ಗೋವಾ- ಬೆಳಗಾವಿ ಅಂತಾರಾಜ್ಯ ರಸ್ತೆ ತುಂಬ ದೊಡ್ಡ ದೊಡ್ಡ ಹೊಂಡ!

KannadaprabhaNewsNetwork |  
Published : Oct 21, 2024, 12:31 AM IST
ಗೋವಾ ಬೆಳಗಾವಿ ರಸ್ತೆ ಹಾಳಾಗಿರುವುದು. | Kannada Prabha

ಸಾರಾಂಶ

ಬೆಳಗಾವಿಯಿಂದ ಬಂದ ಈ ರಸ್ತೆ ರಾಮನಗರ ಸಮೀಪಿಸುವಂತೆ ಕೆಸರುಗದ್ದೆಯಂತಾಗಿದೆ. ಅಸ್ತೋಲಿ ಸೇತುವೆ ಪೂರ್ಣಗೊಳ್ಳದ ಕಾರಣ ತಾತ್ಕಾಲಿಕ ರಸ್ತೆ ನೀರಿನ ಹಳ್ಳದಂತಾಗಿದ್ದು, ಯಾವ ಕಡೆ ಹೋಗಬೇಕೆಂಬುದೇ ತಿಳಿಯುವುದಿಲ್ಲ.

ಜೋಯಿಡಾ: ಅಬ್ಬಾ ಇದೇನ್ರಿ, ರಸ್ತೆನಾ ಅಥವಾ ಹೊಂಡನಾ?, ಯಾಕಾದರೂ ಈ ರಸ್ತೆಯಲ್ಲಿ ವಾಹನ ತೆಗೆದುಕೊಂಡು ಬಂದೆವಪ್ಪಾ?...

- ಇದು ಗೋವಾ- ಬೆಳಗಾವಿ ರಸ್ತೆಯಲ್ಲಿ ಪ್ರಯಾಣಿಸುವವರ ನಿತ್ಯದ ಮಾತುಗಳಿವು. ಹೌದು. ಗೋವಾ- ಬೆಳಗಾವಿ ಅಂತಾರಾಜ್ಯ ರಸ್ತೆಯು ಯಾರಿಗೂ ಬೇಡದ ಮಾರ್ಗವಾಗಿ ಮಾರ್ಪಟ್ಟಿದೆ. ಕಾರಣ ರಸ್ತೆಯಿಡಿ ಹೊಂಡಮಯವಾಗಿದೆ. ದೃಷ್ಟಿ ಹಾಯಿಸಿದ ಕಡೆ ಬರೀ ಗುಂಡಿಗಳೇ ಕಾಣುತ್ತವೆ. ಇದರಿಂದಾಗಿ ವಾಹನ ಸವಾರರು ಯಮಯಾತನೆಪಡುವಂತಾಗಿದೆ. ಅದರಲ್ಲೂ ಮಳೆ ಬಂದಾಗ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ. ಹೊಂಡಗಳು ನೀರಿನಿಂದ ಭರ್ತಿಯಾಗುತ್ತವೆ. ಇದರಿಂದ ವಾಹನ ಸವಾರರಿಗೆ ಹೊಂಡಗಳ ಆಳವೇ ಅರಿವಿಗೆ ಬರುವುದಿಲ್ಲ. ಹೀಗಾಗಿ ವಾಹನ ಸಂಚಾರ ಕ್ಲಿಷ್ಟಕರವಾಗಿ ಪರಿಣಮಿಸಿದೆ.

ಬೆಳಗಾವಿಯಿಂದ ಬಂದ ಈ ರಸ್ತೆ ರಾಮನಗರ ಸಮೀಪಿಸುವಂತೆ ಕೆಸರುಗದ್ದೆಯಂತಾಗಿದೆ. ಅಸ್ತೋಲಿ ಸೇತುವೆ ಪೂರ್ಣಗೊಳ್ಳದ ಕಾರಣ ತಾತ್ಕಾಲಿಕ ರಸ್ತೆ ನೀರಿನ ಹಳ್ಳದಂತಾಗಿದ್ದು, ಯಾವ ಕಡೆ ಹೋಗಬೇಕೆಂಬುದೇ ತಿಳಿಯುವುದಿಲ್ಲ. ಇಲ್ಲಿ ಸಿಕ್ಕಿಕೊಂಡ ವಾಹನಗಳು ಹಿಂದೆ ಮುಂದೆ ಹೋಗಲಾರದೆ ದಿನವಿಡಿ ರಸ್ತೆ ಬಂದಾಗುತ್ತದೆ. ಕ್ರೇನ್ ತಂದು ದಾರಿ ಮಾಡಿಕೊಡಬೇಕಾಗುತ್ತದೆ. ಈ ವೇಳೆಗೆ ಎರಡು ಕಡೆ ಸಾವಿರ ಸಾವಿರ ವಾಹನಗಳು ಸೇರಿರುತ್ತವೆ. ಇಂಥ ಸ್ಥಿತಿಯ ಅಂತಾರಾಜ್ಯ ರಸ್ತೆ ಇದಾಗಿದೆ.

ಅವಸರ ಇದ್ದವರು ಈ ರಸ್ತೆಯಲ್ಲಿ ಓಡಾಡಬಾರದು. ಈ ರಸ್ತೆ ದುರಸ್ತಿಗೆ ಯಾವ ಜನಪ್ರತಿನಿಧಿಗಳ ಮಾತು ಕಿವಿಗೆ ಹಾಕಿಕೊಳ್ಳದೆ ಯಾರ ಕೈಗೂ ಸಿಗುತ್ತಿಲ್ಲ. ಅಂತಾರಾಜ್ಯ ರಸ್ತೆಗೆ ಬಂದೊದಗಿದ ಪರಿಸ್ಥಿಯಿಂದಾಗಿ ಈ ರಸ್ತೆಗೆ ಹೊಂದಿಕೊಂಡಿರುವ ಹಳ್ಳಿ ಬರಲ್ಕೋಡ್, ಅಕೇತಿ, ಜಲಕಟ್ಟಿ, ಅಸ್ತೋಲಿ ಇನ್ನಿತರ ಗ್ರಾಮಗಳ ಗ್ರಾಮಸ್ಥರು ಸಮರ್ಪಕ ಸಾರಿಗೆ ಸಂಪರ್ಕ ಇಲ್ಲದೇ ಒದ್ದಾಡುತ್ತಿದ್ದಾರೆ. ಇದರಿಂದಾಗಿ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು ಹತ್ತಾರು ಕಿಮೀ ನಡೆಯಲಾರದೆ ಪರಿತಪಿಸುತ್ತಿದ್ದಾರೆ.

ಹೊಂಡಮಯ ರಸ್ತೆಯಿಂದಾಗಿ ಅಂತಾರಾಜ್ಯ ರಸ್ತೆ ಆದರೂ ಯಾರಿಗೂ ಬೇಡವಾದ ರಸ್ತೆ ಆಗಿದೆ. ತಾಲೂಕು ಆಡಳಿತದ ಹಿಡಿತವಿಲ್ಲ, ಉಸ್ತುವಾರಿ ಸಚಿವರು ಇತ್ತ ಲಕ್ಷ್ಯ ಹಾಕುತ್ತಿಲ್ಲ. ಸ್ಥಳೀಯರು ಕೂಗಿ ಕರೆದು ಧ್ವನಿ ಕಳೆದುಕೊಂಡಿದ್ದಾರೆ. ಜಿಲ್ಲಾಡಳಿತವಾದರೂ ಈ ರಸ್ತೆಯ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ ಎನ್ನುವುದು ಜನಸಾಮಾನ್ಯರ ಆಗ್ರಹವಾಗಿದೆ.

ಸಂಕಷ್ಟದಾಯಕ: ಗೋವಾ- ಬೆಳಗಾವಿ ರಸ್ತೆ ದುರಸ್ತಿಗೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ, ತಹಸೀಲ್ದಾರರಿಗೆ ಹೇಳಿಹೇಳಿ ಸಾಕಾಗಿದೆ. ಆದರೂ ಸ್ಪಂದಿಸುತ್ತಿಲ್ಲ. ರಸ್ತೆ ಸಂಚಾರ ದಿನದಿಂದ ದಿನಕ್ಕೆ ಮತ್ತಷ್ಟು ಸಂಕಷ್ಟದಾಯಕವಾಗುತ್ತಿದೆ. ಯಾರಿಗೆ ಸಮಸ್ಯೆ ಹೇಳಬೇಕು ಅನ್ನುವುದೇ ತೋಚುತ್ತಿಲ್ಲ ಎಂದು ರಾಮನಗರ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಾಜಿ ಗೋಸಾವಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!