ಶಿರಸಿ:
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯವರು ಅನಂತಕುಮಾರ ಹೆಗಡೆ ಅವರಿಗೇ ಟಿಕೆಟ್ ನೀಡಬೇಕು. ಅವರ ಉಪಚಾರಕ್ಕೆ ನಾವೂ ಇಲ್ಲಿ ಬರ್ತೀವಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಟಾಂಗ್ ನೀಡಿದರು.ಶನಿವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಆರಿಸಿ ಬಂದ ಮೇಲೆ ನಾಲ್ಕು ವರ್ಷ ಸುಮ್ಮನೆ ಕುಳಿತುಕೊಳ್ಳುವುದು, ಬಳಿಕ ಜನರ ಮುಂದೆ ಬಂದು ಬಾಯಿಗೆ ಬಂದಂತೆ ಮಾತನಾಡುವುದು ಅನಂತಕುಮಾರ ಹೆಗಡೆ ಅವರ ಚಾಳಿ. ಮತ ನೀಡಿದವರಿಗೆ ದ್ರೋಹ ಮಾಡುವ ದೇಶದ ಮೊದಲ ವ್ಯಕ್ತಿ ಅನಂತಕುಮಾರ ಹೆಗಡೆ. ಅಂಬೇಡ್ಕರ್ ವಿರಚಿತ ಸಂವಿಧಾನವನ್ನೇ ಬದಲು ಮಾಡುತ್ತೇನೆ ಎಂದು ಹೊರಟ ಅವರನ್ನು ಈ ಬಾರಿ ಜನರೇ ಬದಲಾವಣೆ ಮಾಡುತ್ತಾರೆ ಎಂದು ಭವಿಷ್ಯ ನುಡಿದರು.
ಪ್ರಜಾಪ್ರಭುತ್ವದಲ್ಲಿ ಸೋಲು-ಗೆಲುವು ಸಾಮಾನ್ಯ. ಚುನಾವಣೆಯಲ್ಲಿ ನಾವೂ ಸಹ ಸೋತಿದ್ದೆವು. ಆದರೆ, ಈ ರೀತಿ ಸಂಪ್ರದಾಯ, ಮಾನ, ಮರ್ಯಾದೆ ಬಿಟ್ಟು ಹೋಗುವುದು ಸರಿಯಲ್ಲ. ನಮ್ಮ ದೇಶದಲ್ಲಿ ಎಲ್ಲ ಜಾತಿ, ಧರ್ಮದವರೂ ಶಾಂತಿಯುತವಾಗಿ ಬದುಕುತ್ತಿದ್ದಾರೆ. ಈ ದೇಶದ ಸಂಸ್ಕೃತಿಯಲ್ಲಿ ಬದುಕಲು ನಾವೆಲ್ಲ ಅದೃಷ್ಟ ಮಾಡಿದ್ದೇವೆ. ಅನಂತಕುಮಾರ ಹೆಗಡೆ ಸಂಸ್ಕೃತಿ ಇಲ್ಲದೇ ಮಾತನಾಡುತ್ತಿದ್ದು, ಅವರು ಮನುಷ್ಯನೇ ಅಲ್ಲ. ಸಂಸ್ಕೃತಿ ಬೇಡ ಎನ್ನುವವರು ಬಾಳಲು ಸಾಧ್ಯವಿಲ್ಲ. ಹೆಗಡೆ ಒಬ್ಬ ತಲೆ ಕೆಟ್ಟ, ಮಾನ, ಮರ್ಯಾದೆ ಇಲ್ಲದ ವ್ಯಕ್ತಿ ಎಂದು ವಾಗ್ದಾಳಿ ನಡೆಸಿದರು.ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ ತನ್ನ ಹೇಳಿಕೆ ಬಗ್ಗೆ ಮಾತ್ರ ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ ಎಂದಿರುವ ಬಗ್ಗೆ ಉತ್ತರಿಸಿದ ಮಧು ಬಂಗಾರಪ್ಪ, ನಾನು ಅವರ ಹೇಳಿಕೆ ಗಮನಿಸಿಲ್ಲ. ಯಾರೇ ಇದ್ದರೂ ಕಾನೂನು ಪ್ರಕಾರವೇ ಹೋಗಬೇಕಾಗುತ್ತದೆ. ಆದರೆ, ಅನಂತಕುಮಾರ ಹೆಗಡೆ ಬಹಿರಂಗ ಹೇಳಿಕೆಯನ್ನು ಗಮನಿಸಿದ್ದು, ಅವರ ಮೇಲೆ ಕಾನೂನು ಕ್ರಮಕೈಗೊಳ್ಳಲೇಬೇಕು. ಈ ಮೂಲಕ ಎಲ್ಲರಿಗೂ ಸಮಾನತೆ ನೀಡಬೇಕಾಗುತ್ತದೆ ಎಂದರು.ಶಿಕ್ಷಕರಿಗೆ ಮುಂಬಡ್ತಿಯನ್ನು ಶಾಲಾ ಅವಧಿಯಲ್ಲಿ ನೀಡುವುದರಿಂದ ಶಿಕ್ಷಕರ ಕೊರತೆ ಉಂಟಾಗುತ್ತದೆ ಎಂಬ ಮಾತೂ ಕೇಳಿ ಬಂದಿದೆ. ಈ ಬಗ್ಗೆ ಶಿಕ್ಷಣ ತಜ್ಞರೊಂದಿಗೆ ಸಮಾಲೋಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.ಈ ವೇಳೆ ಶಾಸಕ ಭೀಮಣ್ಣ ನಾಯ್ಕ ಇದ್ದರು.