ಕನ್ನಡಪ್ರಭ ವಾರ್ತೆ ಸೊರಬ
ಗಳಿಸಿದ್ದರಲ್ಲಿ ಸ್ವಲ್ಪವನ್ನಾದರೂ ಸಮಾಜ ಸೇವೆಗಾಗಿ ಮೀಸಲಿಟ್ಟಾಗ ಮನುಷ್ಯ ಜನ್ಮಕ್ಕೆ ಸಾರ್ಥಕತೆ ಬರುತ್ತದೆ, ಪುಣ್ಯ ಲಭಿಸುತ್ತದೆ. ಆದ್ದರಿಂದ ತಾನು, ತನಗೆ ಎನ್ನುವ ಸ್ವಾರ್ಥತೆಯನ್ನು ತೊರೆದು ಸಮಾಜದಲ್ಲಿ ಅತ್ಯಂತ ಕೆಳಸ್ಥರದಲ್ಲಿ ಬದುಕುತ್ತಿರುವವರನ್ನು ಗುರ್ತಿಸಿ ನೆರವಾಗುವುದರಿಂದ ಮನುಷ್ಯ ಜನ್ಮಕ್ಕೆ ಸಾರ್ಥಕತೆ ಮೂಡುತ್ತದೆ ಎಂದು ಸುರಭಿ ಸೇವಾ ಚಾರಿಟೆಬಲ್ ಟ್ರಸ್ಟ್ ರಾಜ್ಯಾಧ್ಯಕ್ಷ ಎಸ್.ಜಿ. ರಾಮಚಂದ್ರ ಹೇಳಿದರು.ತಾಲೂಕಿನ ಜಡೆ ಗ್ರಾಮದಲ್ಲಿ ಶುಕ್ರವಾರ ಸುರಭಿ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಜಡೆ ಸಂಸ್ಥಾನ ಮಠದ ಡಾ. ಮಹಾಂತ ಸ್ವಾಮಿಗಳಿಗೆ ಮರದ ಸಿಂಹಾಸನ ಕೊಡುಗೆಯಾಗಿ ನೀಡಿ ಅವರು ಮಾತನಾಡಿದರು.
ವ್ಯಕ್ತಿ ಅಥವಾ ಸಂಘ- ಸಂಸ್ಥೆಗಳನ್ನು ಹಣದಿಂದ ಅಳೆಯುವುದಿಲ್ಲ. ಸಮಾಜಕ್ಕೆ ತಮ್ಮ ಕೈಲಾದಷ್ಟು ಕೊಡುಗೆಯನ್ನು ನೀಡುವ ವ್ಯಕ್ತಿತ್ವದಿಂದ ಸಮಾಜವೇ ಗುರ್ತಿಸಿ ಪುರಸ್ಕರಿಸುತ್ತವೆ. ಫಲಾಪೇಕ್ಷೆ ಇಲ್ಲದ ಸುರಭಿ ಚಾರಿಟೇಬಲ್ ಟ್ರಸ್ಟ್ ರಾಜ್ಯಾದ್ಯಂತ ಹಲವು ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಂಡು ನೆರವಾಗುತ್ತಿದೆ. ಇಂಥ ಮಹೋನ್ನತ ಕಾರ್ಯಗಳನ್ನು ಪ್ರತೀ ಸಂಘ-ಸAಸ್ಥೆಗಳು ಹಮ್ಮಿಕೊಳ್ಳುವುದರಿಂದ ಸಮಾಜದ ಉನ್ನತಿ ಸಾಧ್ಯವಾಗುತ್ತದೆ ಎಂದರು.ಇತರೆ ಜಿಲ್ಲೆ ಮತ್ತು ತಾಲೂಕಿನಲ್ಲಿ ತನ್ನದೇ ಆದ ಭಕ್ತವೃಂದ ಹೊಂದಿರುವ ಜಡೆ ಮಠ ಆಧ್ಯಾತ್ಮಿಕವಾಗಿ ದಾರ್ಶನಿಕ ಪರಂಪರೆ ಸಾರವನ್ನು ಭಕ್ತರಲ್ಲಿ ಮೂಡಿಸುವ ನಿಟ್ಟಿನಲ್ಲಿ ಮೊದಲ ಸ್ಥಾನದಲ್ಲಿದೆ. ಗುರು ಪರಂಪರೆಯ ಜೊತೆಗೆ ಸಮಾಜ ಸೇವೆಯಲ್ಲಿಯೂ ತನ್ನದೇ ಗುರುತರ ಅಸ್ಥಿತ್ವ ಹೊಂದಿದೆ. ಜಡೆ ಮಠದ ಕೀರ್ತಿ ರಾಜ್ಯದೆಲ್ಲೆಡೆ ಹರಡಿ ಇನ್ನಷ್ಟು ಪ್ರಗತಿ ಹೊಂದಲಿ ಎಂದು ಆಶಿಸಿದರು.ಸುರಭಿ ಚಾರಿಟೇಬಲ್ ಟ್ರಸ್ಟ್ ನೀಡಿದ ಮರದ ಸಿಂಹಾಸನ ಸ್ವೀಕರಿಸಿ ಜಡೆ ಸಂಸ್ಥಾನ ಮಠದ ಮಹಾಂತ ಸ್ವಾಮಿಗಳು ಮಾತನಾಡಿ, ಸಂಸ್ಥಾನ ಮಠದ ಶ್ರೇಯೋಭಿವೃದ್ಧಿಗಾಗಿ ಸದ್ಭಕ್ತರು ವಿವಿಧ ರೀತಿಯಲ್ಲಿ ಕೊಡುಗೆಗಳನ್ನು ನೀಡುವ ಮೂಲಕ ಸೇವಾ ಕೈಂಕರ್ಯದಲ್ಲಿ ತೊಡಗುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಮಠದ ಪರಂಪರೆಯ ಇತಿಹಾಸದಲ್ಲಿ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ ಎಂದರು.
ಆಧ್ಯಾತ್ಮಿಕ ಒಲವು ಪ್ರತಿಯೊಬ್ಬರಲ್ಲೂ ಮೂಡಬೇಕು. ಇದರಿಂದ ಸಮಾಜದ ಉನ್ನತಿಗೆ ಕಾರಣವಾಗುತ್ತದೆ. ಸುರಭಿ ಸೇವಾ ಚಾರಿಟೇಬಲ್ ಟ್ರಸ್ಟ್ ಹಲವು ಸಮಾಜಮುಖಿ ಚಿಂತನೆ ಹೊಂದಿ ಕಾರ್ಯಕ್ರಮವನ್ನು ಮಾಡುತ್ತ ತನ್ನದೇ ಆದ ಸೇವೆಯನ್ನು ಸಲ್ಲಿಸುತ್ತಿದೆ. ಇವರ ಸೇವಾ ಕಾರ್ಯಗಳಿಗೆ ಎಲ್ಲರೂ ಸಹಕಾರ ಹಾಗೂ ಪ್ರೋತ್ಸಾಹಿಸುವ ಅಗತ್ಯವಿದೆ ಎಂದರು.ಇದೇ ಸಂದರ್ಭದಲ್ಲಿ ಜಡೆ ಗ್ರಾಮದ ಸಂತೋಷ್ ಶೇಟ್ ಮತ್ತು ಶಿವಮೊಗ್ಗದ ಎನ್.ಹೆಚ್. ಮಲ್ಲಿಕಾರ್ಜುನ ಕುಟುಂಬದವರು ಬೆಳ್ಳಿಯದಾರ ಮತ್ತು ಕರಕಮಲಗಳನ್ನು ಮಠಕ್ಕೆ ದಾನವಾಗಿ ನೀಡಿದರು.
ಜಡೆ ಮಠದ ಉತ್ತರಾಧಿಕಾರಿ ರುದ್ರದೇವರು, ಸುರಭಿ ಚಾರಿಟೇಬಲ್ ಟ್ರಸ್ಟ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ವಾಣಿಶ್ರೀ, ಟ್ರಸ್ಟ್ ಜಿಲ್ಲಾಧ್ಯಕ್ಷೆ ಮಂಜುಳಾ ಶ್ಯಾಮಸುಂದರ್, ಉಪಾಧ್ಯಕ್ಷೆ ಕುಸುಮಾ, ಕಾರ್ಯದರ್ಶಿ ಉಮಾ, ಅಮಿತ್ ಗೌಡ, ವಿರೂಪಾಕ್ಷಪ್ಪ, ರಾಜು ಗೌಡ, ಗಂಗಾಧರಪ್ಪ, ನಾಗರಾಜ ಗೌಡ ಮೊದಲಾದವರು ಹಾಜರಿದ್ದರು.- - - -03ಕೆಪಿಸೊರಬ01:
ಸೊರಬ ತಾಲೂಕಿನ ಜಡೆ ಮಠಕ್ಕೆ ಸುರಭಿ ಸೇವಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮರದ ಸಿಂಹಾಸನವನ್ನು ಕೊಡುಗೆಯಾಗಿ ನೀಡಲಾಯಿತು.