ಕನ್ನಡಪ್ರಭ ವಾರ್ತೆ ಅರಸೀಕೆರೆ
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಸವಿತಾ ಸಮಾಜದ ಉಪಾಧ್ಯಕ್ಷ ವಿಜಯ್ ಕುಮಾರ್, ಸತತ ನಾಲ್ಕು ಬಾರಿ ಜನರ ವಿಶ್ವಾಸ ಪಡೆದು ವಿಧಾನಸಭೆಗೆ ಆಯ್ಕೆಯಾಗಿರುವ ಕೆ.ಎಂ. ಶಿವಲಿಂಗೇಗೌಡರು ಅಭಿವೃದ್ಧಿ ಮತ್ತು ಜನಸೇವೆಯ ಮೂಲಕ ವಿಶಿಷ್ಟ ಗುರುತನ್ನು ನಿರ್ಮಿಸಿಕೊಂಡಿದ್ದಾರೆ. ರೈತರು, ಕಾರ್ಮಿಕರು, ಹಿಂದುಳಿದ ವರ್ಗಗಳು ಹಾಗೂ ಬಡ ಜನರ ಬದುಕಿನ ಕಷ್ಟ-ಸುಖಗಳನ್ನು ಸಮೀಪದಿಂದ ಅರಿತಿರುವ ಅವರು, ಯಾವುದೇ ಸಚಿವ ಖಾತೆ ನೀಡಿದರೂ ಸಮರ್ಥವಾಗಿ ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದರು.
ಕ್ಷೇತ್ರವು ಹಲವು ದಶಕಗಳಿಂದ ರಾಜ್ಯ ರಾಜಕಾರಣದಲ್ಲಿ ತನ್ನದೇ ಆದ ಪ್ರಭಾವ ಹೊಂದಿದ್ದರೂ, ಇಲ್ಲಿಯವರೆಗೆ ಈ ಕ್ಷೇತ್ರದ ಶಾಸಕರಿಗೆ ಸಚಿವ ಸ್ಥಾನ ದೊರೆಯದಿರುವುದು ಕ್ಷೇತ್ರದ ಜನತೆಯಲ್ಲಿ ಅಸಮಾಧಾನ ಮೂಡಿಸಿದೆ. ಕಳೆದ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದು, ಇದೀಗ ಆ ಭರವಸೆಯನ್ನು ಈಡೇರಿಸುವ ಸಮಯ ಬಂದಿದೆ ಎಂದು ತಿಳಿಸಿದರು.ಮೈಸೂರು- ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಬಲಪಡಿಸುವ ಶಕ್ತಿ ಶಿವಲಿಂಗೇಗೌಡರ ನಾಯಕತ್ವಕ್ಕಿದೆ. ಅವರಂತಹ ಅನುಭವಿ ಹಾಗೂ ಜನಪರ ನಾಯಕನಿಗೆ ಸಚಿವ ಸ್ಥಾನ ನೀಡಿದರೆ ಅದು ಕೇವಲ ಅರಸೀಕೆರೆ ಕ್ಷೇತ್ರಕ್ಕಷ್ಟೇ ಅಲ್ಲ, ಪಕ್ಷದ ಸಂಘಟನೆಗೂ ಹೊಸ ಶಕ್ತಿ ತುಂಬಲಿದೆ ಎಂದು ಅಭಿಪ್ರಾಯಪಟ್ಟರು.ಸವಿತಾ ಸಮಾಜದ ಖಜಾಂಚಿ ರಾಜು ಮಾತನಾಡಿ, ಶಾಸಕರಾಗಿ ಹಾಗೂ ರಾಜ್ಯ ಗೃಹ ಮಂಡಳಿ ಅಧ್ಯಕ್ಷರಾಗಿ ದೊರೆತ ಅವಕಾಶವನ್ನು ಜನಸೇವೆಗೆ ಮೀಸಲಿಟ್ಟಿರುವ ಶಿವಲಿಂಗೇಗೌಡರು ಆಡಳಿತಾತ್ಮಕ ಅನುಭವ ಹೊಂದಿದ್ದಾರೆ. ಸಚಿವ ಸ್ಥಾನ ದೊರೆತರೆ ರಾಜ್ಯದ ಅಭಿವೃದ್ಧಿ ಮತ್ತು ಜನಪರ ಆಡಳಿತಕ್ಕೆ ಅವರ ಕೊಡುಗೆ ಮತ್ತಷ್ಟು ಪರಿಣಾಮಕಾರಿಯಾಗಲಿದೆ ಎಂದು ಹೇಳಿದರು.ಸುದ್ದಿಗೋಷ್ಠಿಯಲ್ಲಿ ತಾಲೂಕು ಸವಿತಾ ಸಮಾಜದ ಗೌರವಾಧ್ಯಕ್ಷ ನಾರಾಯಣಸ್ವಾಮಿ, ಮುಖಂಡರಾದ ರಾಜುಮಣಿ, ಧರ್ಮ, ನಾಗೇಂದ್ರ, ನಾಗರಾಜ್, ರಘು ಸೇರಿದಂತೆ ಸಮಾಜದ ಹಲವಾರು ಮುಖಂಡರು ಉಪಸ್ಥಿತರಿದ್ದರು.