ಪ್ರತಿಭಟನೆಗೆ ಪೂರ್ವಾನುಮತಿ ಕಡ್ಡಾಯಕ್ಕೆ ವಿರೋಧ

KannadaprabhaNewsNetwork |  
Published : Nov 19, 2025, 12:45 AM IST
ಸಿಕೆಬಿ-6  ಪ್ರತಿಭಟನೆಗಳಿಗೆ ಪೂರ್ವಾನುಮತಿ ಅಗತ್ಯ ಎಂಬ ಜಿಲ್ಲಾಧಿಕಾರಿ ಸುತ್ತೋಲೆ ಹಿಂಪಡೆಯುವಂತೆ ಸಂಘಟನೆಗಳಿಂದ ಆಗ್ರಹಿಸಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ರಿಗೆ ಮನವಿ ಸಲ್ಲಿಸಲಾಯಿತು | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಇಗಾಗಲೆ ಅದೆಷ್ಟೋ ಜಿಲ್ಲಾದಿಕಾರಿಗಳು ಕೆಲಸ ಮಾಡಿ ಹೋಗಿದ್ದಾರೆ. ಅವರು ಯಾರೂ ಈ ರೀತಿಯ ಸುತ್ತೋಲೆಗಳನ್ನ ಹೊರಡಿಸಿಲ್ಲ. ಹೋರಾಟಗಳ ತವರು ಚಿಕ್ಕಬಳ್ಳಾಪುರ. ಜಿಲ್ಲೆಯಲ್ಲಿ ನಮ್ಮ ಜಿಲ್ಲಾಧಿಕಾರಿ ಯಾರದೋ ಮಾತುಗಳನ್ನ ಕೇಳಿ ಈ ತೀರ್ಮಾನ ತೆಗೆದುಕೊಂಡಿದ್ದಾರೆ. ಇದೊಂದು ಕರಾಳ ಸುತ್ತೋಲೆ. ಕೂಡಲೆ ಈ ಸುತ್ತೋಲೆಯನ್ನ ವಾಪಸ್‌ ಪಡೆಯಬೇಕು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ಮಾಡಬೇಕಾದರೆ ಸಂಬಂಧಪಟ್ಟ ಸಂಘಟನೆಗಳು ಹತ್ತು ದಿನಗಳ ಮೊದಲೇ ಅನುಮತಿ ಪಡೆಯಬೇಕೆಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಸುತ್ತೋಲೆ ಹೊರಡಿಸಿರುವುದು ಪ್ರಗತಿಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ.

ರಾಜ್ಯದ ಯಾವ ಜಿಲ್ಲೆಯಲ್ಲೂ ಈ ರೀತಿಯ ಕಟ್ಟಪ್ಪಣೆ ಮಾಡಿಲ್ಲ. ಇದು ಪ್ರಜಾಪ್ರಭುತ್ವದ ಕಗ್ಗೋಲೆ. ಈ ಆದೇಶವನ್ನ ಕೂಡಲೆ ಹಿಂಪಡೆಯಬೇಕೆಂದು ಒತ್ತಾಯಿಸಿ ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಶಾಶ್ವತ ನೀರಾವರಿ ಹೋರಾಟ ಸಮಿತಿ, ಪ್ರಗತಿಪರ, ದಲಿತ ಪರ, ರೈತ ಪರ, ಕನ್ನಡಪರ ಹಾಗು ಎಡಪಂತೀಯ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು.

ಹೋರಾಟ ಹತ್ತಿಕ್ಕುವ ಯತ್ನ

ಜಿಲ್ಲಾಧಿಕಾರಿ ಆದೇಶ ಪ್ರಜಾಪ್ರಭುತ್ವದ ಕಗ್ಗೊಲೆ. ಪ್ರತಿಭಟನೆಗೆ ಹತ್ತು ದಿನ ಮೊದಲೆ ಅನುಮತಿ ಪಡೆಯಬೇಕು ಅಂದ್ರೆ ಎಲ್ಲೂ ಈ ರೀತಿಯ ಆದೇಶ ಮಾಡಿರುವುದನ್ನು ನಾವು ನೋಡಿಲ್ಲ ಇದು ಹೋರಾಟಗಳನ್ನು ಹತ್ತಿಕ್ಕುವ ಹುನ್ನಾರ ನಡೆಯುತಿದೆ ಎಂದು ಎಡಪಕ್ಷಗಳ ಮುಖಂಡ ಎಂ.ಪಿ ಮುನಿವೆಂಕಟಪ್ಪ ಆಕ್ರೋಶ ಹೊರಹಾಕಿದರು.

ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಜಿಲ್ಲಾದ್ಯಕ್ಷ ಎಂ.ಆರ್.ಲೋಕೇಶ್ ಮಾತನಾಡಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇಗಾಗಲೆ ಅದೆಷ್ಟೋ ಜಿಲ್ಲಾದಿಕಾರಿಗಳು ಕೆಲಸ ಮಾಡಿ ಹೋಗಿದ್ದಾರೆ. ಅವರು ಯಾರೂ ಈ ರೀತಿಯ ಸುತ್ತೋಲೆಗಳನ್ನ ಹೊರಡಿಸಿಲ್ಲ. ಹೋರಾಟಗಳ ತವರು ಚಿಕ್ಕಬಳ್ಳಾಪುರ. ಜಿಲ್ಲೆಯಲ್ಲಿ ನಮ್ಮ ಜಿಲ್ಲಾಧಿಕಾರಿ ಯಾರದೋ ಮಾತುಗಳನ್ನ ಕೇಳಿ ಈ ತೀರ್ಮಾನ ತೆಗೆದುಕೊಂಡಿದ್ದಾರೆ. ಇದೊಂದು ಕರಾಳ ಸುತ್ತೋಲೆ. ಕೂಡಲೆ ಈ ಸುತ್ತೋಲೆಯನ್ನ ವಾಪಸ್‌ ಪಡೆಯಬೇಕೆಂದು ಒತ್ತಾಯಿಸಿದರು. ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದಜಿಲ್ಲಾಧಿಕಾರಿಗೆ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯರೆಡ್ಡಿ, ಹೋರಾಟಗಾರರ ಪರಿಸ್ಥಿತಿಯನ್ನ ವಿವರಿಸಿ ಹೇಳಿ ಜಿಲ್ಲೆಯ ಹೋರಾಟಗಾರರು ಕಾನೂನು ಚೌಟಕಟ್ಟನ್ನು ಮೀರಿ ಎಂದಿಗೂ ವರ್ತಿಸಿಲ್ಲ. ನಿಮ್ಮ ಆದೇಶ ಎಲ್ಲರ ಹಕ್ಕುಗಳನ್ನ ಕಸಿಯುವಂತಹ ತೀರ್ಮಾನವಾಗಿದೆ ಎಂದು ಮನವಿ ಸಲ್ಲಿಸಿದರು.

ಪೊಲೀಸ್‌ ಜತೆ ಚರ್ಚಿಸಿ ತೀರ್ಮಾನ

ಹೋರಾಟಗಾರರ ವಿಶ್ವಾಸ ಮತ್ತು ಮನವಿಯನ್ನ ಆಲಿಸಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಪೊಲೀಸರೊಂದಿಗೆ ಚರ್ಚಿಸಿ ಆದೇಶ ವಾಪಸ್ಸು ಪಡೆಯುವ ತೀರ್ಮಾನ ಮಾಡುತ್ತೇನೆಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ದಲಿತಪರ ಮುಖಂಡರಾದ ಸುಧಾವೆಂಕಟೇಶ್, ಗಂಗಾಧರ್, ಜಿ ಸಿ ವೆಂಕಟರವಣಪ್ಪ,ಕೆ ಸಿ ರಾಜಾಕಾಂತ್, ರಾಜ್ಯ ರೈತಸಂಘದ ಅಧ್ಯಕ್ಷ ಜಿಜೆಹಳ್ಳಿ ನಾರಾಯಣಸ್ವಾಮಿ,ಕನ್ನಡ ಸೇನೆ ವಿ.ರವಿಕುಮಾರ್, ಬಿ.ವಿ.ಆನಂದ್, ಕೆ ಪಿ ಆರ್ ಎಸ್ ಮುಖಂಡರು ಇದ್ದರು.

PREV

Recommended Stories

ರಾಜ್ಯಾದ್ಯಂತ ಐಟಿ ಕ್ಲಸ್ಟರ್‌
ನೆಟ್ವರ್ಕ್ ಸಮಸ್ಯೆ: ಪೊನ್ನಾಚಿ ಗ್ರಾಮಸ್ಧರ ಪ್ರತಿಭಟನೆ