ಮಾದಪ್ಪನ ಬೆಟ್ಟದಲ್ಲಿ ವೈಭವದ ಹಾಜ್ಯೋತಿ, ತೆಪ್ಪೋತ್ಸವ

KannadaprabhaNewsNetwork |  
Published : Nov 19, 2025, 12:45 AM IST
ಮಹಾಜ್ಯೋತಿ ಸಡಗರ | Kannada Prabha

ಸಾರಾಂಶ

ಹರಕೆ ಹೊತ್ತ ಭಕ್ತಾದಿಗಳು ಚಿನ್ನದ ತೇರು, ಬೆಳ್ಳಿ ತೇರು, ಹುಲಿವಾಹನ, ಬಸವ ವಾಹನ ಮತ್ತು ರುದ್ರಾಕ್ಷಿ ಮಂಟಪೋತ್ಸವ, ಮಲೆ ಮಹದೇಶ್ವರ ಸ್ವಾಮಿ ಉತ್ಸವ, ಮುಡಿಸೇವೆ, ಧೂಪದ ಸೇವೆ ಸಲ್ಲಿಸಿ ಮಾದಪ್ಪನಿಗೆ ಜೈಕಾರ ಕೂಗುತ್ತಿದ್ದುದು ಇಡೀ ಕ್ಷೇತ್ರದಲ್ಲಿ ಮಾರ್ದನಿಸುತ್ತಿತ್ತು.

ಕನ್ನಡಪ್ರಭ ವಾರ್ತೆ ಹನೂರು

ಮಲೆ ಮಹದೇಶ್ವರ ಬೆಟ್ಟದಲ್ಲಿ ಕಾರ್ತಿಕ ಮಾಸದ ಕಡೇ ಸೋಮವಾರದ ರಾತ್ರಿ ಮಹಾಜ್ಯೋತಿ ಸಡಗರ ಸಂಭ್ರಮದಿಂದ ಜರುಗಿತು. ರಾಜ್ಯ ಅಷ್ಟೇ ಅಲ್ಲದೇ ಹೊರ ರಾಜ್ಯಗಳಿಂದಲೂ ಭಕ್ತಸಾಗರ ಕ್ಷೇತ್ರಕ್ಕೆ ಹರಿದುಬಂದಿತ್ತು. ಕಾರ್ತಿಕ ಮಾಸದ ಕಡೇ ಸೋಮವಾರದಂದು ಕ್ಷೇತ್ರದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಸಾಲೂರು ಬೃಹನ್ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವದಲ್ಲಿ ಬೇಡಗಂಪಣ ಅರ್ಚಕರು ಮಲೆ ಮಹದೇಶ್ವರ ಸ್ವಾಮಿಗೆ ಬಿಲ್ವಪತ್ರೆ ಹಾಗೂ ರುದ್ರಾಭಿಷೇಕ ನೆರವೇರಿಸಿದರು.

ಹರಕೆ ಹೊತ್ತ ಭಕ್ತಾದಿಗಳು ಚಿನ್ನದ ತೇರು, ಬೆಳ್ಳಿ ತೇರು, ಹುಲಿವಾಹನ, ಬಸವ ವಾಹನ ಮತ್ತು ರುದ್ರಾಕ್ಷಿ ಮಂಟಪೋತ್ಸವ, ಮಲೆ ಮಹದೇಶ್ವರ ಸ್ವಾಮಿ ಉತ್ಸವ, ಮುಡಿಸೇವೆ, ಧೂಪದ ಸೇವೆ ಸಲ್ಲಿಸಿ ಮಾದಪ್ಪನಿಗೆ ಜೈಕಾರ ಕೂಗುತ್ತಿದ್ದುದು ಇಡೀ ಕ್ಷೇತ್ರದಲ್ಲಿ ಮಾರ್ದನಿಸುತ್ತಿತ್ತು.

ಮಾದಪ್ಪನ ಮಹಾಜ್ಯೋತಿ ಕಣ್ತುಂಬಿಕೊಂಡ ಭಕ್ತಗಣ:

ಕಡೇ ಕಾರ್ತಿಕ ಸೋಮವಾರದ ಪ್ರಯುಕ್ತ ಶ್ರೀಕ್ಷೇತ್ರ ಮಲೆಮಹದೇಶ್ವರ ಬೆಟ್ಟದಲ್ಲಿ ಮಹಾಜ್ಯೋತಿ ಬೆಳಗಿಸಲಾಯಿತು. ಆನೆ ತಲೆದಿಂಬ ಹಾಗೂ ನಾಗಮಲೆ ನಡುವಿನ ನಡುಮಲೆಯ ದೀಪದ ಒಡ್ಡಿನಲ್ಲಿ 9 ಬಗೆಯ ಕಟ್ಟಿಗೆಗಳಿಂದ ಹೋಮ ಮಾಡಿ, ದೇಗುಲದಿಂದ ಉತ್ಸವಮೂರ್ತಿಯನ್ನು ದೀಪದ ಗಿರಿ ಒಡ್ಡುವಿಗೆ ತಂದು ಪೂಜೆ ಸಲ್ಲಿಸಿ ಮಹಾಜ್ಯೋತಿಯನ್ನು ಬೆಳಗಲಾಯಿತು.ಮಹಾಜ್ಯೋತಿ ಬಗ್ಗೆ ಜಾನಪದ ಮಹಾಕಾವ್ಯದಲ್ಲಿ ಉತ್ತರ ದೇಶದಿಂದ ಕತ್ತಲ ನಾಡಿಗೆ ಬಂದ ಮಾದೇಶ್ವರ ನಡುಮಲೆಗೆ ಬಂದು ತಾನು ಐಕ್ಯವಾಗುವ ಸ್ಥಳ ಹಾಗೂ ಸುತ್ತಮುತ್ತಲಿನ ಪ್ರದೇಶವು ಕತ್ತಲಿನಿಂದ ಕೂಡಿರುವುದನ್ನು ಗಮನಿಸಿ ಮಹಾಜ್ಯೋತಿ ಬೆಳಗಿದರು ಎಂಬ ಪ್ರತೀತಿ ಇದೆ. ಹಾಗಾಗಿ, ಇಂದಿಗೂ ದೇವಾಲಯದ ಈಶಾನ್ಯ ದಿಕ್ಕಿನಲ್ಲಿ ಮಹಾಜ್ಯೋತಿ ಬೆಳಗಿಸುತ್ತ ಬರಲಾಗಿದೆ. ಮಹಾಜ್ಯೋತಿಯ ದರ್ಶನ ಪಡೆಯಲೆಂದೇ ಸಹಸ್ರಾರು ಮಂದಿ ಭಕ್ತರು ಕ್ಷೇತ್ರಕ್ಕೆ ಬಂದಿದ್ದರು.

ತೆಪ್ಪೋತ್ಸವಕ್ಕೆ ಸಾಕ್ಷಿಯಾದ ಭಕ್ತಸಮೂಹ:

ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ದೀಪದಗಿರಿ ಒಡ್ಡುವಿನಲ್ಲಿ ಮಹಾಜ್ಯೋತಿ ಬೆಳಗಿದ ನಂತರ ಮಹದೇಶ್ವರ ಸ್ವಾಮಿಯ ತೆಪ್ಪೋತ್ಸವ ವಿಜೃಂಭಣೆಯಿಂದ ನೆರವೇರಿತು. ಕಳೆದ 6 ವರ್ಷಗಳಿಂದ ದೊಡ್ಡ ಕಲ್ಯಾಣಿ ಕಾಮಗಾರಿ ಪ್ರಗತಿಯಲ್ಲಿತ್ತು. ಕಳೆದ, ದಸರಾದಿಂದ ತೆಪ್ಪೋತ್ಸವ ಮತ್ತೇ ನಡೆಯುತ್ತಿದ್ದು ಝಗಮಗಿಸುವ ಅಲಂಕಾರದಲ್ಲಿ ಮಹದೇಶ್ವರನ ತೆಪ್ಪೋತ್ಸವಕ್ಕೆ ಭಕ್ತಸಾಗರ ಸಾಕ್ಷಿಯಾದರು. ಮಲೆ ಮಹದೇಶ್ವರನಿಗೆ ಜಯಘೋಷ ಹಾಕುತ್ತಾ ಪ್ರಾರ್ಥನೆ ಸಲ್ಲಿಸಿದರು.ಪ್ರಾಧಿಕಾರದದಿಂದ ಸಕಲ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿತ್ತು. ಭಕ್ತರಿಗೆ ನಿರಂತರ ಪ್ರಸಾದದ ವ್ಯವಸ್ಥೆ, ಕುಡಿಯುವ ನೀರು- ಶೌಚಾಲಯ, ನೆರಳಿನ ವ್ಯವಸ್ಥೆ ಕಲ್ಪಿಸಿತ್ತು.

ಇದೇ ಸಂದರ್ಭದಲ್ಲಿ ಸಾಲೂರು ಬೃಹನ್ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ, ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಇ ರಘು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ಟಿ. ಕವಿತಾ ಹಾಗೂ ಕೊಳ್ಳೇಗಾಲ ವಿಭಾಗ ಡಿವೈಎಸ್ಪಿ ಧರ್ಮೇಂದರ್, ಉಪ ಕಾರ್ಯದರ್ಶಿ ಚಂದ್ರಶೇಖರ್ ಬೇಡಗಂಪಣ ಹಿರಿಯ ಅರ್ಚಕ ಮಾದೇಶ್, ಮುಖಂಡರಾದ ಮುರುಗ, ಪಾರುಪತ್ತೆಗಾರದ ಮಾದೇಶ್, ಸ್ವಾಮಿ, ಅರ್ಚಕರ ತಂಡ ಅಪಾರ ಸಂಖ್ಯೆಯ ಭಕ್ತಾದಿಗಳು ಉಪಸ್ಥಿತರಿದ್ದರು .

-----------------18ಸಿಎಚ್ಎನ್12 ಮತ್ತು13

ಹನೂರು ಮಲೆ ಮಹದೇಶ್ವರ ಬೆಟ್ಟದಲ್ಲಿ ಕಡೆ ಕಾರ್ತಿಕ ಮಾಸ ಮಹಾಜೋತಿ ಸಂಭ್ರಮಾಚರಣೆಯಿಂದ ಜರುಗಿತು.18ಸಿಎಚ್ಎನ್‌11 ಹನೂರು ಮಲೆ ಮಹದೇಶ್ವರ ಬೆಟ್ಟದಲ್ಲಿ ಕಡೆ ಕಾರ್ತಿಕ ಮಾಸದ ಪ್ರಯುಕ್ತ ದೊಡ್ಡ ಕೊಳದಲ್ಲಿ ತೇಪ್ಪೋತ್ಸವ ನಡೆಯಿತು.

PREV

Recommended Stories

ರಾಜ್ಯಾದ್ಯಂತ ಐಟಿ ಕ್ಲಸ್ಟರ್‌
ನೆಟ್ವರ್ಕ್ ಸಮಸ್ಯೆ: ಪೊನ್ನಾಚಿ ಗ್ರಾಮಸ್ಧರ ಪ್ರತಿಭಟನೆ