ಜಾನಪದ ಕಲಾಮೇಳದಲ್ಲಿ ನಾಲ್ವರು ಸಾಧಕರಿಗೆ ಚುಂಚಶ್ರೀ ಪ್ರಶಸ್ತಿ ಪ್ರದಾನ

KannadaprabhaNewsNetwork |  
Published : Sep 25, 2024, 12:49 AM IST
24ಕೆಎಂಎನ್ ಡಿ24 | Kannada Prabha

ಸಾರಾಂಶ

ನಾಗಮಂಗಲವು ಜಾನಪದದ ಗಂಗೋತ್ರಿ. ಭೈರವೈಕ್ಯಶ್ರೀಗಳ ವಾರ್ಷಿಕ ಪಟ್ಟಾಭಿಷಕ ಮಹೋತ್ಸವದ ಪ್ರಯುಕ್ತ ಈ ಜಾನಪದ ಜಾತ್ರೆಯೊಂದಿಗೆ ಪ್ರತಿವರ್ಷ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆಗೈದ ಐವರು ಸಾಧಕರಿಗೆ ಚುಂಚಶ್ರೀ ಪ್ರಶಸ್ತಿ ನೀಡುತ್ತಿರುವುದು ಶ್ರೀ ಮಠದ ಸಂಕಲ್ಪವಾಗಿದೆ. ನಿಜದ ಬದುಕು ಹಳ್ಳಿಯಲ್ಲಿದೆ ಅಲ್ಲಿಂದಲೇ ಜನಪದ ಆರಂಭವಾಗುವುದು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ 45ನೇ ಜಾನಪದ ಕಲಾಮೇಳದಲ್ಲಿ ನಾಲ್ವರು ಸಾಧಕರಿಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಶ್ರೀಗಳು, ಗಣ್ಯರು ಚುಂಚಶ್ರೀ ಪ್ರಶಸ್ತಿ ಪ್ರದಾನ ಮಾಡಿದರು.

ಸಾಹಿತ್ಯ ಮತ್ತು ಜಾನಪದ ಕ್ಷೇತ್ರದಿಂದ ಮದ್ದೂರು ತಾಲೂಕಿನ ಹಿರೇಗೌಡನದೊಡ್ಡಿ ಗ್ರಾಮದ ಡಾ.ರಾಮೇಗೌಡ, ಸಮಾಜ ಸೇವಾ ಕ್ಷೇತ್ರದಿಂದ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಕೊಳವಾರ ಗ್ರಾಮದ ಹಿರಿಯಣ್ಣ ಹೆಗಡೆ, ಜಾನಪದ ಕ್ಷೇತ್ರದಿಂದ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಶ್ರೀಕೃಷ್ಣ ಪಾರಿಜಾತ ಮತ್ತು ದೊಡ್ಡಾಟದ ಜಾನಪದ ಕಲಾವಿದೆ ಮಲ್ಲವ್ವ ಬಸಪ್ಪ ಮೆಗೇರಿ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಎಚ್.ಡಿ.ಕೋಟೆ ತಾಲೂಕಿನ ಕೊತ್ತಲಗಾಲ ಗ್ರಾಮದ ಪ್ರೊ.ಕೆ.ಪಿ.ಬಸವೇಗೌಡ ಅವರಿಗೆ 50 ಸಾವಿ ರು. ನಗದು ಸೇರಿದಂತೆ ವಿಶೇಷ ಸ್ಮರಣಿಕೆ, ಪ್ರಶಸ್ತಿ ಪತ್ರ, ಭೈರವೈಕ್ಯಶ್ರೀಗಳ ಪುತ್ಥಳಿ, ಏಲಕ್ಕಿ ಹಾರ, ಕ್ಷೇತ್ರದ ಗ್ರಂಥಗಳು, ಫಲತಾಂಬೂಲವನ್ನೊಳಗೊಂಡ ಚುಂಚಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನ್ಯಾಯಾಂಗ ಕ್ಷೇತ್ರದ ಸೇವೆಗಾಗಿ ಪ್ರಶಸ್ತಿಗೆ ಆಯ್ಕೆಯಾಗಿದ್ದ ತಾಲೂಕಿನ ಕಂಚನಹಳ್ಳಿ ಕೆ.ಎನ್. ಪುಟ್ಟೇಗೌಡರು ಅನಾರೋಗ್ಯದ ನಿಮಿತ್ತ ಗೈರಾಗಿದ್ದರು.

ಪ್ರಶಸ್ತಿ ಸ್ವೀಕಾರ ಖುಷಿ ತಂದಿದೆ:

ಚುಂಚಶ್ರೀ ಪ್ರಶಸ್ತಿ ಸ್ವೀಕರಿಸಿದ ಡಾ.ರಾಮೇಗೌಡ ಮಾತನಾಡಿ, ಪ್ರಶಸ್ತಿ ಪುರಸ್ಕೃರನ್ನು ಸಾರೋಟಿನಲ್ಲಿ ಕೂರಿಸಿ ಜಾನಪದ ಕಲಾ ತಂಡದೊಂದಿಗೆ ಮೆರವಣಿಗೆ ನಡೆಸಿ ಗೌರವಿಸಿರುವುದು ಅತ್ಯಂತ ಸಂತೋಷದ ವಿಷಯ ಎಂದರು.

ಮೆರವಣಿಗೆಯಲ್ಲಿ ಜನಪದರು ಹಾಡು ಹಾಡುತ್ತಾ, ಶ್ರೀಗಳಿಗೆ ಮತ್ತು ಪ್ರಶಸ್ತಿ ಪುರಸ್ಕೃತರಿಗೆ ನಮಸ್ಕಾರ ಮಾಡುತ್ತಿದ್ದರು. ಇಂತಹದ್ದೊಂದು ಭಾವ ಹುಟ್ಟುವುದು. ಜನಪದ ಹಾಗೂ ಗ್ರಾಮೀಣ ಪ್ರದೇಶದ ಜನರಲ್ಲಿ ಮಾತ್ರ. ಅಂತಹ ಜನಪದರ ನಡುವೆ ಪ್ರಶಸ್ತಿ ಸ್ವೀಕರಿಸಿರುವುದು ಖುಷಿ ತಂದಿದೆ ಎಂದು ಶ್ರೀಮಠದ ಕಾರ್ಯವನ್ನು ಶ್ಲಾಘಿಸಿದರು.

ಜಾನಪದ ಬೇರು ಮರೆತರೆ ಭವಿಷ್ಯವಿಲ್ಲ:

ಸಾನಿಧ್ಯ ವಹಿಸಿದ್ದ ಶ್ರೀಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಶ್ರೀಗಳು ಮಾತನಾಡಿ, ಜಾನಪದವು ದೀರ್ಘಕಾಲದ ಬೇರು, ಈ ಬೇರನ್ನು ಮರೆತರೆ ಭವಿಷ್ಯವಿಲ್ಲ, ಮೂಲವನ್ನು ಕಾಪಾಡುವ ಜವಾಬ್ದಾರಿ ನಮ್ಮದು ಜಾನಪದದ ಬೇರನ್ನು ಉಳಿಸಿ ಬೆಳೆಸಿ ಎಂದರು.

ವಿಜ್ಞಾನ ತಂತ್ರಜ್ಞಾನದ ಫಲದಿಂದ ಜಗತ್ತು ಬಹಳ ಎತ್ತರಕ್ಕೆ ಬೆಳೆದಿದೆ. ಆದರೆ ಅದನ್ನೇ ಹೆಚ್ಚಾಗಿ ನೆಚ್ಚಿಕೊಂಡರೆ ವಿನಾಶ ಸಂಭವಿಸಲಿದೆ. ನಾಗಾಲೋಟದಲ್ಲಿ ಓಡುತ್ತಿರುವ ವಿಶ್ವದ ಪ್ರಗತಿಯ ಜೊತೆಗೆ ಜ್ಞಾನವು ಬದುಕಿನ ಭಾಗವಾಗಲಿ ಎಂದು ಹೇಳಿದರು.

ನಾಗಮಂಗಲವು ಜಾನಪದದ ಗಂಗೋತ್ರಿ. ಭೈರವೈಕ್ಯಶ್ರೀಗಳ ವಾರ್ಷಿಕ ಪಟ್ಟಾಭಿಷಕ ಮಹೋತ್ಸವದ ಪ್ರಯುಕ್ತ ಈ ಜಾನಪದ ಜಾತ್ರೆಯೊಂದಿಗೆ ಪ್ರತಿವರ್ಷ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆಗೈದ ಐವರು ಸಾಧಕರಿಗೆ ಚುಂಚಶ್ರೀ ಪ್ರಶಸ್ತಿ ನೀಡುತ್ತಿರುವುದು ಶ್ರೀ ಮಠದ ಸಂಕಲ್ಪವಾಗಿದೆ. ನಿಜದ ಬದುಕು ಹಳ್ಳಿಯಲ್ಲಿದೆ ಅಲ್ಲಿಂದಲೇ ಜನಪದ ಆರಂಭವಾಗುವುದು ಎಂದು ಆಶೀರ್ವದಿಸಿದರು.

ಇದೇ ವೇಳೆ ಚುಂಚಶ್ರೀ ಸ್ಮರಣ ಸಂಚಿಕೆ ಲೋಕಾರ್ಪಣೆಗೊಳಿಸಿದ ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹಾಗೂ ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಮಾತನಾಡಿದರು.

ಸಂಜೆ 7 ಗಂಟೆಗೆ ಶ್ರೀಕ್ಷೇತ್ರದ ಜೋಡಿ ರಸ್ತೆಯಲ್ಲಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥಶ್ರೀಗಳ ಸರ್ವಾಲಂಕೃತ ಮುತ್ತಿನ ಪಾಲಕಿ ಉತ್ಸವ ಹಾಗೂ ಜಾನಪದ ಕಲಾವಿದರ ವರ್ಣರಂಜಿತ ಮೆರವಣಿಗೆ ನಡೆಯಿತು. ನಂತರ ಶ್ರೀ ಕಾಲಭೈರವೇಶ್ವರಸ್ವಾಮಿ ಪುಷ್ಕರಣೆಯಲ್ಲಿ ತೆಪ್ಪೋತ್ಸವ ಜರುಗಿತು.ಇಂದು ಶ್ರೀಗುರು ಸಂಸ್ಮರಣೋತ್ಸವ:

ಸೆ.25ರ ಬುಧವಾರ ಬೆಳಗ್ಗೆ 9.30ಕ್ಕೆ ಶ್ರೀಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥಶ್ರೀಗಳ ಸಾನಿಧ್ಯದಲ್ಲಿ ಭೈರವೈಕ್ಯ ಡಾ.ಬಾಲಗಂಗಾಧರನಾಥಶ್ರೀಗಳ ವಾರ್ಷಿಕ ಪಟ್ಟಾಭಿಷೇಕ, ಶ್ರೀಗುರು ಸಂಸ್ಮರಣೋತ್ಸವ ಮತ್ತು ರಾಜ್ಯಮಟ್ಟದ 45ನೇ ಶ್ರೀ ಕಾಲಭೈರವೇಶ್ವರ ಜಾನಪದ ಕಲಾಮೇಳದ ಸಮಾರೋಪ ಸಮಾರಂಭ ನಡೆಯಲಿದೆ. ವಿವಿಧ ಶಾಖಾ ಮಠಗಳ ಶ್ರೀಗಳು ಮತ್ತು ಜಾನಪದ ಕ್ಷೇತ್ರದ ಹಲವು ಗಣ್ಯರು ಪಾಲ್ಗೊಳ್ಳುವರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ