ಕನ್ನಡಪ್ರಭ ವಾರ್ತೆ ಮಂಡ್ಯ
ಮಹಾತ್ಮ ಗಾಂಧೀಜಿ ಅವರ ವಿಚಾರಧಾರೆ ಮತ್ತು ಸಂದೇಶವನ್ನು ಪಸರಿಸುವ ಮತ್ತು ಮುಂದಿನ ಪೀಳಿಗೆಗೆ ಶಾಶ್ವತಗೊಳಿಸುವ ಉದ್ದೇಶದಿಂದ ಗಾಂಧಿ ಗ್ರಾಮವನ್ನು ಹುಟ್ಟು ಹಾಕಲಾಗಿದೆ. ಇಲ್ಲಿ ಜೀವ ತಳೆದಿರುವ ಅರೆನಗ್ನ ಫಕೀರನ ಹತ್ತಾರು ಶಿಲ್ಪಗಳಿಂದಾಗಿ ಈ ಸ್ಥಳ ಸೂರ್ತಿಯ ತಾಣವಾಗಿ ರೂಪಾಂತರಗೊಂಡಿದೆ.
ಗಾಂಧೀಜಿಯವರ ವ್ಯಕ್ತಿತ್ವ-ವಿಚಾರಗಳನ್ನು ಬಿಂಬಿಸುವ ಸಿಮೆಂಟ್ ಶಿಲ್ಪಕಲಾಕೃತಿಗಳು 40 ಹಿರಿಯ ಮತ್ತು ಕಿರಿಯ ಕಲಾವಿದರ ಕೈಯಲ್ಲಿ ಅರಳಿದ್ದು, ಗಾಂಧಿ ಪ್ರತಿಮೆಗಳಿಗೆ ಇದೀಗ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ಹಗಲು-ರಾತ್ರಿ ಎನ್ನದೆ ಅವಿರತವಾಗಿ ದುಡಿದು ಗಾಂಧಿ ವಿಚಾರಗಳಿಗೆ ಮೂರ್ತರೂಪ ನೀಡಿದ್ದಾರೆ. ಕಲಾವಿದರ ಶ್ರಮ ಶಿಲ್ಪಗಳಲ್ಲಿ ಪ್ರತಿಫಲಿಸಿದೆ.ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಹಾಗೂ ಮಂಡ್ಯದ ಮಹಾತ್ಮ ಗಾಂಧಿ ಸ್ಮಾರಕ ಟ್ರಸ್ಟ್ ಸಹಯೋಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಲ್ಪಿ ಕೆ.ನಾರಾಯಣರಾವ್ ಮಾರ್ಗದರ್ಶನದಲ್ಲಿ ಕಳೆದ 15 ದಿನಗಳಿಂದ ಶಿಬಿರ ನಡೆಯುತ್ತಿದೆ. ಹಸಿರು ಐಸಿರಿಯ ಮಧ್ಯೆ ಗಾಂಧಿ ಶಿಲ್ಪಕಲಾಕೃತಿಗಳು ಸ್ಥಾಪನೆಗೊಂಡಿವೆ. ಶಿಬಿರಕ್ಕೆ ಸಂಚಾಲಕರಾಗಿ ಅಕಾಡೆಮಿ ಸದಸ್ಯ ವೈ.ಕುಮಾರ್ ಕಾರ್ಯನಿರ್ವಹಿಸಿದರು.
ಗಾಂಧಿ ಗ್ರಾಮವನ್ನು ಪ್ರವೇಶಿಸುತ್ತಿದ್ದಂತೆ ಧ್ಯಾನಸ್ಥ ಸ್ಥಿತಿಯಲ್ಲಿರುವ 10 ಅಡಿ ಎತ್ತರ ಗಾಂಧಿ ಶಿಲ್ಪ ನಮ್ಮನ್ನು ಎದುರುಗೊಳ್ಳುತ್ತದೆ. ಇಡೀ ಶಿಲ್ಪ ಮನೋಹಕವಾಗಿದ್ದು ಗಮನ ಸೆಳೆಯುತ್ತದೆ. ಹಾಗೇ ಬಲಕ್ಕೆ ತಿರುಗಿದರೆ ದಂಡಿಯಾತ್ರೆ (ಉಪ್ಪಿನ ಸತ್ಯಾಗ್ರಹ)ಯ ಸಿಮೆಂಟ್ ಕಲಾಕೃತಿಗಳು ನಮ್ಮನ್ನು ಸ್ವಾಗತಿಸುತ್ತವೆ. ಧ್ಯಾನಸ್ಥ ಗಾಂಧಿ ಶಿಲ್ಪದ ಹಿಂಭಾಗದ ಅನತಿ ದೂರದಲ್ಲಿ ಗಾಂಧಿ ಮತ್ತು ಕಸ್ತೂರಬಾ ಗಾಂಧಿ ಅವರು ಚರ್ಚೆಯಲ್ಲಿ ತೊಡಗಿರುವುದು ಹಾಗೂ ಗಾಂಧಿ ಅವರೊಂದಿಗೆ ಅಭ ಮತ್ತು ಮನು’ ಶಿಲ್ಪಗಳು ಆಕರ್ಷಿಸುತ್ತವೆ.
ಅಲ್ಲಿಂದ ಸ್ವಲ್ಪ ಮುಂದಕ್ಕೆ ಸಾಗಿದರೆ, ಕೆಟ್ಟದನ್ನು ನೋಡಬೇಡ, ಕೇಳಬೇಡ’, ಮಾತನಾಡಬೇಡ’ಎನ್ನುವ ಮೂರು ಕೋತಿಗಳು; ಗೋವು ಮತ್ತು ಗಾಂಧೀಜಿ’; ಚರಕ ಸುತ್ತುತ್ತಾ ನೂಲು ತೆಗೆಯುತ್ತಿರುವ ಗಾಂಧೀಜಿ’ ಹಾಗೂ ಗಾಂಧಿ ಗ್ರಾಮ’ ನಿರ್ಮಾಣದ ಕನಸು ಕಂಡಿದ್ದ, ಇದರ ಪ್ರೇರಕಶಕ್ತಿಯಾದ ಜಿ.ಮಾದೇಗೌಡರ ಪುತ್ಥಳಿ ಎದುರುಗೊಳ್ಳುತ್ತದೆ.
ಶಿವಮೊಗ್ಗ, ಧಾರವಾಡ, ಕೊಪ್ಪಳ, ಮೈಸೂರು, ಚಿತ್ರದುರ್ಗ, ಹಾವೇರಿ, ದಾವಣಗೆರೆ, ಬೀದರ್, ರಾಯಚೂರು, ಕಲಬುರಗಿ, ಯಾದಗಿರಿ, ಬೆಂಗಳೂರು, ಉಡುಪಿ ಸೇರಿದಂತೆ ವಿವಿಧ ಜಿಗಳಿಂದ ಒಟ್ಟು 22 ಮಂದಿ ಹಿರಿಯ ಶಿಲ್ಪಿಗಳು ಮತ್ತು 18 ಮಂದಿ ಸಹಾಯಕ ಶಿಲ್ಪಿಗಳು ಭಾಗವಹಿಸಿದ್ದಾರೆ.
ಸಿ.ವಿ.ರಾಮಕೃಷ್ಣ, ಶ್ರೀನಾಥ್ ಚಿತ್ರಗಾರ್, ಕೆ.ವಿನಾಯಕ, ಬಿ.ಎಂ.ರಾಜೇಂದ್ರ, ಎಚ್.ಪರಶುರಾಮ, ಎಂ.ವೆಂಕಟೇಶ್, ಮರಿಯಪ್ಪ ಡಿ.ಹೊನ್ನಮ್ಮನವರ, ಎಂ.ರಘು, ಎಚ್.ಎಲ್.ರವಿ, ನಾಗರಾಜ್ ಎಂ.ಬಡಿಗೇರ, ಕುಮಾರಸ್ವಾಮಿ, ಕೆ.ಓ.ಪ್ರವೀಣ್, ವೀರೇಂದ್ರ ಎಸ್.ಪಾಟೀಲ, ಬಿ.ಜಿ.ಗೌರಿಶಂಕರ, ಹನಮಂತ ಸಿದ್ದಪ್ಪ ಮುಂಡರಗಿ, ಸಿ.ವಿ.ಪಾಂಡುರಂಗ, ಹನುಮಂತ ಎಸ್.ಮೀರಗಳೆ, ಟಿ.ಮಂಜುನಾಥ, ಗಣೇಶ್ ಅಂಬಿಗೇರಿ, ದೇವಪ್ಪ ರಾಮಲಿಂಗಪ್ಪ.
ಆರ್.ಮುದುಕಪ್ಪ, ದಾದಪೀರ್ ಮಾಮದಲಿ, ಎಸ್.ಮಧು, ಎಂ.ಮೋಹನ್, ಆರ್.ಆಕಾಶ್, ವೈ.ಗಂಗಾಧರ್, ಜೆ.ಸಚಿನ್, ವಿ.ವೇಣುಗೋಪಾಲ, ಎಂ.ಚೇತನ್, ದೇವೇಂದ್ರಪ್ಪ ಬಿ.ಹಂದ್ರಾಳ, ಕಿರಣ್ ಬಾಲಾಜಿ, ಕುಮಾರಸ್ವಾಮಿ, ಬಿ.ಜತೀನ್, ಶಿವಕುಮಾರ್, ಸಂಗಣ್ಣ ಪರಸಪ್ಪ ಗೋರೆಬಾಳ, ಸುನೀಲ್‌ಕುಮಾರ್, ಮಲ್ಲಿಕಾರ್ಜುನ, ಎಸ್.ಡಿ.ಮಣಿಕಂಠ.
- ಕೆ.ನಾರಾಯಣರಾವ್, ಶಿಬಿರದ ನಿರ್ದೇಶಕರು
ಗಾಂಧೀಜಿ ಅವರ ಶಿಲ್ಪಗಳು ‘ಗಾಂಧಿ ಗ್ರಾಮ’ಕ್ಕೆ ಮೆರಗು ನೀಡಿವೆ. ಗಾಂಧಿ ಅವರ ಜೀವನದ ವಿಚಾರಗಳನ್ನು ಅರಿತುಕೊಳ್ಳಲು ಪೂರಕವಾಗುವಂತೆ ‘ಗಾಂಧಿ ಗ್ರಾಮ’ವನ್ನು ಸ್ಫೂರ್ತಿಯ ಸ್ಥಳವಾಗಿ ರೂಪಿಸುವ ಯೋಜನೆ ಹೊಂದಿದ್ದೇವೆ.
-ಮಧು ಜಿ.ಮಾದೇಗೌಡ, ಶಾಸಕ ಹಾಗೂ ಅಧ್ಯಕ್ಷ, ಮಹಾತ್ಮ ಗಾಂಧಿ ಸ್ಮಾರಕ ಟ್ರಸ್ಟ್