- ವಾಲ್ಮೀಕಿ ಜಯಂತ್ಯುತ್ಸವ ಅಂಗವಾಗಿ ರಾಜ್ಯಮಟ್ಟದ ಮುಕ್ತ ವಾಲಿವಾಲ್ ಪಂದ್ಯಾವಳಿ
- - - - ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ 15 ತಂಡಗಳು ಟೂರ್ನಿಯಲ್ಲಿ ಭಾಗಿ- ದಾವಣಗೆರೆ ವಾಲಿಬಾಲ್ ಅಸೋಸಿಯೇಷನ್ ತಂಡಕ್ಕೆ ದ್ವಿತೀಯ ಸ್ಥಾನ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಸಾರ್ವಜನಿಕ ವಾಲ್ಮೀಕಿ ಜಯಂತ್ಯುತ್ಸವ ಸಮಿತಿ ಹಾಗೂ ಶ್ರೀ ವಾಲ್ಮೀಕಿ ಪ್ರತಿಷ್ಠಾನ ಆಶ್ರಯದಲ್ಲಿ 3ನೇ ವರ್ಷದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಅಂಗವಾಗಿ ಭಾನುವಾರ ಜಿಲ್ಲಾ ಕ್ರೀಡಾಂಗಣದಲ್ಲಿ ರೋಚಕ ರಾಜ್ಯಮಟ್ಟದ ಮುಕ್ತ ವಾಲಿವಾಲ್ ಪಂದ್ಯಾವಳಿಗಳು ಜರುಗಿದವು.ಟೂರ್ನಿಯ ಉದ್ದಕ್ಕೂ ಅದ್ವಿತೀಯ ಪ್ರದರ್ಶನ ನೀಡಿದ ಹುಬ್ಬಳ್ಳಿಯ ಸೌತ್ ವೆಸ್ಟರ್ನ್ ರೈಲ್ವೆ ತಂಡ ಮೊದಲ ಬಹುಮಾನ ಪಡೆಯಿತು. ಇದರೊಂದಿಗೆ ₹40 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ತಂಡ ತನ್ನದಾಗಿಸಿಕೊಂಡಿತು.
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ 15 ತಂಡಗಳು ಟೂರ್ನಿಯಲ್ಲಿ ಭಾಗವಹಿಸಿದ್ದವು. ರೋಚಕ ಕ್ಷಣಗಳಿಗೆ ಸಾಕ್ಷಿಯಾದ ಸೆಮಿಫೈನಲ್ ಪಂದ್ಯದಲ್ಲಿ ಜಿಲ್ಲೆಯ ಕೆರೆಬಿಳಚಿ ಹಾಗೂ ಹುಬ್ಬಳ್ಳಿಯ ರೈಲ್ವೆ ತಂಡದ ಆಟಗಾರರು ಕ್ರೀಡಾಸಕ್ತರ ಮೆಚ್ಚುಗೆಗೆ ಪಾತ್ರವಾದರು.ಅಂತಿಮವಾಗಿ ಕೆರೆಬಿಳಚಿ ತಂಡವನ್ನು ಮಣಿಸಿದ ಹುಬ್ಬಳ್ಳಿಯ ರೈಲ್ವೆ ತಂಡ ಫೈನಲ್ ತಲುಪಿತು. ಫೈನಲ್‌ನಲ್ಲಿ ಆತಿಥೇಯ ದಾವಣಗೆರೆ ತಂಡದ ವಿರುದ್ಧ ಹುಬ್ಬಳ್ಳಿಯ ಹುಡುಗರು ನಿರಾಯಾಸ ಜಯಗಳಿಸಿದರು. ಪರಾಭವಗೊಂಡ ದಾವಣಗೆರೆ ವಾಲಿಬಾಲ್ ಅಸೋಸಿಯೇಷನ್ ತಂಡ ದ್ವಿತೀಯ ಸ್ಥಾನದೊಂದಿಗೆ ₹30 ಸಾವಿರ ಮೊತ್ತದ ನಗದು ಬಹುಮಾನದೊಂದಿಗೆ ಆಕರ್ಷಕ ಟ್ರೋಫಿ ಪಡೆಯಿತು.
ಮೂರನೇ ಸ್ಥಾನಕ್ಕಾಗಿ ಕೆರೆಬಿಳಚಿ ಮತ್ತು ಹುಚ್ಚವ್ವನಹಳ್ಳಿ ತಂಡಗಳ ನಡುವೆ ನಡೆದ ಮತ್ತೊಂದು ರೋಚಕ ಪಂದ್ಯದಲ್ಲಿ ಕೆರೆಬಿಳಚಿ ತಂಡ 25 ಅಂಕ ಗಳಿಸಿದರೆ, ಹುಚ್ಚವ್ವನಹಳ್ಳಿ ತಂಡ 23 ಅಂಕ ಗಳಿಸಿ 4ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಕೆರೆಬಿಳಚಿ ತಂಡ ಮೂರನೇ ಸ್ಥಾನದೊಂದಿಗೆ ₹20 ಸಾವಿರ ನಗದು, ಟ್ರೋಫಿ ಸಾಧನೆಗೆ ಪಾತ್ರವಾಯಿತು. ಪಂದ್ಯಾವಳಿಯಲ್ಲಿ ಭಾಗವಹಿಸಿದ ಎಲ್ಲ ತಂಡಗಳಿಗೆ ಸಮಾಧಾನಕರ ಬಹುಮಾನವಾಗಿ ಪ್ರಶಸ್ತಿ ಪತ್ರ ನೀಡಲಾಯಿತು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕಾಂಗ್ರೆಸ್ ಮುಖಂಡ ಹೊದಿಗೆರೆ ರಮೇಶ್ ವಿಜೇತರಿಗೆ ಬಹುಮಾನ ವಿತರಿಸಿದರು. ಕೆಇಬಿ ಯೂನಿಯನ್ ಮುಖಂಡ ಜಯಣ್ಣ, ವಿಶ್ವಜಿತ್ ಬಿಂದು, ತರಕಾರಿ ಮಾರುಕಟ್ಟೆ ದಲ್ಲಾಲರ ಸಂಘದ ಅಧ್ಯಕ್ಷ ಎಸ್.ಎಂ. ತಿಪ್ಪೇಸ್ವಾಮಿ, ಹುಚ್ಚವ್ವನಹಳ್ಳಿ ಮಂಜುನಾಥ್ ಭಾಗವಹಿಸಿದ್ದರು.
ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಜಮಾಲ್ ಸಾಬ್ ಹಾಗೂ ಮಾರುತಿ ಪಂದ್ಯಾವಳಿಯ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಹಿರೇಕೋಗಲೂರು ಕುಮಾರ್, ಸಿದ್ದಯ್ಯನಕೋಟೆ ಅಂಜಿನಪ್ಪ, ಚಿಕ್ಕಮಲ್ಲನಹೊಳೆ ಚಿರಂಜೀವಿ, ಹೊನ್ನೂರು ವಸಂತ ಸೇರಿದಂತೆ ಸಮಿತಿ ಪದಾಧಿಕಾರಿಗಳು ಭಾಗವಹಿಸಿದ್ದರು.- - - -20ಕೆಡಿವಿಜಿ36ಃ:
ದಾವಣಗೆರೆಯಲ್ಲಿ ಸಾರ್ವಜನಿಕ ವಾಲ್ಮೀಕಿ ಜಯಂತ್ಯುತ್ಸವ ಅಂಗವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಮುಕ್ತ ವಾಲಿವಾಲ್ ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ಬಹುಮಾನ ವಿತರಿಸಲಾಯಿತು.