ಸಾರ್ವಜನಿಕ ಗ್ರಂಥಾಲಯಕ್ಕೆ ವಿದ್ಯುತ್ ಸಂಪರ್ಕವೇ ಇಲ್ಲ..!

KannadaprabhaNewsNetwork |  
Published : Jun 21, 2026, 01:15 AM IST
೨೦ಕೆಎಂಎನ್‌ಡಿ-೨ಮಂಡ್ಯದಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದ ಬಳಿ ಒಂದು ವರ್ಷದ ಹಿಂದೆ ನಿರ್ಮಾಣಗೊಂಡು ಉದ್ಘಾಟನೆಗೊಳ್ಳದಿರುವ ಸಾರ್ವಜನಿಕ ಗ್ರಂಥಾಲಯ. | Kannada Prabha

ಸಾರಾಂಶ

ಮಂಡ್ಯ ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣಕ್ಕೆ ಹೊಂದಿಕೊಂಡಂತಿರುವ ಸ್ಥಳದಲ್ಲಿ ನೂತನ ಸಾರ್ವಜನಿಕ ಗ್ರಂಥಾಲಯ ನಿರ್ಮಾಣಗೊಂಡು ಒಂದು ವರ್ಷವೇ ಕಳೆದಿದೆ. ಆದರೂ ಇದುವರೆಗೂ ಗ್ರಂಥಾಲಯ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣಕ್ಕೆ ಹೊಂದಿಕೊಂಡಂತಿರುವ ಸ್ಥಳದಲ್ಲಿ ನೂತನ ಸಾರ್ವಜನಿಕ ಗ್ರಂಥಾಲಯ ನಿರ್ಮಾಣಗೊಂಡು ಒಂದು ವರ್ಷವೇ ಕಳೆದಿದೆ. ಆದರೂ ಇದುವರೆಗೂ ಗ್ರಂಥಾಲಯ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಅಂದಾಜು ಪಟ್ಟಿಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿಯನ್ನು ಸೇರಿಸಿಲ್ಲವೆಂಬ ಕಾರಣಕ್ಕೆ ಕೆಲಸವನ್ನು ಸ್ಥಗಿತಗೊಳಿಸಲಾಗಿದ್ದು, ಕಟ್ಟಡಕ್ಕೆ ಉದ್ಘಾಟನೆ ಭಾಗ್ಯವೇ ಕೂಡಿಬರದಂತಾಗಿದೆ.

ಸುಮಾರು ಒಂದು ಕೋಟಿ ರು. ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಗ್ರಂಥಾಲಯ ಕಟ್ಟಡವನ್ನು ನಿರ್ಮಿಸಲಾಗಿದೆ. ನೂತನ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸದೆ ಸಂಬಂಧಿಸಿದ ಅಧಿಕಾರಿಗಳು ಒಂದು ವರ್ಷದಿಂದಲೂ ಹಿಂದೇಟು ಹಾಕುತ್ತಲೇ ಬಂದಿದ್ದಾರೆ. ಇದರಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ ಉಂಟಾಗಿದೆ.

ಹಳೆಯ ಸಾರ್ವಜನಿಕ ಗ್ರಂಥಾಲಯದಲ್ಲಿ ಸ್ಥಳಾವಕಾಶದ ಕೊರತೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾದ ಪುಸ್ತಕಗಳು ಇರಲಿಲ್ಲವೆಂಬ ಕಾರಣಕ್ಕೆ ಗ್ರಂಥಾಲಯ ಇಲಾಖೆಯಿಂದ ಹೊಸ ಕಟ್ಟಡ ನಿರ್ಮಾಣಕ್ಕೆ ನಿರ್ಧರಿಸಲಾಗಿತ್ತು. ಸಾರ್ವಜನಿಕ ಗ್ರಂಥಾಲಯದ ಪಕ್ಕದಲ್ಲೇ ಇದ್ದ ಖಾಲಿ ಜಾಗದಲ್ಲಿ ನೂತನ ಕಟ್ಟಡವನ್ನು ೯೮ ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲು ತೀರ್ಮಾನಿಸಿ ಆರಂಭದಲ್ಲಿ ಲೋಕೋಪಯೋಗಿ ಇಲಾಖೆಗೆ ೫೦ ಲಕ್ಷ ರು. ಹಣವನ್ನು ಬಿಡುಗಡೆಗೊಳಿಸಲಾಗಿತ್ತು.

ಹೊಸ ಕಟ್ಟಡ ನಿರ್ಮಿಸುವ ಅಂದಾಜುಪಟ್ಟಿಯಲ್ಲಿ ವಿದ್ಯುತ್ ಕಾಮಗಾರಿಯನ್ನು ಸೇರಿಸಿರಲಿಲ್ಲವಾದ ಕಾರಣ ಲೋಕೋಪಯೋಗಿ ಇಲಾಖೆಯವರು ಕೇವಲ ಕಟ್ಟಡವನ್ನು ಮಾತ್ರ ನಿರ್ಮಿಸಿ ಹಸ್ತಾಂತರಕ್ಕೆ ಮುಂದಾಗಿದ್ದರು. ಆದರೆ, ಮುಖ್ಯ ಗ್ರಂಥಪಾಲಕ ನಾರಾಯಣಮೂರ್ತಿ ಅವರು ಕಟ್ಟಡವನ್ನು ಹಸ್ತಾಂತರ ಮಾಡಿಕೊಂಡಿರಲಿಲ್ಲವೆಂದು ತಿಳಿದುಬಂದಿದೆ. ಇದೇ ಜಟಾಪಟಿ ಕಳೆದೊಂದು ವರ್ಷದಿಂದಲೂ ಮುಂದುವರೆದಿತ್ತು.

ಇದರಿಂದ ಹಳೆಯ ಕಟ್ಟಡದಲ್ಲಿ ತೀರಾ ಕಿರಿದಾದ ಜಾಗದೊಳಗೆ ಓದಲು ಅಗತ್ಯವಿರುವ ಪುಸ್ತಕಗಳು ಇಲ್ಲದೆ ವಿದ್ಯಾರ್ಥಿಗಳು ಪರದಾಡುತ್ತಿದ್ದರು. ಎಷ್ಟೋ ಬಾರಿ ಈ ಸಮಸ್ಯೆಯನ್ನು ಮುಖ್ಯ ಗ್ರಂಥಪಾಲಕರ ಗಮನಕ್ಕೆ ತಂದರೂ ಸ್ಪಂದಿಸಿರಲಿಲ್ಲ. ಹೊಸ ಕಟ್ಟಡಕ್ಕೆ ಅಗತ್ಯವಿರುವ ವಿದ್ಯುತ್ ಕಾಮಗಾರಿ ನಡೆಸುವುದಕ್ಕೂ ಆಸಕ್ತಿ ತೋರಿರಲಿಲ್ಲವೆಂಬ ಆರೋಪಗಳು ಕೇಳಿಬಂದಿದ್ದವು.ನೂತನ ಗ್ರಂಥಾಲಯ ಕಟ್ಟಡದ ಪಕ್ಕದಲ್ಲೇ ಶೌಚಾಲಯವಿದ್ದು ಅದು ಸಂಪೂರ್ಣ ಹಾಳಾಗಿದೆ. ಅದನ್ನೂ ಸರಿಪಡಿಸುವ ಗೋಜಿಗೆ ಹೋಗದೆ ಅಧಿಕಾರಿಗಳು ನಿರಾಸಕ್ತಿ ತೋರಿದ್ದರು. ಹಳೆಯ ಶೌಚಾಲಯವನ್ನು ಒಡೆದುಹಾಕಿ ಹೊಸ ಶೌಚಾಲಯವನ್ನು ನಿರ್ಮಿಸಬೇಕಿದೆ. ಅದನ್ನೂ ೧೫ ಲಕ್ಷ ರು. ನಿರ್ಮಿಸಲು ಅಂದಾಜುಪಟ್ಟಿ ತಯಾರಿಸಲಾಗಿದೆ. ನೂತನ ಗ್ರಂಥಾಲಯ ಕಟ್ಟಡದಲ್ಲಿ ಕುಡಿಯುವ ನೀರು ಸೇರಿದಂತೆ ಇನ್ನಿತರ ಮೂಲಸೌಲಭ್ಯಗಳನ್ನು ಒದಗಿಸಬೇಕಿದೆ.

೪೮ ಲಕ್ಷ ರು. ಬಿಡುಗಡೆ: ನಾರಾಯಣಮೂರ್ತಿ

ನೂತನ ಸಾರ್ವಜನಿಕ ಗ್ರಂಥಾಲಯದ ವಿದ್ಯುತ್ ಕಾಮಗಾರಿ ಮತ್ತು ಚರಂಡಿ ಕಾಮಗಾರಿ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಗೆ ೪೮ ಲಕ್ಷ ರು. ಹಣವನ್ನು ಬಿಡುಗಡೆ ಮಾಡಲಾಗಿದೆ. ೧೫ ದಿನದಲ್ಲಿ ಕೆಲಸ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಹಳೆಯ ಶೌಚಾಲಯ ಮೂರು ವರ್ಷದಿಂದ ಹಾಳಾಗಿದೆ. ನೂತನ ಶೌಚಾಲಯ ನಿರ್ಮಾಣಕ್ಕೂ ೧೫ ಲಕ್ಷ ರು. ವೆಚ್ಚದಲ್ಲಿ ಅಂದಾಜು ಪಟ್ಟಿ ತಯಾರಿಸಲಾಗುತ್ತಿದೆ.

- ನಾರಾಯಣ ಮೂರ್ತಿ, ಮುಖ್ಯ ಗ್ರಂಥಪಾಲಕರುನೂತನ ಗ್ರಂಥಾಲಯ ಕಟ್ಟಡ ತೆರೆಯುವಂತೆ ವಿದ್ಯಾರ್ಥಿಗಳ ಆಗ್ರಹ

ನೂತನ ಸಾರ್ವಜನಿಕ ಗ್ರಂಥಾಲಯ ಕಟ್ಟಡ ತೆರೆಯುವಂತೆ ವಿದ್ಯಾರ್ಥಿಗಳು ಶನಿವಾರ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಸಾರ್ವಜನಿಕ ಗ್ರಂಥಾಲಯದ ನಿಯಮಿತ ಓದುಗರಾದ ನಾವು ಕೆಪಿಎಸ್‌ಸಿ, ಕೆಇಎ, ಪಿಡಿಒ, ಪಿಎಸ್‌ಐ, ಬ್ಯಾಂಕಿಂಗ್, ಯುಪಿಎಸ್‌ಸಿ ಸೇರಿದಂತೆ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆಡೆಸುತ್ತಿರುವ ವಿದ್ಯಾರ್ಥಿಗಳಾಗಿದ್ದೇವೆ. ಪ್ರತಿದಿನ ಗ್ರಂಥಾಲಯಕ್ಕೆ ಅನೇಕ ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ಆಗಮಿಸುತ್ತಿದ್ದಾರೆ. ಸ್ಪರ್ಧಾತ್ಮಕ ಪೀಕ್ಷೆಗಳಿಗೆ ಸಂಬಂಧಿಸಿದ ಗುಣಮಟ್ಟದ ಪುಸ್ತಕಗಳ ಅಗತ್ಯತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಂದ ಸಲ್ಲಿಸಲಾದ ಪುಸ್ತಕಗಳ ಪಟ್ಟಿಯನ್ನು ಪರಿಗಣಿಸಿ ಸ್ಪರ್ಧಾತ್ಮಕರೀಕ್ಷಾ ಪುಸ್ತಕಗಳಿಗೆ ಸೂಕ್ತದ್ಯತೆ ನೀಡುವಂತೆ ಕೋರಿದರು.

ಈಗಾಗಲೇ ನಿರ್ಮಾಣಗೊಂಡು ಒಂದು ವರ್ಷ ಕಳೆದಿರುವ ಹೊಸ ಗ್ರಂಥಾಲಯ ಕಟ್ಟಡವನ್ನು ಶೀಘ್ರವಾಗಿ ಸಾರ್ವಜನಿಕ ಬಳಕೆಗೆ ತೆರೆಯಬೇಕು. ವಾರದ ಎಲ್ಲಾ ಕಾರ್ಯದಿನಗಳಲ್ಲಿ ನಿಯಮಿತವಾಗಿ ತೆರೆದಿಟ್ಟು ವಿದ್ಯಾರ್ಥಿಗಳ ನಿರಂತರ ಅಧ್ಯಯನಕ್ಕೆ ಅನುಕೂಲಕರ ವಾತಾವರಣ ಕಲ್ಪಿಸುವಂತೆ ಮನವಿ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯುತ್‌ ಖಾಸಗೀಕರಣ ವಿರೋಧಿಸಿ ಮಂಡ್ಯದಲ್ಲಿ ಪ್ರತಿಭಟನೆ
ಪ್ರತಿ ತಾಲೂಕಿಗೊಂದು ಬ್ಯಾಡ್ಮಿಂಟನ್ ಕ್ರೀಡಾಂಗಣ ಅವಶ್ಯ: ಕುಮಾರ್ ಬಂಗಾರಪ್ಪ