ದೇವನಹಳ್ಳಿ: ಶತಮಾನದ ಇತಿಹಾಸವುಳ್ಳ ದೇವನಹಳ್ಳಿ ಪಟ್ಟಣದ ಕೊರಚರಪಾಳ್ಯದ ಸರ್ಕಾರಿ ಶಾಲೆಯನ್ನು ಪ್ರೌಢಶಾಲೆಯನ್ನಾಗಿ ಮೇಲ್ದರ್ಜೆಗೇರಿಸಿದ್ದು, ದಾಖಲಾತಿ ಹೆಚ್ಚಿರುವ ಕಾರಣ ಕೊಠಡಿಗಳ ಸಮಸ್ಯೆಯಿಂದ ವಾಪಸ್ ಕಳುಹಿಸಲಾಗುತ್ತಿದೆ. ಶಾಲೆಯ ಪಕ್ಕದಲ್ಲೇ ಇರುವ ಹಳೆ ತಾಲೂಕು ಕಚೇರಿ ಜಾಗವನ್ನು ಶಾಲೆಗೆ ನೀಡಿದರೆ ಅನುಕೂಲವಾಗಲಿದೆ ಎಂದು ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘದ ಗೌರವಾಧ್ಯಕ್ಷ ಹಾಗೂ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಸಿ.ಜಗನ್ನಾಥ್ ತಹಸೀಲ್ದಾರರಿಗೆ ಮನವಿ ಮಾಡಿದರು.
ಹಳೆ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಹಾಗೂ ನಿವೃತ್ತ ತಹಸೀಲ್ದಾರ್ ಪಿ.ಗಂಗಾಧರಪ್ಪ ಮಾತನಾಡಿ, 1 ರಿಂದ 7ನೇ ತರಗತಿವರೆಗೆ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ ನಗದು ಬಹುಮಾನ ನೀಡಲಾಗಿದ್ದು ಇದು ಪ್ರತಿವರ್ಷವೂ ಮುಂದುವರಿಯಲಿದೆ. ಕಲಿಸಿದ ಗುರುಗಳು, ಕಲಿತ ಶಾಲೆಯನ್ನು ಎಂದಿಗೂ ಮರೆಯಬಾರದು. ಇಲ್ಲಿ ಕಲಿತ ಅನೇಕರು ಉನ್ನತ ಸ್ಥಾನಗಳಲ್ಲಿದ್ದು, ಅದೇ ರೀತಿ ಇಂದು ಕಲಿಯುತ್ತಿರುವ ಮಕ್ಕಳು ಉನ್ನತ ಶಿಕ್ಷಣ ಪಡೆದು ಉತ್ತಮ ಸ್ಥಾನ ಅಲಂಕರಿಸಬೇಕು ಎಂದರು.
ತಹಸೀಲ್ದಾರ್ ಎಂ.ಅನಿಲ್ ಮಾತನಾಡಿ, ಕೊರಚರಪಾಳ್ಯ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘದಿಂದ ಹಳೆ ತಾಲೂಕು ಕಚೇರಿ ಜಾಗವನ್ನು ಶಿಕ್ಷಣ ಇಲಾಖೆಗೆ ನೀಡುವಂತೆ ಮನವಿ ಮಾಡಿದ್ದಾರೆ. ಜಾಗವನ್ನು ಶಿಕ್ಷಣ ಇಲಾಖೆಗೆ ವರ್ಗಾಯಿಸುವಂತೆ ಈಗಾಗಲೇ ಪತ್ರ ಬರೆಯಲಾಗಿದೆ. ಅಲ್ಲಿಯವರೆಗೆ ತಾತ್ಕಾಲಿಕವಾಗಿ ತರಗತಿಗಳನ್ನು ಅಲ್ಲಿ ನಡೆಸಲು ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ತಿಳಿಸುತ್ತೇನೆ. ಹಳೆ ವಿದ್ಯಾರ್ಥಿಗಳು ಸಂಘ ಮಾಡಿಕೊಂಡು ಶಾಲೆಯ ಅಭಿವೃದ್ಧಿ ಹಾಗೂ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಅಭಿನಂದನಾರ್ಹ ಎಂದು ಪ್ರಶಂಸಿಸಿದರು.ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯಶಿಕ್ಷಕ ಶ್ರೀರಾಮಯ್ಯ, ಮುಖ್ಯಶಿಕ್ಷಕ ಸುಬಾಶ್.ಡಿ.ದಾಸರ್, ದೈಹಿಕ ಶಿಕ್ಷಕ ಪುಟ್ಟಸ್ವಾಮಿ, ಹಳೆ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು, ಎಸ್‌ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು.
ದೇವನಹಳ್ಳಿಯ ಕೊರಚರಪಾಳ್ಯ ಸರ್ಕಾರಿ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳ ಸಂಘದಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಹಳೆ ವಿದ್ಯಾರ್ಥಿಗಳ ಸಂಘದ ಗೌರವಾಧ್ಯಕ್ಷ ಹಾಗೂ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಸಿ.ಜಗನ್ನಾಥ್ ಇತರರು ಪಾಲ್ಗೊಂಡಿದ್ದರು.