ನೀರು ಕೊಡಿ, ಇಲ್ಲವೇ ಚುನಾವಣೆ ಬಹಿಷ್ಕಾರ: ನಾಗರಾಜಪುರ ಗ್ರಾಮಸ್ಥರ ಆಗ್ರಹ

KannadaprabhaNewsNetwork | Updated : Apr 18 2024, 02:19 AM IST

ಸಾರಾಂಶ

ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು ಸೂಕ್ತ ವ್ಯವಸ್ಥೆ ಮಾಡದಿದ್ದರೆ ಗ್ರಾಪಂಗೆ ಮುತ್ತಿಗೆ ಹಾಕಿ ಚುನಾವಣೆ ಬಹಿಷ್ಕರಿಸುವುದಾಗಿ ಬೇಲೂರಿನ ನಾಗರಾಜಪುರ ಗ್ರಾಮಸ್ಥರು ಎಚ್ಚರಿಕೆ ನೀಡಿದ ಘಟನೆ ಬುಧವಾರ ನಡೆಯಿತು.

ಖಾಲಿ ಕೊಡ ಹಿಡಿದು ಪ್ರತಿಭಟನೆ

ಬೇಲೂರು: ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು ಸೂಕ್ತ ವ್ಯವಸ್ಥೆ ಮಾಡದಿದ್ದರೆ ಗ್ರಾಪಂಗೆ ಮುತ್ತಿಗೆ ಹಾಕಿ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ ಘಟನೆ ಬುಧವಾರ ನಡೆಯಿತು.

ತಾಲೂಕಿನ ಚಟಚಟನಹಳ್ಳಿ ಗ್ರಾಪಂ ವ್ಯಾಪ್ತಿಯ ನಾಗರಾಜಪುರ ಗ್ರಾಮದಲ್ಲಿ ಸುಮಾರು ೫ ತಿಂಗಳಿಂದ ಕುಡಿಯುವ ನೀರಿಗೆ ಸಮಸ್ಯೆ ಇದ್ದರೂ ಯಾವುದೇ ಜಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ ಎಂದು ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿ ನೀರು ಕೊಡಿ ಇಲ್ಲದಿದ್ದರೆ ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಖಾಲಿ ಕೊಡ ಹಾಗೂ ಗುರುತಿನ ಚೀಟಿ ಹಿಡಿದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಗ್ರಾಮದ ಮುಖಂಡ ಪರಮೇಶ್, ‘ನಮ್ಮ ನಾಗರಾಜಪುರ ಗ್ರಾಮದಲ್ಲಿ ೧೫೦ ಭೋವಿ ಜನಾಂಗದ ಕುಟುಂಬಗಳಿದ್ದು ಇಲ್ಲಿ ಎರಡೇ ಎರಡು ಕೊಳವೆಬಾವಿಗಳಿದ್ದು ಅದರಲ್ಲಿ ನೀರು ಬರದೆ ನಿಂತುಹೋಗಿದೆ. ತಾಲೂಕು ಆಡಳಿತಕ್ಕೆ ಹಾಗೂ ಗ್ರಾಪಂ ಅಧ್ಯಕ್ಷರು, ಸಂಬಂಧಪಟ್ಟ ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದರೂ ಸಹ ಇದರ ಬಗ್ಗೆ ಗಮನ ಹರಿಸಿಲ್ಲ. ನಮ್ಮ ಸಮಸ್ಯೆಯನ್ನು ಕೇಳಲು ಸಹ ಯಾರೂ ಬಂದಿಲ್ಲ. ಇಡೀ ಗ್ರಾಮದ ಜನರು ಗ್ರಾಪಂ ಮುಂಭಾಗದಲ್ಲಿ ಖಾಲಿ ಕೊಡ ಹಿಡಿದು ಪ್ರತಿಭಟನೆ ಮಾಡುತ್ತಿದ್ದೇವೆ. ಇದಕ್ಕೂ ಬಗ್ಗದಿದ್ದರೆ ಈ ಬಾರಿ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು. ‘

ಕೇವಲ ಸುಳ್ಳು ಆಶ್ವಾಸನೆ, ಭರವಸೆ ನೀಡುವುದು ನಮಗೆ ಬೇಕಿಲ್ಲ. ನಾವೇ ಒಂದು ತಿಂಗಳಿನಿಂದ ಟ್ಯಾಂಕರ್‌ಗಳ ಮೂಲಕ ನೀರನ್ನು ತಂದು ನಮ್ಮ ಗ್ರಾಮಕ್ಕೆ ನೀಡುತ್ತಿದ್ದೇವೆ’ ಎಂದು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಧಿಕ್ಕಾರ ಕೂಗಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ವೆಂಕಟೇಶ್, ಪ್ರಕಾಶ್, ಸೋಮು, ಲೊಕೇಶ್, ಗಂಗಾ, ನೇತ್ರಾ, ಗಂಗಮ್ಮ, ವೆಂಕಮ್ಮ, ಚಿಕ್ಕಮ್ಮ ಇತರರು ಹಾಜರಿದ್ದರು.

ಕುಡಿಯುವ ನೀರಿಗೆ ವ್ಯವಸ್ಥೆ ಮಾಡುವಂತೆ ಆಗ್ರಹಿಸಿ ಖಾಲಿ ಕೊಡ ಹಾಗೂ ಗುರುತಿನ ಚೀಟಿ ಹಿಡಿದು ನಾಗರಾಜಪುರ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು.

Share this article