲ್ವಮಣಿ ಸೂಚನೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಲೋಕಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಅನುಮಾನಾಸ್ಪದ ವಹಿವಾಟುಗಳು ನಡೆಯುವುದು ಕಂಡು ಬಂದಲ್ಲಿ ಕೂಡಲೇ ಚುನಾವಣಾ ವಿಭಾಗದ ಗಮನಕ್ಕೆ ತರಬೇಕು ಎಂದು ಬಿಬಿಎಂಪಿ ಚುನಾವಣಾ ವಿಭಾಗದ ವಿಶೇಷ ಆಯುಕ್ತ ಸೆಲ್ವಮಣಿ, ವಿವಿಧ ಬ್ಯಾಂಕ್‌ಗಳ ನೋಡಲ್‌ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬ್ಯಾಂಕ್‌ ನೋಡಲ್‌ ಅಧಿಕಾರಿಗಳ ಜತೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ಒಂದೇ ಬ್ಯಾಂಕ್‌ ಖಾತೆಯಿಂದ ಹಲವು ಖಾತೆಗಳಿಗೆ ಹಣ ವರ್ಗಾವಣೆಯಾದರೆ ಅದರ ಮಾಹಿತಿಯನ್ನು ಕೂಡಲೆ ನೀಡಬೇಕು. ಹಾಗೆಯೇ, 1 ಲಕ್ಷ ರು.ಗಿಂತ ಹೆಚ್ಚಿನ ನಗದು ಹಿಂಪಡೆಯುವಿಕೆ ಸೇರಿದಂತೆ ಮತದಾರರಿಗೆ ಹಣ ನೀಡಲು ಬಳಸಬಹುದಾದ ಯಾವುದೇ ಅನುಮಾನಾಸ್ಪದ ನಗದು ವಹಿವಾಟುಗಳ ಬಗ್ಗೆ ಚುನಾವಣಾ ವಿಭಾಗಕ್ಕೆ ಮಾಹಿತಿ ನೀಡಬೇಕು. ಒಂದು ವೇಳೆ 10 ಲಕ್ಷ ರು.ಗಿಂತ ಹೆಚ್ಚಿನ ನಗದು ಠೇವಣಿ ಅಥವಾ ಹಿಂಪಡೆಯುವಿಕೆ ವಹಿವಾಟು ನಡೆದರೆ ಅಂತಹ ಮಾಹಿತಿಯನ್ನು ಆದಾಯ ತೆರಿಗೆ ಇಲಾಖೆ ನೋಡಲ್‌ ಅಧಿಕಾರಿಗಳಿಗೆ ಕೊಡಬೇಕು. ಮಾಹಿತಿ ಕೊಡದಿದ್ದರೆ ಚುನಾವಣಾ ಆಯೋಗದ ನಿಯಮದಂತೆ ನಿಮ್ಮ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಯಾವುದೇ ಬ್ಯಾಂಕ್‌ ನಗದು ರವಾನೆ ಮಾಡಬೇಕೆಂದರೆ ಭದ್ರತಾ ಸಿಬ್ಬಂದಿಯೊಂದಿಗೆ ಸರಿಯಾದ ದಾಖಲೆಗಳನ್ನು ಇಟ್ಟುಕೊಳ್ಳಬೇಕು. ಸರಿಯಾದ ದಾಖಲೆಗಳನ್ನು ಇಟ್ಟುಕೊಳ್ಳದೆ ನಗದು ರವಾನೆ ಮಾಡಿದರೆ ಅದನ್ನು ಜಪ್ತಿ ಮಾಡಿಕೊಳ್ಳಲಾಗುವುದು. ಹೀಗಾಗಿ ಬ್ಯಾಂಕ್‌ಗಳು ಈ ಕುರಿತು ಎಚ್ಚರಿಕೆ ವಹಿಸಬೇಕು ಎಂದರು.

ಚುನಾವಣಾ ವಿಭಾಗದ ಸಹಾಯಕ ಆಯುಕ್ತ ರಾಮಚಂದ್ರ ನಾಯ್ಕ್‌, ಮುಖ್ಯ ಲೆಕ್ಕಾಧಿಕಾರಿ ಭೀನಾ ಸೇರಿದಂತೆ ಇತರರಿದ್ದರು.ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿ

ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಈಗಾಗಲೆ ಜಾರಿಯಾಗಿದೆ. ಹೀಗಾಗಿ ಜನಪ್ರತಿನಿಧಿಗಳ ಜಾಹೀರಾತು, ಭಾವಚಿತ್ರಗಳ ಪ್ರದರ್ಶನಕ್ಕೆ ನಿರ್ಬಂಧ ಹೇರಬೇಕು. ವಲಯಗಳಲ್ಲಿ ಎಲ್ಲ ಪೋಸ್ಟರ್‌, ಬ್ಯಾನರ್‌ಗಳನ್ನು ತೆರವು ಮಾಡಬೇಕು ಎಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ತುಷಾರ್‌ ಗಿರಿನಾಥ್‌ ಅಧಿಕಾರಿಗಳಿಗೆ ಸೂಚಿಸಿದರು.

ಲೋಕಸಭಾ ಚುನಾವಣೆ ಕುರಿತಂತೆ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ಸಾರ್ವಜನಿಕ ಸ್ಥಳ, ಬಸ್ ತಂಗುದಾಣಗಳಲ್ಲಿ ಅಳವಡಿಸಿರುವ ನಾಮಫಲಕಗಳಲ್ಲಿ ಜನಪ್ರತಿನಿಧಿಗಳ ಹೆಸರು ಮತ್ತು ಭಾವಚಿತ್ರ ಕಾಣದಂತೆ ಮುಚ್ಚಬೇಕು. ಗೋಡೆಗಳ ಮೇಲೆ ಬರೆದಿರುವ ಬರಹಗಳು, ಭಿತ್ತಿಪತ್ರಗಳನ್ನು ಕೂಡಲೆ ತೆರವು ಮಾಡಬೇಕು ಎಂದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ