ಅಶಕ್ತರಿಗೆ ಮನೆಗೆ ತೆರಳಿ ಆಧಾರ್ ಮಾಡಿಕೊಡಿ: ಎಡಿಸಿ ಸಾಜಿದ್ ಮುಲ್ಲಾ

KannadaprabhaNewsNetwork |  
Published : Feb 21, 2025, 11:48 PM IST
ಜಿಲ್ಲಾ ಮಟ್ಟದ ಆಧಾರ್ ಉಸ್ತುವಾರಿ ಸಮಿತಿ ಸಭೆ ನಡೆಯಿತು. | Kannada Prabha

ಸಾರಾಂಶ

ಪ್ರಸ್ತುತ ಸರ್ಕಾರದ ಹಲವು ಯೋಜನೆಗಳ ಆರ್ಥಿಕ ನೆರವು ಪಡೆಯಲು ಆಧಾರ್ ಸಂಖ್ಯೆ ಅಗತ್ಯವಾಗಿದೆ.

ಕಾರವಾರ: ಪ್ರಸ್ತುತ ಸರ್ಕಾರದ ಹಲವು ಯೋಜನೆಗಳ ಆರ್ಥಿಕ ನೆರವು ಪಡೆಯಲು ಆಧಾರ್ ಸಂಖ್ಯೆ ಅಗತ್ಯವಾಗಿದ್ದು, ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ಅಶಕ್ತರಾಗಿ ಹಾಸಿಗೆ ಪೀಡಿತರಾದವರು ಆಧಾರ್ ಕಾರ್ಡ್ ಇಲ್ಲದ ಕಾರಣ ಸರ್ಕಾರದ ಯಾವುದೇ ಯೋಜನೆಗಳಿಂದ ವಂಚಿತರಾಗದಂತೆ ತಡೆಯಲು, ಅವರ ಮನೆಗಳಿಗೆ ತೆರಳಿ ಆಧಾರ್ ಕಾರ್ಡ್ ಮಾಡಿಕೊಡಬೇಕು ಎಂದು ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ನಿರ್ದೇಶನ ನೀಡಿದರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಆಧಾರ್ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಚೆ ಇಲಾಖೆಯಲ್ಲಿ ಆಧಾರ್ ಕಾರ್ಡ್ ಮಾಡುವ ಸೌಲಭ್ಯವನ್ನು ಈಗಾಗಲೇ ಒದಗಿಸಲಾಗಿದ್ದು, ಇದಕ್ಕಾಗಿ ಪ್ರತ್ಯೇಕ ಕಿಟ್ ಗಳನ್ನು ನೀಡಲಾಗಿದೆ. ಅಂಚೆ ಇಲಾಖೆಯ ಸಿಬ್ಬಂದಿ ಅಂಚೆ ವಿತರಣೆಗೆ ಮನೆ ಮನೆಗೆ ಭೇಟಿ ನೀಡುತ್ತಿದ್ದು, ಅವರ ಮೂಲಕವೇ ಜಿಲ್ಲೆಯಲ್ಲಿ ಹಾಸಿಗೆ ಪೀಡಿತರಿಗೆ ಆಧಾರ್ ಕಾರ್ಡ್ ಮಾಡಿ ಕೊಡುವ ವ್ಯವಸ್ಥೆ ಮಾಡಬೇಕು ಎಂದರು.

ಜಿಲ್ಲೆಯಲ್ಲಿನ ಬ್ಯಾಂಕ್ ಗಳಲ್ಲಿ ಕೆಲವೇ ಶಾಖೆಗಳಲ್ಲಿ ಹೊಸ ಆಧಾರ್ ಕಾರ್ಡ್, ನವೀಕರಣ ಮತ್ತು ತಿದ್ದುಪಡಿ ಮಾಡುವ ಕಾರ್ಯವನ್ನು ಮಾಡುತ್ತಿದ್ದು, ಇವುಗಳ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿನ ಶಾಖೆಗಳಲ್ಲಿ ವಿಸ್ತರಿಸುವಂತೆ ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲೆಯಲ್ಲಿ 98,000ಕ್ಕೂ ಅಧಿಕ ಮೊಬೈಲ್ ಸಂಖ್ಯೆಗೆ ಆಧಾರ್ ಜೋಡಣೆ ಮಾಡುವ ಕಾರ್ಯವು ಬಾಕಿ ಇದ್ದು ಇವುಗಳಿಗೆ ಆಧಾರ್ ಜೋಡಣೆ ಮಾಡುವ ಕಾರ್ಯವನ್ನು ಶೀಘ್ರದಲ್ಲಿ ಮುಕ್ತಾಯಗೊಳಿಸುವಂತೆ ಹಾಗೂ ಆಧಾರ್ ಕಾರ್ಡ್‌ಗಳಲ್ಲಿ ಬರುವ ವಿವಿಧ ರೀತಿಯ ಸಮಸ್ಯೆಗಳನ್ನು ಕಾಲಮಿತಿಯಲ್ಲಿ ಬಗೆಹರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.ನೀಟ್ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಆಧಾರ್ ಕಾರ್ಡ್‌ನಲ್ಲಿನ ಸಮಸ್ಯೆಗಳಿದ್ದರೇ ನೇರವಾಗಿ ಆಧಾರ್ ಪೋರ್ಟ್ಲ್‌ನಲ್ಲಿ ಅವರೇ ಅಗತ್ಯ ದಾಖಲೆಗಳನ್ನು ನೀಡಿ, 10 ದಿನಗಳ ಒಳಗೆ ನವೀಕರಣಗೊಂಡ ಕಾರ್ಡ್ ಪಡೆಯಬಹುದಾಗಿದೆ ಎಂದರು.

ಜಿಪಂ ಉಪ ಕಾರ್ಯದರ್ಶಿ ನಾಗೇಶ ರಾಯ್ಕರ, ಲೀಡ್ ಬ್ಯಾಂಕ್ ವ್ಯವಸ್ಥಾಪಕಿ ಭಾರತಿ ವಸಂತ್, ಯುಐಡಿಎಐ ಬೆಂಗಳೂರು ಕೇಂದ್ರದ ಸಹಾಯಕ ವ್ಯವಸ್ಥಾಪಕ ಚೇತನ್, ಜಿಲ್ಲಾ ಆಧಾರ್ ಸಮಾಲೋಚಕ ಮಹಾಬಲೇಶ್ವರ ದೇಸಾಯಿ ಇದ್ದರು.

ಆಧಾರ್ ಕಾರ್ಡ್ ಅಪ್ ಡೇಟ್ ಮಾಡುವ ಕುರಿತಂತೆ ಆಧಾರ್ ಕೇಂದ್ರದಿಂದ ಮೊಬೈಲ್‌ಗಳಿಗೆ ಯಾವುದೇ ರೀತಿಯ ಲಿಂಕ್ ಸಂದೇಶಗಳನ್ನು ಕಳಹಿಸುವುದಿಲ್ಲ. ಸಾರ್ವಜನಿಕರು ತಮ್ಮ ಮೊಬೈಲ್‌ಗಳಿಗೆ ಇಂತಹ ಸಂದೇಶ ಬಂದರೆ ಯಾವುದೇ ಕಾರಣಕ್ಕೂ ಲಿಂಕ್‌ನ್ನು ಒತ್ತದಂತೆ ಎಚ್ಚರದಿಂದಿರಬೇಕು ಎನ್ನುತ್ತಾರೆ ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ.

PREV

Recommended Stories

ಹಿಂದೂ ಮಹಾಗಣಪತಿ ಮೂರ್ತಿಯ ವಿಸರ್ಜನೆ
ಪ್ಲಾನಿಂಗ್‌ ಆ್ಯಂಡ್ ಆರ್ಕಿಟೆಕ್ಚರ್‌ ಸ್ಕೂಲ್‌ ಆರಂಭಕ್ಕೆ ಸಿದ್ಧತೆ: ಡಿಕೆಶಿ