ಭದ್ರಾವತಿ: ಮಹಿಳೆಯರು ಮೊದಲು ತಮ್ಮನ್ನು ತಾವು ಗೌರವಿಸಿಕೊಳ್ಳುವ ಮೂಲಕ ತಮ್ಮ ಜವಾಬ್ದಾರಿಗಳನ್ನು ಅರಿತುಕೊಳ್ಳಬೇಕು. ಪ್ರಸ್ತುತ ಮಹಿಳೆ ಎಲ್ಲಾ ರೀತಿಯ ಜವಾಬ್ದಾರಿಗಳನ್ನು ನಿರ್ವಹಿಸುವ ಸಾಮರ್ಥ್ಯ ಪಡೆದುಕೊಂಡಿದ್ದಾಳೆ ಎಂದು ಶಿವಮೊಗ್ಗ ಕಾರಗೃಹ ಸಹಾಯಕ ಅಧೀಕ್ಷಕಿ ಪಿ.ಭವ್ಯ ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಗರಸಭೆ ಅಧ್ಯಕ್ಷೆ ಜೆ.ಸಿ.ಗೀತಾ ರಾಜ್‌ಕುಮಾರ್, ಮಹಿಳೆಯರು ಎಲ್ಲಾ ಕೆಲಸಗಳನ್ನು ಸ್ವತಂತ್ರವಾಗಿ ನಿರ್ವಹಿಸ ಬಲ್ಲರು. ಕುಟುಂಬದಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ. ಅಲ್ಲದೆ ಕುಟುಂಬ ನಿರ್ವಹಣೆ ಜೊತೆಗೆ ಸಮಾಜದ ಇತರೆ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ಪುರುಷರಂತೆ ಯಾವುದರಲ್ಲೂ ಕಡಿಮೆ ಇಲ್ಲದಂತೆ ಮುನ್ನಡೆಯುತ್ತಿದ್ದು, ನಮ್ಮ ಇತಿಹಾಸದ ಪುಟದಲ್ಲಿ ಆನೇಕ ಸಾಧಕ ಮಹಿಳೆಯರಿದ್ದಾರೆ. ನಮಗೆ ಅವರು ಸ್ಫೂರ್ತಿದಾಯಕರಾಗಿದ್ದು, ಅವರ ದಾರಿಯಲ್ಲಿ ನಾವುಗಳು ಮುನ್ನಡೆಯಬೇಕು ಎಂದರು. ಇದೇ ವೇಳೆ ನಗರಸಭೆ ಪೌರಕಾರ್ಮಿಕರಾದ ಲಕ್ಷ್ಮಮ್ಮ ಸೋಮಣ್ಣ, ಪತ್ರಕರ್ತೆ ಆರ್.ಫಿಲೋಮಿನ ಅಂತೋಣಿ, ಡಿ.ಜಿ ಹಳ್ಳಿ ಆಶಾ ಕಾರ್ಯಕರ್ತೆ ರಾಜೇಶ್ವರಿ ನಂದೀಶ್ ಮತ್ತು ಹಳ್ಳಿಕೆರೆ-ಬಾರಂದೂರು ಅಂಗನವಾಡಿ ಕಾರ್ಯಕರ್ತೆ ಟಿ.ಮಂಜುಳ ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.
ಸಮಾಜದ ಅಧ್ಯಕ್ಷೆ ನಾಗರತ್ನ ವಾಗೀಶ್ ಕೋಠಿ, ಪ್ರಶಸ್ತಿ ಸಂಸ್ಥಾಪಕಿ, ಎಮೆರಿಟಸ್ ಪ್ರಾಧ್ಯಾಪಕಿ ಡಾ.ವಿಜಯದೇವಿ, ಸಮಾಜದ ಉಪಾಧ್ಯಕ್ಷೆ ವಿಜಯ ಜಗನ್ನಾಥ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಮಾಜದ ಗೌರವಾಧ್ಯಕ್ಷೆ ಆರ್.ಎಸ್.ಶೋಭಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಬಾರಿ ಲಾಟರಿ ಮೂಲಕ ಅದೃಷ್ಟ ಮಹಿಳೆಯಾಗಿ ನಾಗರತ್ನ ಕೋಠಿ ಆಯ್ಕೆಯಾದರು.